ಗುಜರಾತ್ ಹಿಂಸಾಚಾರ: ಮೋದಿಗೆ ಕ್ಲೀನ್ ಚಿಟ್ ಪ್ರಶ್ನಿಸಿದ್ದ ಝಕಿಯಾ ಜಾಫ್ರಿ ಅರ್ಜಿ ವಜಾಗೊಳಿಸಿದ ಸುಪ್ರೀಂ

Update: 2022-06-24 17:21 GMT

ಹೊಸದಿಲ್ಲಿ, ಜೂ.24: 2002ರ ಗುಜರಾತ್ ಗಲಭೆಗೆ ಸಂಬಂಂಧಿಸಿದ ಪ್ರಕರಣವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ದೋಷಮುಕ್ತಗೊಳಿಸಿದ್ದ ವಿಶೇಷ ತನಿಖಾ ತಂಡದ ವರದಿಯನ್ನು ಪ್ರಶ್ನಿಸಿ ಮಾಜಿ ಕಾಂಗ್ರೆಸ್ ನಾಯಕ ದಿವಂಗತ ಎಹ್ಸಾನ್ ಜಾಫ್ರಿ ಅವರ ಪತ್ನಿ ಝಕಿಯಾ ಜಾಫ್ರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಶುಕ್ರವಾರ ತಳ್ಳಿಹಾಕಿದೆ.

ಗುಜರಾತ್ ಗಲಭೆಯ ಹಿಂದೆ ಉನ್ನತ ಮಟ್ಟದ ಸಂಚು ನಡೆದಿದೆಯೆಂಬ ಝಕಿಯಾ ಆರೋಪಿಸಿದ್ದರು. ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ ಮುಕ್ತಾಯಗೊಳಿಸಿರುವುದನ್ನು ಪುರಸ್ಕರಿಸಿರುವ ಮ್ಯಾಜಿಸ್ಟ್ರೇಟ್ ಅವರ ನಿರ್ಧಾರವನ್ನು ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ನೇತೃತ್ವದ ಸುಪ್ರೀಂಕೋರ್ಟ್ ನ್ಯಾಯಪೀಠ ಎತ್ತಿಹಿಡಿದಿದೆ.

ಪ್ರಕರಣದ ತನಿಖೆಯನ್ನು ನಡೆಸುವಲ್ಲಿ ಸಿಟ್‌ನಿಂದಾಗಲಿ ಹಾಗೂ ಅಂತಿಮ ವರದಿಯನ್ನು ನಿಭಾಯಿಸಿರುವಲ್ಲಿ ಮ್ಯಾಜಿಸ್ಟ್ರೇಟ್ ಹಾಗೂ ಹೈಕೋರ್ಟ್‌ನಿಂದಾಗಲಿ ಕಾನೂನಿನ ಪ್ರಭುತ್ವದ ಉಲ್ಲಂಘನೆಯಾಗಿದೆಯೆಂಬ ಅರ್ಜಿದಾರರಾದ ಝಕಿಯಾ ಝಾಫ್ರಿ ಅವರ ಪ್ರತಿಪಾದನೆಯನ್ನು ನಾವು ಅನುಮೋದಿಸುವುದಿಲ್ಲ’’ ಎಂದು ನ್ಯಾಯಾಲಯ ತಿಳಿಸಿದೆ.

2002ರ ಫೆಬ್ರವರಿ 28ರಂದು ಗುಜರಾತ್ ಗಲಭೆ ಸಂದರ್ಭ ಅಹ್ಮದಾಬಾದ್‌ನ ಗುಲ್ಬರ್ಗ್ ಸೊಸೈಟಿಯ ಮೇಲೆ ಬೃಹತ್ ಗುಂಪೊಂದು ನಡೆಸಿದ ದಾಳಿಯಲ್ಲಿ ಮೃತಪಟ್ಟ 69 ಮಂದಿಯಲ್ಲಿ ಎಹ್ಸಾನ್ ಜಾಫ್ರಿ ಕೂಡಾ ಒಬ್ಬರಾಗಿದ್ದರು. ಹಿಂಸಾನಿರತ ಗುಂಪು ಗುಲ್ಬರ್ಗ್ ಸೊಸೈಟಿ ವಸತಿಸಮುಚ್ಚಯದ ಮೇಲೆ ಕಲ್ಲುಗಳಿಂದ ದಾಳಿ ನಡೆಸಿತಲ್ಲದೆ, ಮನೆಗಳಿಗೆ ಬೆಂಕಿ ಹಚ್ಚಿತ್ತು.
 
