‘‘ಅಗ್ನಿಪಥ್’’ ವಿರುದ್ಧ ಪ್ರತಿಭಟನೆ: ವಿವಾದಕ್ಕೆ ಗ್ರಾಸವಾದ ತರಬೇತಿ ಕೇಂದ್ರಗಳು

Update: 2022-06-20 04:28 GMT

ಲಕ್ನೋ, ಜೂ. 19: ಕೇಂದ್ರ ಸರಕಾರದ ‘ಅಗ್ನಿಪಥ್’ಯೋಜನೆ ವಿರುದ್ಧ ಉತ್ತರಪ್ರದೇಶ, ಬಿಹಾರ್ ಹಾಗೂ ಇತರ ರಾಜ್ಯಗಳಲ್ಲಿ ಹಿಂಸಾತ್ಮಕ ಪ್ರತಿಭಟನೆ ಭುಗಿಲೆದ್ದ ಹಿನ್ನೆಲೆಯಲ್ಲಿ ಅಲ್ಲಿನ ತರಬೇತಿ ಕೇಂದ್ರಗಳು ವಿವಾದಕ್ಕೆ ಗ್ರಾಸವಾಗಿವೆ. 

ಕೇಂದ್ರ ಸರಕಾರದ ‘ಅಗ್ನಿಪಥ್’ಯೋಜನೆ ವಿರುದ್ಧ ಉತ್ತಪ್ರದೇಶ, ಬಿಹಾರ, ಹರ್ಯಾಣ, ತೆಲಂಗಾಣ ಸೇರಿದಂತೆ ಹಲವು  ರಾಜ್ಯಗಳಲ್ಲಿ ಈ ವಾರ ಹಿಂಸಾತ್ಮಕ ಪ್ರತಿಭಟನೆ ಭುಗಿಲೆದ್ದಿತ್ತು. 

ಈ ಪ್ರತಿಭಟನೆ ಸಂದರ್ಭ ಸಾರ್ವಜನಿಕ ಹಾಗೂ ಖಾಸಗಿ ಸೊತ್ತಿಗೆ ಹಾನಿ ಉಂಟು ಮಾಡಿದ ಆರೋಪಿಗಳು ಸೇನೆ ಸೇರಬೇಕೆಂಬ ಗುರಿ ಇರಿಸಿಕೊಂಡಿರುವ ಯುವ ಆಕಾಂಕ್ಷಿಗಳು. ‘ಅಗ್ನಿಪಥ್’ಯೋಜನೆಯ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಯ ಹಿನ್ನೆಲೆಯಲ್ಲಿ ಈ ತರಬೇತಿ ಕೇಂದ್ರಗಳು ಈಗ ವಿವಾದಕ್ಕೆ ಸಿಲುಕಿವೆ. 
ಹಿಂಸಾತ್ಮಕ ಪ್ರತಿಭಟನೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಕನಿಷ್ಠ 9 ತರಬೇತಿ ಕೇಂದ್ರಗಳ ಮಾಲಕರು/ಮ್ಯಾನೇಜರ್‌ಗಳನ್ನು ಉತ್ತರಪ್ರದೇಶದ ಅಲಿಗಢ ಪೊಲೀಸರು ಬಂಧಿಸಿದ್ದಾರೆ. ಯೋಜನೆ ವಿರುದ್ಧದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಬಿಹಾರದ ಪಾಟ್ನಾದ ಕೆಲವು ಪ್ರದೇಶಗಳ ತರಬೇತಿ ಕೇಂದ್ರಗಳ ವಿರುದ್ಧ ಕೂಡ ಪೊಲೀಸರು ಇದೇ ಆರೋಪ ಮಾಡಿದ್ದಾರೆ. 

‘‘ಲಿಖಿತ ಪರೀಕ್ಷೆಗಳಿಗೆ ನೆರವು ನೀಡುವ ಅಕಾಡೆಮಿಗಳು ವಿದ್ಯಾಥಿಗಳಿಗೆ ಪ್ರಚೋದನೆ ನೀಡಿವೆ ಎಂಬುದನ್ನು ನಾನು ನಂಬಲಾರೆ’’ ಎಂದು ಪಾಟ್ನಾ ಮೂಲದ ಹಿಂದ್ ಅಕಾಡೆಮಿಯ ನಿರ್ದೇಶಕ ರಾಜೇಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಹಿಂಸಾತ್ಮಕ ಪ್ರತಿಭಟನೆಯಲ್ಲಿ ತರಬೇತಿ ಕೇಂದ್ರಗಳ ಮಾಲಕರು/ಮ್ಯಾನೇಜರ್‌ಗಳ ಪಾತ್ರವನ್ನು ಉತ್ತರಪ್ರದೇಶದ ಆಗ್ರಾ ಪೊಲೀಸರು ತಳ್ಳಿ ಹಾಕಿದ್ದಾರೆ. 

