ಬಲಿಯಾಗದಿರಲಿ ಆದಿವಾಸಿಗಳ ‘ಹೆಬ್ಬೆರಳು’

Update: 2022-06-23 03:41 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ರಾಷ್ಟ್ರಪತಿ ಚುನಾವಣೆ ಈ ಬಾರಿಯೂ ಅಭ್ಯರ್ಥಿಗಳ ಕಾರಣದಿಂದಲೇ ಹೆಚ್ಚು ಸುದ್ದಿಯಲ್ಲಿದೆ. ಆದಿವಾಸಿ ಸಮುದಾಯಕ್ಕೆ ಸೇರಿದ ದ್ರೌಪದಿ ಮುರ್ಮು ಅವರನ್ನು ಬಿಜೆಪಿ ನೇತೃತ್ವದ ಎನ್‌ಡಿಎ ಕಣಕ್ಕಿಳಿಸಿದ್ದರೆ, ಪ್ರತಿಪಕ್ಷಗಳು ಒಮ್ಮತ ಅಭ್ಯರ್ಥಿಯಾಗಿ ಮಾಜಿ ಬಿಜೆಪಿ ಮುಖಂಡರಾಗಿದ್ದ, ಹಿರಿಯ ಮುತ್ಸದ್ದಿ ಯಶವಂತ ಸಿನ್ಹಾ ಅವರನ್ನು ಹೆಸರಿಸಿದೆ. ದ್ರೌಪದಿ ಮುರ್ಮು ಅವರು ರಾಷ್ಟ್ರಪತಿಯಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಈ ಮೂಲಕ, ಹಿಂದುಳಿದ, ಆದಿವಾಸಿ ಸಮುದಾಯಕ್ಕೆ ಸೇರಿದ ಮಹಿಳೆಯೊಬ್ಬರನ್ನು ರಾಷ್ಟ್ರಪತಿಯಾಗಿಸಿದ ಹೆಗ್ಗಳಿಕೆಯನ್ನು ಬಿಜೆಪಿ ತನ್ನದಾಗಿಸಿಕೊಳ್ಳಲಿದೆ. ಮುಂಬರುವ ಚತ್ತೀಸ್‌ಗಡ ಮತ್ತು ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಈ ಆಯ್ಕೆಯನ್ನು ಮಾಡಲಾಗಿದೆ ಎನ್ನಲಾಗುತ್ತಿದೆಯಾದರೂ, ಚುನಾವಣೆಯಾಚೆಗೂ ಕೆಲವು ರಾಜಕೀಯ ಉದ್ದೇಶಗಳನ್ನು ಈ ಆಯ್ಕೆ ಹೊಂದಿದೆ. ರಾಷ್ಟ್ರಪತಿ ಗಾದಿಯನ್ನು ಈ ದೇಶದ ಅತ್ಯುನ್ನತ ಸ್ಥಾನವೆಂದು ಭಾವಿಸಲಾಗಿದೆ. ಮನೆಯ ಅತಿ ಹಿರಿಯ ವ್ಯಕ್ತಿ, ಎಲ್ಲರಿಂದಲೂ ಗೌರವವನ್ನು ಪಡೆಯುತ್ತಾನೆ ಎಂದ ಮಾತ್ರಕ್ಕೆ, ಮನೆಯ ಅಧಿಕಾರ ಅವನ ಕೈಯಲ್ಲಿರಬೇಕು ಎಂದೇನಿಲ್ಲ. ಮನೆ ಸದಸ್ಯರನ್ನು ಸದಾ ‘ಆಶೀರ್ವದಿಸುವುದು’ ಅವನ ಹೊಣೆಗಾರಿಕೆ.

