ಭಾರತೀಯ ರಾಜಕಾರಣದ ಅಧಃಪತನಕ್ಕೆ ಕಾರಣ ಯಾರು?

Update: 2022-06-26 03:26 GMT

ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ಎಂದು ಬಹಳ ಹೆಗ್ಗಳಿಕೆಯಿಂದ ಭಾರತ ಕರೆಸಿಕೊಂಡರೂ, ಆದರೊಳಗಿನ ಮುಖ್ಯ ಅಂಗವಾದ ರಾಜಕೀಯ ಪಕ್ಷಗಳ ಹುಳುಕು ಇಂದು ನಿನ್ನೆಯದ್ದಲ್ಲ. ಸ್ವಾತಂತ್ರ್ಯ ದೊರಕಿದ ಬಳಿಕದ ಅನೇಕ ಅಧಿಕಾರ ಪಡೆಯುವ ಸಂದರ್ಭದಲ್ಲೂ ಇದನ್ನು ಪಕ್ಷಾಂತರದಿಂದ ಆರಂಭಿಸಿ ಹಲವು ರೂಪದಲ್ಲಿ ಕಂಡವರೇ ಆಗಿದ್ದೇವೆ ನಾವೆಲ್ಲ. ಆದರೆ ಅದು ರಾಜಕೀಯ ಆಪರೇಷನ್ ಹೆಸರಿನಲ್ಲಿ ಪ್ರಸ್ತುತ ದಿನದ ಹೊಲಸಿನ ಮಟ್ಟಕ್ಕೆ ತಲುಪಿರಲಿಲ್ಲ.

ಭಾರತಿಯ ರಾಜಕಾರಣದ ಹುಳುಕು ಮತ್ತು ಹೊಲಸಿನ ನಡುವೆಯೂ ಈ ಹಿಂದಿನ ಆದರ ನಿಜಾರ್ಥದ ಮೌಲ್ಯ ಮತ್ತು ನೈತಿಕತೆಯನ್ನು ತಮ್ಮ ತಮ್ಮ ಸಿದ್ಧಾಂತದ ಜತೆಗೆ ಉಳಿಸಿಕೊಂಡು ಬಂದ ಬೆರಳೆಣಿಕೆಯ ವ್ಯಕ್ತಿ ಮತ್ತು ಸಂದರ್ಭಗಳು ಕೆಲವು ನಮ್ಮೆದುರಿಗಿದೆ ನಿಜ. ಅಧಿಕಾರ ದಾಹದ ಜತೆಗೆ ನೈಜ ಪ್ರಜಾಪ್ರಭುತ್ವದ ಚಿತ್ರಣ ನಮ್ಮ ಪಕ್ಷ ಆಧಾರಿತ ರಾಜಕೀಯ ವ್ಯವಸ್ಥೆಗೆ ಮತ್ತು ಆಗೆಲ್ಲ ಕನಿಷ್ಠ ಶಿಕ್ಷಣದ ಜೊತೆಗೆ ಇದ್ದ ಪ್ರಬುದ್ಧ ಮತದಾರರಿಗೆ ಕಿಂಚಿತ್ತಾದರೂ ಕಣ್ಣೆದುರಿಗಿದ್ದಂತಿತ್ತು.

ಭಾರತೀಯ ರಾಜಕಾರಣದೊಳಗೆ ವರ್ಷಾನುಗಟ್ಟಲೆ ಇದ್ದ ಬಹುತೇಕ ಏಕಪಕ್ಷ ಆಧಾರಿತ ಅಧಿಕಾರ ವ್ಯವಸ್ಥೆ, ಯಾವಾಗ ಜನಸಾಮಾನ್ಯರ ಒಂದಿಷ್ಟು ಹೆಚ್ಚಿದ ರಾಜಕೀಯ ಪರಿಪಕ್ವತೆಯಿಂದ ಮರೀಚಿಕೆ ಆಗಿ, ಕುರ್ಚಿಯ ಆಸೆಯ ರಾಜಕೀಯ ಸಮ್ಮಿಲನಗಳು ಆರಂಭವಾದವೋ ಆಗಲೇ ಒಂದು ರೀತಿಯ ಸೈದ್ಧಾಂತಿಕವಲ್ಲದ ಅಧಃಪತನದ ಹಾದಿ ಹಿಡಿದಿದೆ ನಮ್ಮ ನಡುವಿನ ರಾಜಕಾರಣ. ಆದರೂ ಅನಿವಾರ್ಯತೆಯ ಹೆಸರಿನ ಅಂತಹ ಆಡಳಿತ ಸಂಪೂರ್ಣ ಆಪರೇಷನ್ ಹಂತಕ್ಕೆ ಮುಟ್ಟದೆ ಕೇವಲ ಕೈ ಕಾಲುಗಳನ್ನು ತಿರುಚುವುದಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ ಬರಬರುತ್ತಾ ಸರಿಸುಮಾರು ಕಳೆದ ಸುಮಾರು ಒಂದು ದಶಕದಿಂದ ಕೇಂದ್ರದ ಆಡಳಿತ ವ್ಯವಸ್ಥೆಯ ಕೃಪಾಕಟಾಕ್ಷದೊಂದಿಗೆ ಅದಕ್ಕಾಗಿಯೇ ಪಡೆಕಟ್ಟಿಕೊಂಡು ಇದು ಪಡೆದುಕೊಂಡ ನೂತನ ರೂಪ ಮತ್ತು ಅದರಿಂದ ರಾಜಕೀಯ ವ್ಯಕ್ತಿಗಳು ಪಡೆದ ಲಾವಣ್ಯ ಇಡೀ ಚಿತ್ರಣಕ್ಕೆ ರೆಸಾರ್ಟ್‌ನ ಮಧು ಮಂಚದ ಜತೆಗೆ ಕಾಂಚಾಣದ ಬಣ್ಣ ಹಚ್ಚಿ ಚುನಾವಣೆಯ ಅಗತ್ಯತೆಯನ್ನು ಪ್ರಶ್ನಿಸುವಂತೆ ಮಾಡಿದೆ, ಅತೀ ಮುಖ್ಯವಾಗಿ ನಾವು ಪ್ರಸ್ತುತ ಕರ್ನಾಟಕದಲ್ಲಿ ಆನುಭವಿಸುತ್ತಿರುವ ಆನಂದದಲ್ಲಿ! ಇದೀಗ ಪಕ್ಕದ ಮಹಾರಾಷ್ಟ್ರಕ್ಕೂ ಅದರ ಸವಿ ಹಂಚಲು ಸಿದ್ಧವಾಗಿ ನಾಳೆಯ ಮಿಕಕ್ಕಾಗಿ ಕಾಯುತ್ತ! ಇದನ್ನೊಂದು ಸಾತ್ವಿಕ ವಿಜಯ ಎಂದು ಪರಿಬಿಂಬಿಸಿ.