‘ಅಗ್ನಿಪಥ್’ ಯೋಜನೆ ವಿರುದ್ಧ ಗುರುವಾರ ನಡೆದ ಹಿಂಸಾತ್ಮಕ ಪ್ರತಿಭಟನೆಗಳಿಂದ ಹೆಚ್ಚು ಬಾಧಿತವಾಗಿರುವ  ಆಗ್ರಾದ ನ್ಯೂ ಆಗ್ರಾ ಹಾಗೂ ಭಗವಾನ್ ಟಾಕೀಸ್ ಪ್ರದೇಶಗಳ ತರಬೇತಿ ಕೇಂದ್ರಗಳು ನಿರ್ಜನವಾಗಿವೆ. ಆಗ್ರಾದಲ್ಲಿರುವ ತರಬೇತಿ ಕೇಂದ್ರಗಳ ಮೇಲೆ ಸಂಪೂರ್ಣ ನಿಷೇಧ ಹೇರಿಲ್ಲ. 
ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮುಂದಿನ ಕನಿಷ್ಠ ಎರಡು ಮೂರು ದಿನಗಳ ಕಾಲ ತರಗತಿ ನಡೆಸದಂತೆ ತರಬೇತಿ ಕೇಂದ್ರಗಳಿಗೆ ಸಲಹೆ ನೀಡಲಾಗಿದೆ ಎಂದು ಹಿರಿಯ ಪೊಲೀಸ್ ಅಧೀಕ್ಷಕ (ಆಗ್ರಾ) ಸುಧೀರ್ ಕುಮಾರ್ ಸಿಂಗ್ ಅವರು ಶನಿವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ. 

ಉತ್ತರಪ್ರದೇಶದ ಅಲಿಗಢದ ವಿವಿಧ ಭಾಗಗಳಲ್ಲಿ ಕಳೆದ ವಾರ ಭುಗಿಲೆದ್ದ ಹಿಂಸಾತ್ಮಕ ಪ್ರತಿಭಟನೆಯೊಂದಿಗೆ ಸಂಬಂಧ ಹೊಂದಿದ ಹಿನ್ನೆಲೆಯಲ್ಲಿ ಪೊಲೀಸರು ದಾಖಲಿಸಿದ ಎಫ್‌ಐಆರ್‌ನಲ್ಲಿ 9 ತರಬೇತಿ ಕೇಂದ್ರಗಳ ಮಾಲಕರು/ಮ್ಯಾನೇಜರ್‌ಗಳನ್ನು ಹೆಸರಿಸಲಾಗಿದೆ. ಇಂತಹ ಕೇಂದ್ರಗಳ   9 ಮಂದಿಯನ್ನು ಇದುವರೆಗೆ ಬಂಧಿಸಲಾಗಿದೆ. ಇದರೊಂದಿಗೆ ಹಿಂಸಾಚಾರಕ್ಕೆ ಸಂಬಂಧಿಸಿ ಅಲಿಗಢ ಪೊಲೀಸರು ಬಂಧಿಸಿರುವ ಜನರ ಒಟ್ಟು ಸಂಖ್ಯೆ 80ಕ್ಕೆ ಏರಿಕೆಯಾಗಿದೆ ಎಂದು ಹಿರಿಯ ಪೊಲೀಸ್ ಅಧೀಕ್ಷಕ ಕಲಾನಿಧಿ ನೈಥಾನನಿ ತಿಳಿಸಿದ್ದಾರೆ. 