ಈ ಹತ್ಯಾಕಾಂಡದ ಹಿಂದೆ ಬೃಹತ್ ಸಂಚು ನಡೆದಿತ್ತೆಂದು ಆರೋಪಿಸಿ ಝಕಿಯಾ ಜಾಫ್ರಿ ಸಲ್ಲಿಸಿದ್ದ ಅರ್ಜಿಯ ಮೇಲಿನ ತೀರ್ಪನ್ನು ಸುಪ್ರೀಂಕೋರ್ಟ್ ಕಳೆದ ವರ್ಷದ ಡಿಸೆಂಬರ್ 9ರಂದು ಕಾದಿರಿಸಿತ್ತು.

ವಿಚಾರಣೆಯ ಸಂದರ್ಭದಲ್ಲಿ ಝಕಿಯಾ ಪರವಾಗಿ ವಾದಿಸಿದ್ದ ನ್ಯಾಯವಾದಿ ಕಪಿಲ್ ಸಿಬಲ್ ಅವರು, ವಿಶೇಷ ತನಿಖಾ ತಂಡವು ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಪರಿಶೀಲಿಸಿರಲಿಲ್ಲ ಹಾಗೂ ಆಡಳಿತವು ದ್ವೇಷದ ಪ್ರಚಾರಕ್ಕೆ ನೆರವಾಗಿತ್ತು ಎಂದು ಆರೋಪಿಸಿದ್ದರು ಎಂದು ಬಾರ್ ಆ್ಯಂಡ್ ಬೆಂಚ್ ವರದಿ ಮಾಡಿದೆ.

 ಗಲಭೆ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ, ಆಡಳಿತ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಮೊಬೈಲ್ ಫೋನ್‌ಗಳಲ್ಲಿ ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು. ಆದರೆ ಆ ಫೋನ್‌ಗಳನ್ನು ಸಿಟ್ ವಶಪಡಿಸಿಕೊಂಡಿರಲಿಲ್ಲ ಹಾಗೂ ಅದರಲ್ಲಿರುವ ಅಂಶಗಳನ್ನು ಪರಿಶೀಲಿಸಿಲ್ಲವೆಂದು ಅವರು ವಾದಿಸಿದ್ದಾರೆ.

  ‘‘ಗೋಧ್ರಾ ರೈಲು ದುರಂತದಲ್ಲಿ ಮೃತಪಟ್ಟವರ ಶವಗಳನ್ನು ಟಿವಿ ವಾಹಿನಿಗಳಲ್ಲಿ ಪ್ರಸಾರ ಮಾಡಲಾಗಿತ್ತು. ಇದು ಆಕ್ರೋಶಕ್ಕೆ ಕಾರಣವಾಯಿತು. ಮುಸ್ಲಿಮರನ್ನು ಆರ್ಥಿಕವಾಗಿ ಬಹಿಷ್ಕರಿಸಬೇಕೆಂದು ಪ್ರಚಾರ ಮಾಡಲಾಯಿತು. ಗೋಧ್ರಾದಲ್ಲಿ ಅಗ್ನಿದುರಂತಕ್ಕೀಡಾದ ಸಬರಮತಿ ಎಕ್ಸ್ ಪ್ರೆಸ್ ರೈಲಿನ ತಿರುಚಿದ ಚಿತ್ರಗಳನ್ನು ಹಾಗೂ ಕ್ರೌರ್ಯವನ್ನು ಎಸಗುವಂತೆ ಕರೆ ನೀಡುವ ಕರಪತ್ರಗಳನ್ನು ವಿತರಿಸಲಾಗಿತ್ತು. ಈ ಎಲ್ಲಾ ಸಾಮಾಗ್ರಿಗಳನ್ನು ಸಿಟ್ ಗೆ ನೀಡಿದ್ದರೂ ಅವರು ಅದನ್ನು ಪರಿಶೀಲಿಸಿರಲಿಲ್ಲವೆಂದು ಸಿಬಲ್ ವಾದಿಸಿದ್ದರು.