ಲೋಕಸಭೆಯ ನಿರ್ಧಾರಗಳಿಗೆ ತಲೆದೂಗುವುದಷ್ಟೇ ರಾಷ್ಟ್ರಪತಿಯ ಕರ್ತವ್ಯ ಎನ್ನುವುದನ್ನು ಜನರೂ ಒಪ್ಪಿಕೊಂಡು ಬಿಟ್ಟಿದ್ದಾರೆ. ‘ರಬ್ಬರ್ ಸ್ಟಾಂಪ್’ ಎನ್ನುವ ಅನಧಿಕೃತ ನಾಮಕರಣವನ್ನು ಕೂಡ ರಾಷ್ಟ್ರಪತಿ ಹುದ್ದೆಗೆ ಆರೋಪಿಸಲಾಗಿದೆ. ಇವೆಲ್ಲದರ ನಡುವೆಯೂ, ತುಳಿತಕ್ಕೊಳಗಾದ, ಹಿಂದುಳಿದ ವರ್ಗದ ಒಬ್ಬ ಮಹಿಳೆ ಈ ‘ಆಶೀರ್ವದಿಸುವ’ ಅತ್ಯುನ್ನತ ಸ್ಥಾನಕ್ಕೆ ಏರಲಿದ್ದಾರೆ ಎನ್ನುವುದು, ವರ್ಣವ್ಯವಸ್ಥೆಯ ತಳಹದಿಯ ಮೇಲೆ ನಿಂತಿರುವ ಭಾರತೀಯ ಸಮಾಜಕ್ಕೆ ಸಣ್ಣ ವಿಷಯವೇನೂ ಅಲ್ಲ. ಮುರ್ಮು ಅವರು ಈ ದೇಶದ ರಾಷ್ಟ್ರಪತಿಯಾಗಿ ಆಯ್ಕೆಯಾದರೆ ಅದುವೇ ‘ಪ್ರಜಾಸತ್ತೆಯ ಸೌಂದರ್ಯ’. ಈ ಹಿಂದೆ ದಲಿತ ಸಮುದಾಯದಿಂದ ಬಂದ ರಾಮನಾಥ್ ಕೋವಿಂದ್‌ರನ್ನು ರಾಷ್ಟ್ರಪತಿಯಾಗಿ ಆಯ್ಕೆ ಮಾಡಿದ ಬಿಜೆಪಿ, ಇದೀಗ ಮುರ್ಮು ಅವರನ್ನು ಆ ಸ್ಥಾನದಲ್ಲಿ ತಂದು ಕೂರಿಸಿರುವುದು ಅದರ ರಾಜಕೀಯ ಮುತ್ಸದ್ದಿತನಕ್ಕೆ ಸಾಕ್ಷಿ.

ಮುರ್ಮು ಆದಿವಾಸಿ ಸಮುದಾಯವನ್ನು ಪ್ರತಿನಿಧಿಸಿ ದೇಶದ ಅತ್ಯುನ್ನತ ಸ್ಥಾನಕ್ಕೆ ಆಯ್ಕೆಯಾಗಲಿದ್ದಾರೆ ಎನ್ನುವುದು ದೇಶದ ಪಾಲಿಗೆ, ಸಂವಿಧಾನದ ಪಾಲಿಗೆ ಸಂತೋಷದ ವಿಷಯ. ಆದರೆ ಆರೆಸ್ಸೆಸ್ ಮತ್ತು ಸಂಘಪರಿವಾರದ ಮುಖವಾಣಿಯಾಗಿರುವ ಬಿಜೆಪಿ ಮುರ್ಮು ಅವರನ್ನು ಅಂತಹದೊಂದು ಹುದ್ದೆಗೆ ಆಯ್ಕೆ ಮಾಡುವಾಗ, ಅವರ ಹೆಬ್ಬೆರಳನ್ನು ಕತ್ತರಿಸಿಕೊಳ್ಳುತ್ತದೆ ಎನ್ನುವ ಅರಿವು ನಮಗಿರಬೇಕಾಗುತ್ತದೆ. ರಾಮನಾಥ್ ಕೋವಿಂದ್ ಅಥವಾ ಈಗ ಮುರ್ಮು ರಾಷ್ಟ್ರಪತಿಯಂತಹ ಉನ್ನತ ಸ್ಥಾನವನ್ನು ಏರಬೇಕಾದರೆ, ತನ್ನ ಸಮುದಾಯದ ಹಿತಾಸಕ್ತಿಗಳನ್ನು, ತನ್ನ ಅಸ್ಮಿತೆಯನ್ನು ಅಥವಾ ಗುರುತನ್ನು ಮೇಲ್‌ಜಾತಿಯ ರಾಜಕೀಯ ನಾಯಕರಿಗೆ ‘ಬಲಿ ಅರ್ಪಿಸಲೇ’ ಬೇಕಾಗುತ್ತದೆ. ವ್ಯಕ್ತಿಯಾಗಿ ಅವರು ಅತಿ ದೊಡ್ಡ ಸ್ಥಾನವನ್ನು ಗಳಿಸಿದ್ದಾರೆ ಎನ್ನುವುದೇನೋ ಸರಿ. ಆದರೆ ತನಗೆ ಸಿಕ್ಕಿದ ಗೆಲುವನ್ನು ಇಡೀ ಸಮುದಾಯದ ಗೆಲುವಾಗಿ ಮಾರ್ಪಡಿಸುವಲ್ಲಿ ಅವರು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಾರೆ ಎನ್ನುವುದರ ಆಧಾರದಲ್ಲಿ ರಾಷ್ಟ್ರಪತಿಯಾಗಿ ಅವರ ನಿರ್ವಹಣೆಯ ಮಾಪನ ನಡೆಯಬೇಕಾಗುತ್ತದೆ. ಆದಿವಾಸಿ ಸಮುದಾಯದ ನಾಯಕಿಯೊಬ್ಬಳನ್ನು ಮುಂದಿಟ್ಟುಕೊಂಡು, ಮೇಲ್‌ಜಾತಿಯ ಜನರು ತಮ್ಮ ಹಿತಾಸಕ್ತಿಗಳನ್ನು ಪೂರೈಸಿಕೊಂಡರೆ, ಅದರಿಂದ ಆದಿವಾಸಿ ಸಮುದಾಯಕ್ಕೆ ಇನ್ನಷ್ಟು ನಾಶ, ನಷ್ಟಗಳು ಉಂಟಾಗಬಹುದು. ಆದುದರಿಂದಲೇ, ಸರ್ವಾಧಿಕಾರಿ ಮನಸ್ಥಿತಿಯನ್ನು ಹೊಂದಿದ ಸರಕಾರವೊಂದು ದುರ್ಬಲ ಸಮುದಾಯದ ಪ್ರತಿನಿಧಿಯನ್ನು ಅತ್ಯುನ್ನತ ಸ್ಥಾನಕ್ಕೆ ಏರಿಸುತ್ತದೆ ಎಂದಾಗ ನಾವು ನಮ್ಮ ಕಣ್ಣುಗಳನ್ನು ಎಚ್ಚರದಲ್ಲಿಟ್ಟುಕೊಳ್ಳಬೇಕಾಗುತ್ತದೆ.

  ದಲಿತ ಸಮುದಾಯದಿಂದ ಬಂದ ರಾಮನಾಥ್ ಕೋವಿಂದ್ ಅವರು ರಾಷ್ಟ್ರಪತಿಯಾಗಿ ಆಯ್ಕೆಯಾದ ಲಾಭವನ್ನು ಈ ದೇಶದ ದಲಿತ ಸಮುದಾಯ ಎಷ್ಟರಮಟ್ಟಿಗೆ ನಗದೀಕರಿಸಿತು ಎನ್ನುವುದನ್ನೊಮ್ಮೆ ನೋಡೋಣ. ಕಳೆದ ಆರು ವರ್ಷಗಳಲ್ಲಿ ದಲಿತರ ಮೇಲೆ ಅತಿ ಹೆಚ್ಚು ದೌರ್ಜನ್ಯಗಳು ನಡೆದಿರುವುದು ವರದಿಯಾಗಿವೆ. ರಾಮನಾಥ್ ಕೋವಿಂದ್ ರಾಷ್ಟ್ರಪತಿಯಾಗಿದ್ದಾಗಲೇ, ಮೇಲ್‌ಜಾತಿಯ ಮಾಸಿಕ 60,000 ರೂ. ಆದಾಯವಿರುವ ಬಡವರಿಗೆ ಶೇ. 