ಅಗ್ನಿಪಥ್ ಯೋಜನೆ; ಅಗ್ನಿವೀರರ ನೇಮಕಾತಿ ಪ್ರಕ್ರಿಯೆಗೆ ಇಂದು ಚಾಲನೆ

Update: 2022-06-24 02:52 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ವಿವಾದಾತ್ಮಕ ಅಗ್ನಿಪಥ್ ಯೋಜನೆಯಡಿ ಭಾರತೀಯ ವಾಯುಪಡೆಗೆ ಅಗ್ನಿವೀರರ ಮೊದಲ ಬ್ಯಾಚ್‍ನ ನೇಮಕಾತಿ ಪ್ರಕ್ರಿಯೆ ಶುಕ್ರವಾರ ಆರಂಭವಾಗಲಿದೆ. ಇಂದಿನಿಂದ ನೋಂದಣಿ ಆರಂಭವಾಗಲಿದ್ದು, ಜುಲೈ 24ರಂದು ಆನ್‍ಲೈನ್ ಪರೀಕ್ಷೆಗಳು ನಡೆಯಲಿವೆ ಎಂದು hindustantimes.com ವರದಿ ಮಾಡಿದೆ.

"ಮೊದಲ ಬ್ಯಾಚ್‍ನ ನೇಮಕಾತಿ ಪ್ರಕ್ರಿಯೆ ಜೂನ್ 24ರಂದು ಆರಂಭವಾಗಲಿದೆ. ಒಂದು ತಿಂಗಳ ಬಳಿಕ ಅಂದರೆ ಜುಲೈ 24ರಂದು ಆನ್‍ಲೈನ್ ಪರೀಕ್ಷೆ ನಡೆಯಲಿದೆ. ಡಿಸೆಂಬರ್ ವೇಳೆಗೆ ಮೊದಲ ಬ್ಯಾಚ್‍ನ ಮೇಕಾತಿ ಪ್ರಕ್ರಿಯೆ ಮುಗಿಯಲಿದ್ದು, ಡಿಸೆಂಬರ್ 30ರ ವೇಳೆಗೆ ತರಬೇತಿ ಆರಂಭವಾಗಲಿದೆ" ಎಂದು ಏರ್ ಮಾರ್ಷಲ್ ಎಸ್.ಕೆ.ಝಾ ಹೇಳಿದ್ದಾರೆ.

ಐಎಎಫ್‍ಗೆ ನೋಂದಣಿ ಮಾಡಿಕೊಂಡ ಬಳಿಕ ಅಗ್ನಿವೀರರಿಗೆ ವಾಯುಪಡೆ ಕಾಯ್ದೆ-1950ರ ನಿಯಮಗಳು ಅನ್ವಯಿಸಲಿವೆ. ನಾಲ್ಕು ವರ್ಷಗಳ ಅವಧಿಗೆ ಇವರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.

ಪ್ರಸ್ತುತ ತಂತ್ರಜ್ಞಾನ, ವಿಶೇಷ ರ‍್ಯಾಲಿಗಳು ಮತ್ತು ಐಟಿಐ, ಎನ್‍ಎಸ್‍ಕ್ಯೂಎಫ್‍ನಂಥ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಕ್ಯಾಂಪಸ್ ಸಂದರ್ಶನ ಏರ್ಪಡಿಸುವ ಮೂಲಕ ದೇಶದ ಎಲ್ಲೆಡೆಯ ಅಭ್ಯರ್ಥಿಗಳು ನೋಂದಾಯಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗುವುದು ಎಂದು ಐಎಎಫ್ ಪ್ರಕಟಣೆ ಹೇಳಿದೆ.

ಭಾರತೀಯ ವಾಯುಪಡೆಯಲ್ಲಿ ಹಾಲಿ ಇರುವ ಶ್ರೇಣಿಯ ಬದಲಾಗಿ ಅಗ್ನಿವೀರರಿಗೆ ವಿಶಿಷ್ಟ ಶ್ರೇಣಿ ಇರುತ್ತದೆ. 18 ವರ್ಷಕ್ಕಿಂತ ಕೆಳಗಿನ ಅಗ್ನಿವೀರರ ನೋಂದಣಿಗೆ ಪೋಷಕರು ಸಹಿ ಮಾಡುವುದು ಕಡ್ಡಾಯ. ಎರಡು ಹಂತಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಮೊದಲ ಹಂತದಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಮಾತ್ರ 2ನೇ ಹಂತಕ್ಕೆ ಅರ್ಹತೆ ಹೊಂದಿರುತ್ತಾರೆ ಎಂದು ಪ್ರಕಟಣೆ ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News