ನಿವೃತ್ತ ಪೈಲಟ್‍ಗಳ ಮರು ನೇಮಕಕ್ಕೆ ಮುಂದಾದ ಏರ್ ಇಂಡಿಯಾ: ವರದಿ

Update: 2022-06-24 02:02 GMT

ಮುಂಬೈ: ಕಳೆದ ನಾಲ್ಕು ವರ್ಷಗಳಲ್ಲಿ ನಿವೃತ್ತರಾದ 55 ಮಂದಿ ಪೈಲಟ್‍ಗಳಿಗೆ ಮುಂದಿನ ಐದು ವರ್ಷಗಳ ಕಾಲ ಸೇವೆ ಸಲ್ಲಿಸಲು ಅವಕಾಶ ನೀಡುವ ನೇಮಕಾತಿ ಪತ್ರವನ್ನು ಟಾಟಾ ಸಮೂಹ ಮಾಲಕತ್ವದ ಏರ್ ಇಂಡಿಯಾ ಕಳುಹಿಸಿದೆ ಎಂದು timesofindia.com ವರದಿ ಮಾಡಿದೆ.

ಹೊಸ ಆಫರ್ ಅನ್ವಯ 65ನೇ ವರ್ಷದ ವರೆಗೆ ಈ ಪೈಲಟ್‍ಗಳು ಕಮಾಂಡರ್‌ ಗಳಾಗಿ ಕಾರ್ಯ ನಿರ್ವಹಿಸಬಹುದಾಗಿದೆ. ಈಗಾಗಲೇ ನೇಮಕಾತಿ ಪತ್ರ ಕಳುಹಿಸಲಾಗಿದ್ದು, 55 ಮಂದಿಯ ಪೈಕಿ 49 ಮಂದಿ ಮತ್ತೆ ವಿಮಾನಯಾನ ಸೇವೆಗೆ ಸೇರಿಕೊಳ್ಳುವ ಇರಾದೆ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಏರ್ ಇಂಡಿಯಾದಲ್ಲಿ ನಿವೃತ್ತಿ ವಯಸ್ಸು 58 ವರ್ಷಗಳಾಗಿದ್ದರೂ, ಏರ್‍ಲೈನ್ ಟ್ರಾ‌ನ್ಸ್ ಪೋರ್ಟ್ ಪೈಲಟ್ ಲೈಸನ್ಸ್ (ಎಟಿಪಿಎಲ್) ಅನ್ನು 65 ವರ್ಷದವರೆಗೆ ವಿಸ್ತರಿಸಲು ಅವಕಾಶವಿದೆ. ಮುಂದಿನ ನಾಲ್ಕೈದು ವರ್ಷಗಳಲ್ಲಿ 200ಕ್ಕೂ ಹೆಚ್ಚು ವಿಮಾನಗಳನ್ನು ತೆಕ್ಕೆಗೆ ಪಡೆಯಲು ಟಾಟಾ ಸಮೂಹ ನಿರ್ಧರಿಸಿದೆ ಎಂದು ಮೂಲಗಳು ಹೇಳಿವೆ.

ದೇಶೀಯ ಹಾರಾಟಕ್ಕೆ ಮತ್ತು ಅಲ್ಪದೂರದ ಮತ್ತು ಮಧ್ಯಮ ದೂರದ ಅಂತರರಾಷ್ಟ್ರೀಯ ಮಾರ್ಗಗಳಿಗೆ ಸಿಂಗಲ್ ಐಸೆಲ್ ವಿಮಾನಗಳನ್ನು ಮತ್ತು ಉಳಿಕೆ ಮಾರ್ಗಗಳ ಹಾರಾಟಕ್ಕೆ ದೊಡ್ಡ ವಿಮಾನಗಳನ್ನು ಮುಂದಿನ ವರ್ಷದ ಆರಂಭದ ವೇಳೆಗೆ ಸೇರಿಸಿಕೊಳ್ಳಲು ನಿರ್ಧರಿಸಲಾಗಿದೆ.

ಈ ವಿಸ್ತರಣೆಗಾಗಿ ಹೆಚ್ಚುವರಿ ಪೈಲಟ್‍ಗಳ ಅಗತ್ಯವಿದ್ದು, ಬೋಯಿಂಗ್ ಹಾಗೂ ಏರ್‍ಬಸ್‍ಗಳನ್ನು ಹೊಂದಿರುವ ಕಾರಣದಿಂದ ವಿಸ್ತರಣೆ ಅತ್ಯಂತ ಕ್ಲಿಷ್ಟ ವ್ಯವಹಾರ.  ಮೊದಲ ಬ್ಯಾಚ್‍ನ ಪೈಲಟ್‍ಗಳನ್ನು ಎ350 ವಿಮಾನದಲ್ಲಿ ತರಬೇತಿ ನೀಡಲಾಗುವುದು. ಇವರು ಹಿರಿಯ ಪೈಲಟ್‍ಗಳಾಗಿರುತ್ತಾರೆ. ಇವರನ್ನು ಪರೀಕ್ಷಕರು ಮತ್ತು ಬೋಧಕರೆಂದು ನಿಯೋಜಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News