10 ಮೀಸಲಾತಿಯನ್ನು ಘೋಷಿಸಲಾಯಿತು. ಒಬ್ಬ ದಲಿತ ರಾಷ್ಟ್ರಪತಿಗೆ ಇದನ್ನು ತಡೆಯಲಾಗಲಿಲ್ಲ ಎನ್ನುವುದಕ್ಕಿಂತ, ದಲಿತ ರಾಷ್ಟ್ರಪತಿಯನ್ನು ಗುರಾಣಿಯಾಗಿಟ್ಟುಕೊಂಡೇ ಮೇಲ್‌ಜಾತಿಗೆ ಶೇ. 10 ಮೀಸಲಾತಿಯನ್ನು ಜಾರಿಗೆ ತರಲಾಯಿತು ಎನ್ನುವ ಅಂಶವನ್ನು ನಾವು ಗಮನಿಸಬೇಕು. ದಲಿತರ ಕಾಯ್ದೆಗಳನ್ನು ದುರ್ಬಲಗೊಳಿಸುವ ಪ್ರಯತ್ನ ಇವರ ಅವಧಿಯಲ್ಲೇ ನಡೆದವು. ಉತ್ತರ ಪ್ರದೇಶದಲ್ಲಿ ದಲಿತ ಮಹಿಳೆಯರ ಮೇಲೆ ಸಾಲು ಸಾಲು ಅತ್ಯಾಚಾರಗಳು ನಡೆದಾಗ, ಅವುಗಳನ್ನು ಪ್ರತಿಭಟಿಸಿದ ದಲಿತರ ಮೇಲೆ ಪೊಲೀಸರು ದೌರ್ಜನ್ಯಗಳನ್ನು ಎಸಗಿದಾಗ ರಾಷ್ಟ್ರಪತಿಗೆ ಅದು ಮಧ್ಯಪ್ರವೇಶಿಸಬೇಕಾದ ವಿಷಯವೆಂದು ಅನ್ನಿಸಲಿಲ್ಲ. ಯಾಕೆಂದರೆ, ದಲಿತ ಸಮುದಾಯದಿಂದ ಬಂದರೂ, ಕೋವಿಂದ್ ದಲಿತ ಸಮುದಾಯದ ನೋವು ದುಮ್ಮಾನಗಳನ್ನು ಪ್ರತಿನಿಧಿಸಿರಲೇ ಇಲ್ಲ. ತನ್ನ ಸಮುದಾಯದ ಹಿತಾಸಕ್ತಿಗಳನ್ನು ಬಲಿಕೊಡುವ ಮೂಲಕವೇ ಅವರು ಆ ಉನ್ನತ ಸ್ಥಾನವನ್ನು ಬಿಜೆಪಿಯೊಳಗೆ ದಕ್ಕಿಸಿಕೊಳ್ಳಲು ಸಾಧ್ಯವಾಯಿತು. ಆದುದರಿಂದಲೇ, ದಲಿತ ಸಮುದಾಯದಿಂದ ಬಂದರೂ ಕೋವಿಂದ್ ಆಯ್ಕೆ ದಲಿತರ ಸಂಭ್ರಮವಾಗಿ ಬದಲಾಗಲೇ ಇಲ್ಲ. ಇದು ಬಿಜೆಪಿಯೊಳಗಿರುವ ಇನ್ನಿತರ ಅಲ್ಪಸಂಖ್ಯಾತ ಸಮುದಾಯದ ಮುಖಂಡರಿಗೂ ಅನ್ವಯವಾಗುತ್ತದೆ.

