ಬೆಂಗಳೂರು: ಪ್ರಧಾನಿ ಮೋದಿ ಬಂದುಹೋದ 4 ತಾಸಿಗೆ 23 ಕೋಟಿ ಖರ್ಚು?

Update: 2022-06-21 15:07 GMT

ಬೆಂಗಳೂರು, ಜೂ.21: ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸಿದ್ದ ಸಂದರ್ಭದಲ್ಲಿ ಬಿಬಿಎಂಪಿ 23 ಕೋಟಿ ಖರ್ಚು ಮಾಡಿದ್ದು, ಇದು ಪ್ರತಿ ನಿಮಿಷಕ್ಕೆ 5 ಲಕ್ಷದ 18 ಸಾವಿರದ 518 ರೂಪಾಯಿ ಆಗಿದೆ ಎಂದು ಅಂದಾಜಿಸಲಾಗಿದೆ.

ಸೋಮವಾರ ಮಧ್ಯಾಹ್ನ ವೇಳೆಗೆ ಬೆಂಗಳೂರಿಗೆ ಆಗಮಿಸಿದ ನರೇಂದ್ರ ಮೋದಿ, ಸತತ ನಾಲ್ಕು ಗಂಟೆಗಳ ಸರಕಾರದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಜತೆಗೆ, ಹಲವು ಕಡೆ ರೋಡ್ ಶೋ ನಡೆಸಿ ಬಿಜೆಪಿ ಕಾರ್ಯಕರ್ತರನ್ನು ಭೇಟಿ ಮಾಡಿದರು. 

ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಸಂಚರಿಸಿದ ನಗರದ 14 ಕಿ.ಮೀ. ರಸ್ತೆಯಲ್ಲಿ ಡಾಂಬರೀಕರಣ, ಪಾದಚಾರಿ ಸ್ಲ್ಯಾಬ್, ಬೀದಿದೀಪ, ಮರಗಳ ರೆಂಬೆಗಳಿಗೆ ಟ್ರಿಮ್, ಚರಂಡಿ ಸ್ವಚ್ಛತೆ ಸೇರಿದಂತೆ ಬಿಬಿಎಂಪಿ ಒಟ್ಟು ಸುಮಾರು 23 ಕೋಟಿ ರೂ. ಖರ್ಚು ಮಾಡಿದೆ ಎನ್ನಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಬಿಬಿಎಂಪಿ ವಿಶೇಷ ಆಯುಕ್ತ ರವೀಂದ್ರ, ಇದು ಮುಖ್ಯ ಆಯುಕ್ತರ ವಿವೇಚನಾ ಅನುದಾನದಡಿಯಲ್ಲಿ ಹಣ ಖರ್ಚಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಧಾನಿ ವಿಮಾನ ನಿಲ್ದಾಣದಿಂದ ಬರುವ ರಸ್ತೆಗಳನ್ನು ದುರಸ್ತಿ ಮಾಡಲಾಗಿದ್ದು, ಡಾಂಬರೀಕರಣಕ್ಕೆ 14 ಕೋಟಿ ವ್ಯಯಿಸಿದೆ. ಗುಂಡಿ ಹೊಂಡಗಳನ್ನು ತುಂಬಿ ಬಣ್ಣ ಬಳಿಯಲಾಗಿತ್ತು. ಇದಲ್ಲದೇ ಮೋದಿ ಕಾರ್ಯಕ್ರಮವಿದ್ದ ಕೊಮ್ಮಘಟ್ಟ ರಸ್ತೆಯ ಇಕ್ಕೆಲಗಳನ್ನು ಸ್ವಚ್ಛಗೊಳಿಸಿ ರಸ್ತೆ ದುರಸ್ತಿ ಮಾಡಿ ಮೋದಿ ಕಾರ್ಯಕ್ರಮಕ್ಕೆ ನಗರ ಕಂಗೊಳಿಸುವಂತೆ ಮಾಡಲು 9 ಕೋಟಿ ಹಣವನ್ನು ಬಿಬಿಎಂಪಿ ಖರ್ಚು ಮಾಡಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

ಪ್ರಧಾನಿ ಮೋದಿ ಬೆಂಗಳೂರಿನಲ್ಲಿದ್ದ 4 ಗಂಟೆಗೆ ಬಿಬಿಎಂಪಿ ಖರ್ಚು ಮಾಡಿದ ಹಣವನ್ನು ಲೆಕ್ಕ ಹಾಕುವುದಾದರೆ ಪ್ರತಿ ನಿಮಿಷಕ್ಕೆ ಪಾಲಿಕೆ 5 ಲಕ್ಷದ 18 ಸಾವಿರದ 518 ರೂಪಾಯಿ ಖರ್ಚು ಮಾಡಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News