  ಭಾವನಗರದ ಮಾಜಿ ಪೊಲೀಸ್ ಅಧೀಕ್ಷಕ ರಾಹುಲ್ ಶರ್ಮಾ ಅವರ ಹೇಳಿಕೆಯನ್ನು ವಾದಮಂಡನೆಯ ಸಂದರ್ಭ ಪ್ರಸ್ತಾವಿಸಿದ್ದ ಸಿಬಲ್ ಅವರು, ಮುಸ್ಲಿಮರ ವಿರುದ್ಧ ಪ್ರತೀಕಾರ ಕೈಗೊಳ್ಳುವಂತೆ ಹಿಂದೂಗಳು ಹಾಗೂ ಹಿಂದುತ್ವವಾದಿ ಸಂಘಟನೆಗಳನ್ನು ಭಾವನಗರದಿಂದ ಪ್ರಕಟವಾಗುವ ಸುದ್ದಿಪತ್ರಿಕೆಯೊಂದು ಆಗ್ರಹಿಸಿತ್ತೆಂಬ ಮಾಜಿ ಪೊಲೀಸ್ಆಧೀಕ್ಷಕ ರಾಹುಲ್ ಶರ್ಮಾ ಅವರ ಹೇಳಿಕೆಯನ್ನು ಕೂಡಾ ಸಿಬಲ್ ಪ್ರಸ್ತಾವಿಸಿದ್ದರು. ಆದಾಗ್ಯೂ ಆ ಪತ್ರಿಕೆಯ ವಿರುದ್ಧ ಯಾವುದೇ ಕ್ರಮವನ್ನು ಕೈಗೊಳ್ಳಲಿಲ್ಲ ಎಂದವರು ಹೇಳಿದರು.

  ವಿಶೇಷ ತನಿಖಾ ತಂಡದ ಪರವಾಗಿ ವಾದಿಸಿದ್ದ ನ್ಯಾಯವಾದಿ ಮುಕುಲ್ ರೋಹ್ಟಗಿ ಅವರು, ಗುಜರಾತ್‌ನ ಮಾಜಿ ಸಚಿವೆ ಮಾಯಾ ಕೊಡ್ನಾನಿ ಅವರನ್ನು ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿತ್ತು ಹಾಗೂ ಶಿಕ್ಷೆ ವಿಧಿಸಲಾಗಿತ್ತು. ಆಕೆ ಹಲವು ವರ್ಷಗಳ ಕಾಲ ಜೈಲಿನಲ್ಲಿದ್ದರು ಎಂದು ರೋಹ್ಟಗಿ ಹೇಳಿದ್ದರು ಒಂದು ವೇಳೆ ಸಿಟ್ ಪಕ್ಷಪಾತಿಯಾಗಿದ್ದರೆ, ಆದು ಯಾಕೆ ಅಧಿಕಾರರೂಢ ಸಚಿವೆಯನ್ನೇ ಬಂಧಿಸುತ್ತಿತ್ತು ಎಂದು ರೋಹ್ಟಗಿ ಪ್ರಶ್ನಿಸಿದ್ದರು.
  
  ಗುಜರಾತ್ ಗಲಭೆಯ ಕುರಿತ ವಿಷಯಗಳು ‘ಕುದಿಯುತ್ತಲೇ ಇರುವಂತೆ ’ನೋಡಿಕೊಳ್ಳಲು ಸಾಮಾಜಿಕ ಕಾರ್ಯಕರ್ತೆ ಝಕಿಯಾ ಜಾಫ್ರಿ ಅವರ ದುರವಸ್ಥೆಯನ್ನು ದುರ್ಬಳಕೆ ಮಾಡಿಕೊಂಡರು ಎಂದು ಮೆಹ್ತಾ ವಾದಿಸಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಆರೋಪಿಗಳ ವಿರುದ್ಧ ಯಾವುದೇ ವಿಚಾರಣೆಗೆ ಯೋಗ್ಯವಾದ ಪುರಾವೆಗಳು ಇಲ್ಲವೆಂದು ಸಿಟ್, 2012ರ ಫೆಬ್ರವರಿ 8ರಂದು ನೀಡಿದ ಮುಕ್ತಾಯ ವರದಿಯಲ್ಲಿ ತಿಳಿಸಿತ್ತು.

ಇದನ್ನು ಪ್ರಶ್ನಿಸಿ ಝಕಿಯಾ ಜಾಫ್ರಿ ಅವರು ಅಹ್ಮದಾಬಾದ್ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅದನ್ನು ನ್ಯಾಯಾಲಯ ತಿರಸ್ಕರಿಸಿತ್ತು.

 ಆನಂತರ ಝಕಿಯಾ ಗುಜರಾತ್ ಹೈಕೋರ್ಟ್‌ನ ಮೆಟ್ಟಲೇರಿದ್ದರು. 2017ರಲ್ಲಿ ಹೈಕೋರ್ಟ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿತ್ತು ಹಾಗೂ ಆಕೆಯ ಅರ್ಜಿಯನ್ನು ವಜಾಗೊಳಿಸಿತ್ತು. ಆನಂತರ ಝಕಿಯಾ ಅವರು ಸುಪ್ರೀಂಕೋರ್ಟ್‌ನ ಮೊರೆ ಹೋಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News