ಬೆಂಗಳೂರು: 'ಬೇಸ್' ವಿವಿ ಕ್ಯಾಂಪಸ್ ಲೋಕಾರ್ಪಣೆ ಮಾಡಿದ ಮೋದಿ

Update: 2022-06-20 12:30 GMT

ಬೆಂಗಳೂರು: ಇಲ್ಲಿನ ಜ್ಞಾನಭಾರತಿ ಆವರಣದಲ್ಲಿರುವ `ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿಶ್ವವಿದ್ಯಾಲಯ’ದ (ಬೇಸ್) ನೂತನ ಕ್ಯಾಂಪಸ್ಸನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಸೋಮವಾರ ಉದ್ಘಾಟಿಸಿದರು.

ಕೊಮ್ಮಘಟ್ಟದಿಂದ ನೇರವಾಗಿ `ಬೇಸ್’ ಕ್ಯಾಂಪಸ್ ತಲುಪಿದ ಪ್ರಧಾನಿಗಳನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ  ಬರಮಾಡಿಕೊಂಡರು. ಬಳಿಕ ಪ್ರಧಾನಿ ಮೋದಿ ಅವರು ಮೊದಲಿಗೆ, `ಬೇಸ್’ ಆವರಣದಲ್ಲಿ ಪ್ರತಿಷ್ಠಾಪಿಸಿರುವ 22 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದರು. 

ಇದಾದ ಬಳಿಕ `ಬೇಸ್’ ಕ್ಯಾಂಪಸ್ಸಿನ ಆಡಳಿತ ವಿಭಾಗಕ್ಕೆ ತೆರಳಿದ ಅವರು, 250 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ 13 ಬ್ಲಾಕ್ ಗಳನ್ನು ಲೋಕಾರ್ಪಣೆ ಮಾಡಿದರು. ಅಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು `ಬೇಸ್’ ಪರಿವಾರದ ಪರವಾಗಿ ಅಂಬೇಡ್ಕರರ ಚಿಕ್ಕ ಪ್ರತಿಮೆಯನ್ನು ಪ್ರಧಾನಿಗೆ ಉಡುಗೊರೆಯಾಗಿ ಕೊಟ್ಟರು. 

ರಾಜ್ಯ ಸರಕಾರವು ಟಾಟಾ ಸಮೂಹದ ನೆರವಿನೊಂದಿಗೆ 4,736 ಕೋಟಿ ರೂ. ವೆಚ್ಚದಲ್ಲಿ ಉನ್ನತೀಕರಿಸಿರುವ 150 ಸರಕಾರಿ ಐಟಿಐಗಳನ್ನು ರಾಜ್ಯಕ್ಕೆ ಸಮರ್ಪಿಸಿದರು. 

ವಿದ್ಯಾರ್ಥಿಗಳ ಬಳಿ ಪ್ರಧಾನಿ ಮೋದಿ ಐದಾರು ನಿಮಿಷ ಕಳೆದು, ಶೈಕ್ಷಣಿಕ ಪ್ರಗತಿಯ ಬಗ್ಗೆ ವಿಚಾರಿಸಿದರು.

ಅರ್ಥಶಾಸ್ತ್ರ ಮತ್ತು ಸಮಾಜವಿಜ್ಞಾನಗಳ ಉನ್ನತಾಧ್ಯಯನಕ್ಕೆ ಮೀಸಲಾಗಿರುವ `ಬೇಸ್’ ವಿ.ವಿ.ಯಲ್ಲಿ ಇನ್ನು ಮೂರು ವರ್ಷಗಳಲ್ಲಿ 1,100 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಲಭ್ಯವಾಗಲಿದೆ. ಹಾಗೆಯೇ, ಮೇಲ್ದರ್ಜೆಗೇರಿಸಿರುವ ಐಟಿಐಗಳಿಂದ 1.70 ಲಕ್ಷ ವಿದ್ಯಾರ್ಥಿಗಳಿಗೆ ಲಾಭವಾಗಲಿದೆ. 

ಈ ಸಂದರ್ಭದಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋತ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ, ಸಚಿವರಾದ ಸೋಮಣ್ಣ, ಶ್ರೀನಿವಾಸ ಪೂಜಾರಿ, ಸುನೀಲ್ ಕುಮಾರ್, ಶ್ರೀರಾಮುಲು, ಕುಲಪತಿ ಡಾ.ಭಾನುಮೂರ್ತಿ, ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ, ಕೌಶಲ್ಯಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News