ಈ ತರಬೇತಿ ಕೇಂದ್ರಗಳ ಮಾಲಕರು/ಮ್ಯಾನೇಜರ್‌ಗಳು ಫೇಸ್‌ಬುಕ್, ವ್ಯಾಟ್ಸ್ ಆ್ಯಪ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಪ್ರಚೋದನಕಾರಿ ಸಂದೇಶಗಳನ್ನು ಶೇರ್ ಮಾಡಿದ್ದಾರೆ. ಇದು ಹಿಂಸಾಚಾರ ವ್ಯಾಪಿಸಲು ಕಾರಣವಾಗಿದೆ ಎಂದು ಪೊಲೀಸರು ಪ್ರತಿಪಾದಿಸಿದ್ದಾರೆ.
‘ಅಗ್ನಿಪಥ್’ ಯೋಜನೆಯ ವಿರುದ್ಧ ಹಿಂಸಾಚಾರದಲ್ಲಿ ತೊಡಗಲು ತರಬೇತಿ ಕೇಂದ್ರಗಳು ಪ್ರತಿಭಟನಕಾರಿಗೆ ಪ್ರಚೋದನೆ ನೀಡಿವೆ ಎಂದು ಬಿಹಾರ ಪಾಟ್ನಾದ ಪೊಲೀಸರು ಹಾಗೂ ಆಡಳಿತ ಆರೋಪಿಸಿದೆ. 

ಪಾಟ್ನಾ ನಗರ, ಸದಾರ್ ಪಾಟ್ನಾ ಹಾಗೂ ಮಸೌರ್ಹಿ-ಈ ಮೂರು ಉಪ ವಿಭಾಗದ ಮುಖ್ಯಸ್ಥರಾಗಿರುವ ಪೊಲೀಸ್ ಅಧೀಕ್ಷಕ ಪ್ರಮೋದ್ ಕುಮಾರ್ ಯಾದವ್, ‘‘ಮಸೌರಿ ಹೊರತುಪಡಿಸಿ ಉಳಿದ ಎರಡು ಉಪ ವಿಭಾಗಲ್ಲಿ ಹಿಂಸಾಚಾರ ಸಂಭವಿಸಿಲ್ಲ. ಹಿಂಸಾತ್ಮಕ ಪ್ರತಿಭಟನೆಯಲ್ಲಿ ತೊಡಗುವಂತೆ ತರಬೇತಿ ಕೇಂದ್ರಗಳು ಪ್ರಚೋದಿಸಿವೆ’’ ಎಂದಿದ್ದಾರೆ. 

ಆರಂಭಿಕ ಪ್ರತಿಭಟನೆ ತನ್ನಿಂದ ತಾನೇ ಹುಟ್ಟಿಕೊಡಿರುವಂತದ್ದು. ಆದರೆ, ಈಗ ಪ್ರತಿಭಟನೆ ಸಂಘಟಿತವಾಗಿ ನಡೆಯುತ್ತಿರುವಂತೆ ಕಾಣುತ್ತಿದೆ ಎಂದು ಪಾಟ್ನಾದ ಹಿರಿಯ ಪೊಲೀಸ್ ಅಧೀಕ್ಷಕ ಮಾನವಜಿತ್ ಸಿಂಗ್ ಧಿಲ್ಲಾನ್ ತಿಳಿಸಿದ್ದಾರೆ. 

ಪಾಟ್ನಾದಲ್ಲಿ ನಾವು ಇದುವರೆಗೆ 11 ಎಫ್‌ಐಆರ್‌ಗಳನ್ನು ದಾಖಲಿಸಿದ್ದೇವೆ. 145ಕ್ಕೂ ಅಧಿಕ ಮಂದಿಯನ್ನು ಬಂಧಿಸಿದ್ದೇವೆ. ಕ್ರಾಂತಿವೀರ್ ಹಾಗೂ ಅಗ್ನಿವೀರ್‌ನಂತಹ ವ್ಯಾಟ್ಸ್ ಆ್ಯಪ್ ಗುಂಪುಗಳನ್ನು ನಡೆಸುತ್ತಿರುವ ನಾಲ್ವರು ಗುಂಪು ಅಡ್ಮಿನಗಳನ್ನು ಬಂಧಿಸಿದ್ದೇವೆ ಎಂದು ದಿಲ್ಲಾನ್ ತಿಳಿಸಿದ್ದಾರೆ. 


‘‘ಅಗ್ನಿಪಥ್’’ ವಿರುದ್ಧ ರಾಜಸ್ಥಾನ ನಿರ್ಣಯ ಅಂಗೀಕಾರ   

 ಸಶಸ್ತ್ರ ಪಡೆಗಳಲ್ಲಿ ಅಲ್ಪಾವಧಿ ನೇಮಕಾತಿಗೆ ಕೇಂದ್ರದ ಯೋಜನೆ ‘ಅಗ್ನಿಪಥ್’ ಅನ್ನು ಹಿಂಪಡೆಯುವಂತೆ ಕೋರಿ ರಾಜಸ್ಥಾನ ಸರಕಾರ ಶನಿವಾರ ನಿರ್ಣಯ ಅಂಗೀಕರಿಸಿದೆ. 