 ಆದಿವಾಸಿಗಳು ಕೇಂದ್ರ ಸರಕಾರಕ್ಕೆ ಮಾತ್ರವಲ್ಲ, ಸಂಘಪರಿವಾರಕ್ಕೂ ನುಂಗಲಾರದ ತುತ್ತಾಗಿದ್ದಾರೆ. ತಾವು ಬೇರು ಬಿಟ್ಟ ಕಾಡು, ಹಸಿರಿನಲ್ಲಿ ಹಕ್ಕು ಸಾಧಿಸುತ್ತಿರುವ ಆದಿವಾಸಿಗಳ ಮೇಲಿನ ದಮನವೇ ಈ ದೇಶದಲ್ಲಿ ನಕ್ಸಲ್ ಉಗ್ರವಾದವನ್ನು ಬೆಳೆಸಿತು. ಕಾರ್ಪೊರೇಟ್ ಉದ್ಯಮಿಗಳ ಕಣ್ಣು ಆದಿವಾಸಿಗಳಿರುವ ಕಾಡು, ನೆಲದ ಮೇಲೆ ಬಿದ್ದಿದೆ. ಅಭಿವೃದ್ಧಿಯ ಹೆಸರಿನಲ್ಲಿ ಈ ಆದಿವಾಸಿಗಳನ್ನು ಒಕ್ಕಲೆಬ್ಬಿಸುವ ಪ್ರಯತ್ನಕ್ಕೆ ಇನ್ನಷ್ಟು ವೇಗ ಸಿಗಲಿದೆ. ಆದಿವಾಸಿಗಳನ್ನು ಉದ್ಧರಿಸುವ ಹೆಸರಿನಲ್ಲಿ ಅವರನ್ನು ಕಾಡಿನಿಂದ, ಅವರ ನೆಲದಿಂದ ಹೊರಹಾಕುವ ಸಂಚಿಗೆ ದ್ರೌಪದಿ ಮುರ್ಮು ಅವರ ಆಯ್ಕೆ ಪೂರಕವಾಗಲಿದೆಯೇ ಎನ್ನುವ ಆತಂಕವನ್ನು ಈಗಾಗಲೇ ಹಲವು ಸಾಮಾಜಿಕ ಹೋರಾಟಗಾರರು ವ್ಯಕ್ತಪಡಿಸುತ್ತಿದ್ದಾರೆ. ತನ್ನ ಸಮುದಾಯದ ಐಡೆಂಟಿಟಿಯ ಕಾರಣದಿಂದಲೇ ಮುರ್ಮು ಅಅತ್ಯುನ್ನತ ಸ್ಥಾನಕ್ಕೆ ಅಭ್ಯರ್ಥಿಯನ್ನಾಗಲು ಸಾಧ್ಯವಾಗಿದೆ. ಇದು ಭಾರತದ ಸಂವಿಧಾನ ಅವರಿಗೆ ಕೊಟ್ಟ ಕೊಡುಗೆಯೇ ಹೊರತು, ಬಿಜೆಪಿಯಲ್ಲ ಎನ್ನುವ ವಾಸ್ತವವನ್ನು ಗಮನದಲ್ಲಿಟ್ಟು ಅತ್ಯುನ್ನತ ಹುದ್ದೆಯನ್ನು ನಿಭಾಯಿಸಲು ಮುರ್ಮು ಅವರು ಸಿದ್ಧರಾಗಬೇಕಾಗಿದೆ. ಈಗಾಗಲೇ ದಮನಿತ ಸಮುದಾಯವಾಗಿ ಗುರುತಿಸಲ್ಪಟ್ಟಿರುವ ಆದಿವಾಸಿಗಳು, ತಾನು ರಾಷ್ಟ್ರಪತಿ ಹುದ್ದೆಯನ್ನು ಏರಿದ ಕಾರಣಕ್ಕಾಗಿ ಇನ್ನಷ್ಟು ಶೋಷಣೆಗಳನ್ನು ಅನುಭವಿಸುವ ಸ್ಥಿತಿ ಬಾರದಂತೆ ನೋಡಿಕೊಳ್ಳುವುದು ಮುರ್ಮು ಅವರ ಹೊಣೆಗಾರಿಕೆಯಾಗಿದೆ. ಹಾಗೆಯೇ ಎಲ್ಲ ಶೋಷಿತ ವರ್ಗಗಳ ಹಿತವನ್ನು ಕಣ್ಣಿಟ್ಟು ಕಾಪಾಡುವುದೇ ಸಂವಿಧಾನದ ಋಣವನ್ನು ತೀರಿಸಲು ಮುರ್ಮು ಅವರಿಗಿರುವ ಏಕೈಕ ಮಾರ್ಗವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News