ಇಂತಹ ದುರದೃಷ್ಟಕರ ಸಂದರ್ಭದಲ್ಲಿ ನ್ಯಾಯಾಂಗ ವ್ಯವಸ್ಥೆಯೂ ಇದನ್ನು ಸರಿಪಡಿಸಲು ಆಗದೆ ಇರುವುದು ಲೋಪವೋ ಆದರೊಳಗಿನ ದೋಷವೋ ಅಥವಾ ಸಂವಿಧಾನದ ಇತಿಮಿತಿಯೋ ನಾವು ಬಹಳ ಗಂಭೀರವಾಗಿ ಆಲೋಚಿಸಬೇಕಾದ ವಿದ್ಯಮಾನ. ಅದೆಂತಹ ಆಪರೇಷನ್‌ಗೆ ಒಳಗಾದರೂ ಪುನಃ ಒಂದೆರಡು ತಿಂಗಳೊಳಗೆ ಪಕ್ಷ, ಚಿಹ್ನೆ, ಸಿದ್ಧಾಂತ (ಮತ್ತು ಆ ಮೂಲಕ ಮೂರನ್ನು ಬಿಟ್ಟು) ಬದಲಾಯಿಸಿ ಚುನಾವಣೆಗೆ ನಿಲ್ಲುವ ಪುಢಾರಿಗಳನ್ನು ಪುಡಿಗಟ್ಟದೆ ಇಡೀ ಇಡೀಯಾಗಿ ತಬ್ಬಿಕೊಳ್ಳುವ ಭಾರತೀಯ ಮತದಾರರಂತೂ ಜಗತ್ತಿನ ಒಂದು ಆಶ್ಚರ್ಯವೇ ಸರಿ! ಯುವ ಮತದಾರರ ಆಲೋಚನಪರಿಯಂತೂ ಖೇದಕರವೇ ಹೌದು. ರಾಜಕೀಯ ಪಕ್ಷಗಳ ಅಧಃಪತನ ಒಂದು ರೀತಿಯಲ್ಲಿ ಸಂವಿಧಾನದ ಸೋಲು ಎಂಬುದಾದರೆ, ಅಂತಹ ಸಂವಿಧಾನವನ್ನು ಎತ್ತಿಹಿಡಿದು ಅದನ್ನು ಉಳಿಸಿ ಬೆಳೆಸಲು ನಾವು ಮತದಾರರು ವಿಫಲವಾಗುತ್ತಿದ್ದೇವೆ ಎಂಬ ಎಚ್ಚರಿಕೆಯು ಯಾರಿಗಾದರೂ ಸೈ... ಸತತ ಜೈಕಾರ ಹಾಕುವ ಮೊದಲು ನಮ್ಮೊಳಗೂ ಮೊದಲು ಮೂಡಬೇಕು. ಹೀಗಾಗಿ ಅದು ನಿನ್ನೆಯ ಕರ್ನಾಟಕ, ಇಂದಿನ ಮಹಾರಾಷ್ಟ್ರ ಮತ್ತು ನಾಳೆಯ ಇನ್ಯಾವುದೋ ರಾಜ್ಯದಲ್ಲಿ ನನ್ನ ಅಥವಾ ನಮ್ಮ ಬೆಂಬಲಿತ ಪಕ್ಷ ಹೇಗಾದರೂ ಸರಿ ಅಧಿಕಾರಕ್ಕೆ ಬಂದಿದೆ ಎಂದು ಸಂಭ್ರಮಿಸುವ ಮೊದಲು ಭಾರತೀಯ ರಾಜಕಾರಣಕ್ಕೊಂದು ಸಂವಿಧಾನದ ಚೌಕಟ್ಟಿನ ಘನತೆಯನ್ನು ತಂದಿಡುವಲ್ಲಿ ನಾವೆಲ್ಲರೂ ಮುಂದಿನ ಎಲ್ಲಾ ಚುನಾವಣೆಗಳಲ್ಲೂ ಸ್ವತಃ ಯಾವುದೇ ರೀತಿಯ ಅಪರೇಷನ್‌ಗೆ ಒಳಗಾಗದೆ ಪರಿಶ್ರಮಿಸೋಣ.

Writer - ಕಲ್ಲಚ್ಚು ಮಹೇಶ ಆರ್. ನಾಯಕ್

contributor

Editor - ಕಲ್ಲಚ್ಚು ಮಹೇಶ ಆರ್. ನಾಯಕ್

contributor

Similar News