‘ಅಗ್ನಿಪಥ್’ ಯೋಜನೆಯನ್ನು ಕೇಂದ್ರ ಸರಕಾರ ಮಂಗಳವಾರ ಘೋಷಿಸಿತ್ತು. ಇದನ್ನು ವಿರೋಧಿಸಿ ಶಸಸ್ತ್ರ ಪಡೆಗಳ ಹುದ್ದೆಗಳ ಆಕಾಂಕ್ಷಿಗಳು  ಬುಧವಾರದಿಂದ ಪ್ರತಿಭಟನೆ ಆರಂಭಿಸಿದ್ದಾರೆ. ಈ ಪ್ರತಿಭಟನೆ ಹಲವು ಸ್ಥಳಗಳಲ್ಲಿ ಹಿಂಸಾಚಾರಕ್ಕೆ ತಿರುಗಿದೆ. 

ನಿಯಮಿತ ಪ್ರಕ್ರಿಯೆ ಅಡಿಯಲ್ಲಿ ಖಾಯಂ ನೇಮಕಾತಿ, ಅಲ್ಲದೆ, ‘ಅಗ್ನಿಪಥ್’ ಯೋಜನೆಯ ಭಾಗವಲ್ಲದ ನಿವೃತ್ತಿ ಹಾಗೂ ಪಿಂಚಣಿ ಸೌಲಭ್ಯ ನೀಡುವಂತೆ ಪ್ರತಿಭಟನಕಾರರು ಆಗ್ರಹಿಸಿದ್ದಾರೆ.  

‘ಅಗ್ನಿಪಥ್’ ಯೋಜನೆ ಯುವ ಜನರ ಭವಿಷ್ಯವನ್ನು ರಕ್ಷಿಸುವುದೂ ಇಲ್ಲ, ಸಶಸ್ತ್ರ ಪಡೆಗಳು ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸಲು ಸಹಾಯ ಮಾಡುವುದೂ ಇಲ್ಲ ಎಂದು ಹಲವು ರಕ್ಷಣಾ ತಜ್ಞರು ಭಾವಿಸಿದ್ದಾರೆ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಶನಿವಾರ ಹೇಳಿದ್ದಾರೆ. 

‘‘ಶಸಸ್ತ್ರ ಪಡೆಗಳಿಗೆ ನಿಯಮಿತ ನೇಮಕಾತಿ ಮಾಡಬೇಕು ಹಾಗೂ ರಕ್ಷಣಾ ಸಿಬ್ಬಂದಿ ಎಲ್ಲ ಸೌಲಭ್ಯಗಳನ್ನು ಪಡೆಯಬೇಕು. ಆ ಮೂಲಕ ಅವರು ತಮ್ಮ ಹಾಗೂ ತಮ್ಮ ಕುಟುಂಬದ ಭವಿಷ್ಯವನ್ನು ಭದ್ರಪಡಿಸಲು ಸಾಧ್ಯ ಎಂದು ತಜ್ಞರು ಹೇಳಿದ್ದಾರೆ’’ ಎಂದು ಅವರು ತಿಳಿಸಿದ್ದಾರೆ. 
ಇಂತಹ ಯೋಜನೆಗಳನ್ನು ಪರಿಚಯಿಸುವ ಮೊದಲು ಕೇಂದ್ರ ಸರಕಾರ ಸಂಬಂಧಿತ ಎಲ್ಲರೊಂದಿಗೆ ವ್ಯಾಪಕ ಚರ್ಚೆ ನಡೆಸಬೇಕಿತ್ತು ಎಂದು ಗೆಹ್ಲೋಟ್ ಹೇಳಿದ್ದಾರೆ. 
‘‘ಯುವ ಜನರ ಭಾವನೆಗಳು ಹಾಗೂ ವ್ಯಾಪಕ ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿ ಇರಿಸಿಕೊಂಡು ಅಗ್ನಿಪಥ್ ಯೋಜನೆಯನ್ನು ಹಿಂಪಡೆಯಬೇಕೆಂದು ರಾಜ್ಯ ಸಂಪುಟ ಸಚಿವರು ಸರ್ವಸಮ್ಮತವಾಗಿ  ನಿರ್ಣಯ ಅಂಗೀಕರಿಸಿದ್ದಾರೆ’’ ಎಂದು ಗೆಹ್ಲೋಟ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News