ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವ ಪಕ್ಷವನ್ನು ಅಧಿಕಾರದಿಂದ ದೂರವಿಡೋಣ: ಪ್ರೊ.ರಾಮ್ ಪುನಿಯಾನಿ

Update: 2022-06-21 06:02 GMT

ಬೆಂಗಳೂರು, ಜೂ.21: ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವ ಪಕ್ಷವನ್ನು ಅಧಿಕಾರದಿಂದ ದೂರವಿಡಲು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಖ್ಯಾತ ಇತಿಹಾಸ ತಜ್ಞ, ಸಾಮಾಜಿಕ ಕಾರ್ಯಕರ್ತ ಪ್ರೊ.ರಾಮ್ ಪುನಿಯಾನಿ ಹೇಳಿದ್ದಾರೆ.

ಅವರು ಬೆಂಗಳೂರಿನಲ್ಲಿ ಅಸೋಸಿಯೇಶನ್ ​​ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (ಎಪಿಸಿಆರ್) ವತಿಯಿಂದ ಇಂಡಿಯನ್ ಸೋಶಿಯಲ್ ಇನ್ ಸ್ಟಿಟ್ಯೂಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಕಾನೂನು ಕಾರ್ಯಾಗಾರವನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಇಂದು ಮುಸ್ಲಿಮರು ಎಷ್ಟು ಬೆದರಿಕೆಯನ್ನು ಅನುಭವಿಸುತ್ತಿದ್ದಾರೆಯೋ, ಹಾಗೆಯೇ ನಮ್ಮಂತಹ ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳಲ್ಲಿ ನಂಬಿಕೆಯುಳ್ಳವರು ಸಹ ಬೆದರಿಕೆಯನ್ನು ಅನುಭವಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಎಪಿಸಿಆರ್ ರಾಷ್ಟ್ರೀಯ ಕಾರ್ಯದರ್ಶಿ ನದೀಮ್ ಖಾನ್  ರಾಜ್ಯದ ಬೇರೆ ಬೇರೆ ಜಿಲ್ಲೆ ಯಿಂದ ಆಗಮಿಸಿದ್ದ ಎಪಿಸಿಆರ್ ಕಾರ್ಯಕರ್ತರಿಗೆ ಎಪಿಸಿಆರ್ ನ ಉದ್ದೇಶ ಮತ್ತು ಕಾರ್ಯಚಟುವಟಿಕೆಗಳನ್ನು ಪರಿಚಯಿಸಿದರು.

ಎಪಿಸಿಆರ್ ಕರ್ನಾಟಕ ಚಾಪ್ಟರ್ ನ ಧರ್ಮದರ್ಶಿ ಮೌಲಾನಾ ಮುಹಮ್ಮದ್ ಯೂಸುಫ್ ಕಣ್ಣಿ ಮಾತನಾಡಿ, ಎಪಿಸಿಆರ್ ಗೆ ಹಾಕಿರುವ ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.

ಎಪಿಸಿಆರ್ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ಕರ್ನಾಟಕ ಘಟಕದ ಅಧ್ಯಕ್ಷ ನ್ಯಾಯವಾದಿ ಪಿ.ಉಸ್ಮಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಎಪಿಸಿಆರ್ ಕಾರ್ಯಕರ್ತರು ತಮ್ಮ ವ್ಯಾಪ್ತಿಯಲ್ಲಿ ನಡೆದಿರುವ ಚಟುವಟಿಕೆಗಳ ವರದಿಯನ್ನು ಮಂಡಿಸಿದರು.

ಎಪಿಸಿಆರ್ ರಾಜ್ಯ ಸಂಯೋಜಕ ಶೇಖ್ ಶಫಿ ಅಹ್ಮದ್ ರಾಜ್ಯ ಎಪಿಸಿಆರ್ ನಡೆಸುತ್ತಿರುವ ಚಟುವಟಿಕೆಗಳ ವರದಿ  ಮಂಡಿಸಿದರು.

ಫೋರಂ ಫಾರ್ ಡೆಮಾಕ್ರಸಿ ಆ್ಯಂಡ್ ನ್ಯಾಶನಲ್ ಅಮಿಟಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರೊ.ಸಲೀಂ ಇಂಜಿನಿಯರ್, ಜಮಾಅತೆ ಇಸ್ಲಾಮಿ ಹಿಂದ್, ಕರ್ನಾಟಕ ಅಧ್ಯಕ್ಷ ಡಾ.ಸಾದ್ ಬೆಳಗಾಮಿ, ಎಪಿಸಿಆರ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಲಿಕ್ ಮೋತೆಸಂ ಅಭಿಪ್ರಾಯ ವ್ಯಕ್ತಪಡಿಸಿದರು.

ಹಸನ್ ಮುಜಾಹಿದ್ ಕಿರಾಅತ್ ಪಠಿಸಿದರು. ಎಪಿಸಿಆರ್ ಕರ್ನಾಟಕ ಘಟಕದ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಮುಹಮ್ಮದ್ ನಿಯಾಝ್ ಸ್ವಾಗತಿಸಿದರು. ವಕೀಲ ಅಮೀನ್ ಎಹ್ಸಾನ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News