VIDEO - ನಮ್ಮಿಂದ ಕಿತ್ತುಕೊಂಡಿದ್ದನ್ನು ಹಿಂತಿರುಗಿಸಿ ಕೊಡಿ ಎಂದು ಕೇಳುವುದು ಮೀಸಲಾತಿ: ಸಿದ್ದರಾಮಯ್ಯ

Update: 2022-06-26 17:30 GMT

ಬೆಂಗಳೂರು, ಜೂ. 26: ‘ಮೀಸಲಾತಿ ಎಂಬುದು ಭಿಕ್ಷೆಯಲ್ಲ, ಸಂವಿಧಾನಾತ್ಮಕ ಹಕ್ಕಾಗಿದೆ. ನಮ್ಮಿಂದ ಕಿತ್ತುಕೊಂಡದ್ದನ್ನು ನಮಗೆ ಹಿಂತಿರುಗಿಸುವಂತೆ ಕೇಳುವುದು ಮೀಸಲಾತಿ. ಇದನ್ನು ಗಟ್ಟಿಯಾಗಿ ಕೇಳುವುದಕ್ಕೆ ಭಯಪಡದೆ, ನಮ್ಮ ಜೊತೆ ಸುತ್ತಲಿನ ಸಮಾಜವನ್ನು ಬೆಳೆಸುವ ಕೆಲಸವನ್ನು ನಾವು ಮಾಡಬೇಕು' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕರೆ ನೀಡಿದ್ದಾರೆ.

ರವಿವಾರ ರವೀಂದ್ರ ಕಲಾಕ್ಷೇತ್ರದಲ್ಲಿ ನ್ಯಾಯಮೂರ್ತಿ ನಾಗಮೋಹನ ದಾಸ್ ಅವರು ಬರೆದಿರುವ ‘ಮೀಸಲಾತಿ-ಭ್ರಮೆ ಮತ್ತು ವಾಸ್ತವ' ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ‘ಸಂವಿಧಾನ ಪೂರ್ವದಲ್ಲಿ ಚಾತುರ್ವಣ ವ್ಯವಸ್ಥೆ ಅಸ್ಥಿತ್ವದಲ್ಲಿದ್ದಾಗ, ಶೂದ್ರರಿಗೆ ಅವಕಾಶ ಇರದೆ, ಬ್ರಾಹ್ಮಣ, ಕ್ಷತ್ರೀಯ ಹಾಗೂ ವೈಶ್ಯರಿಗೆ ಓದುವ, ಅಧಿಕಾರ ಚಲಾಯಿಸುವ ಹಾಗೂ ಸಂಪತ್ತನ್ನು ಅನುಭವಿಸಲು ಅವಕಾಶ ಇತ್ತು. ಇದು ಮೀಸಲಾತಿಯಲ್ಲವೇ? ಎಂದು ಅವರು ಪ್ರಶ್ನಿಸಿದರು. 

‘ಚಾತುರ್ವಣ ಪದ್ಧತಿಯಲ್ಲಿ ಶೂದ್ರರಿಗೆ ಕೆಳಹಂತದ ಕೆಲಸ ಕೊಟ್ಟು, ಇತರೆ ಮೂರು ವರ್ಣಗಳು ಉನ್ನತ ಹುದ್ದೆಗಳಲ್ಲಿದ್ದವು. ಇದು ಅಲಿಖಿತ ಮೀಸಲಾತಿ ಆಗಿತ್ತು. ಅನಾದಿ ಕಾಲದಿಂದ ಈ ಅಲಿಖಿತ ಮೀಸಲಾತಿಯನ್ನು ಒಪ್ಪಿದವರು ಇಂದು ಕೆಳವರ್ಗದವರಿಗೆ ನೀಡುತ್ತಿರುವ ಲಿಖಿತ ಮೀಸಲಾತಿಯನ್ನು ವಿರೋಧಿಸಿದ್ದಾರೆ. ರಾತ್ರೋರಾತ್ರಿ ಶೇ.10ರಷ್ಟು ಮೀಸಲಾತಿಯನ್ನು ಸಂವಿಧಾನ ಬಾಹಿರವಾಗಿ ಜಾರಿಗೊಳಿಸಿಕೊಂಡಿದ್ದಾರೆ' ಎಂದು ಸಿದ್ದರಾಮಯ್ಯ ದೂರಿದರು.  

‘ದೌರ್ಜನ್ಯಗಳನ್ನು ನೋಡಿಕೊಂಡು ಸುಮ್ಮನೆ ಕೂರುವಂತಹ ವಾತಾವರಣ ನಿರ್ಮಾಣವಾಗಿದೆ. ನಮ್ಮಲ್ಲಿ ಒಬ್ಬರು ಆ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದರೆ, ನಮ್ಮವರು ಯಾರು ಬೆಂಬಲಿಸಿ ಮಾತನಾಡುತ್ತಿಲ್ಲ. ಆದರೆ ಹತ್ತು ಮಂದಿ ವಿರೋಧಿಗಳು ನಮ್ಮನ್ನು ಟೀಕಿಸುತಿದ್ದಾರೆ ಎಂದು ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ಬೇಸರ ವ್ಯಕ್ತಪಡಿಸಿದರು. 

‘ರಾಮಕೃಷ್ಣ ಹೆಗ್ಡೆ ಮುಖ್ಯಮಂತ್ರಿಯಾಗಿದ್ದ ವೇಳೆ ಬಿ.ರಾಚಯ್ಯ ಅವರು ಶಿಕ್ಷಣ ಸಚಿವರಾಗಿದ್ದರು. ಆಗ ರಾಚಯ್ಯ ಅವರು ರಾಮಕೃಷ್ಣ ಹೆಗ್ಡೆಯವರನ್ನು ‘ನೀವು ಮಹಾನ್ ಮೇಧಾವಿಗಳು’ ಎಂದು ಹೊಗಳಿದ್ದರು. ಆಗ ಜೆ.ಎಚ್.ಪಟೇಲರು ಎದ್ದು ನಿಂತು ‘ಅವರು ಚತುರರಾಗಿರಲೇಬೇಕು, ಕಾರಣ ಅವರಿಗೆ 5ಸಾವಿರ ವರ್ಷಗಳ ಇತಿಹಾಸ ಇದೆ, ನನಗೆ ಬಸವಣ್ಣ ಬಂದ ಮೇಲಿನ 800 ವರ್ಷಗಳ ಇತಿಹಾಸ ಇದೆ, ನಿಮಗೆ ಸಂವಿಧಾನ ಬಂದ ಮೇಲೆ ಇತಿಹಾಸ ಆರಂಭವಾದುದ್ದು’ ಎಂದಿದ್ದರು. ಇದು ರಾಚಯ್ಯನವರಿಗೆ ಅರ್ಥವಾಗದೆ ಸುಮ್ಮನಾದರು ಎಂದು ಅವರು ನೆನಪಿಸಿಕೊಂಡರು. 

‘ಶಿಕ್ಷಣ, ಅಧಿಕಾರ ಮತ್ತು ಸಂಪತ್ತು ಯಾವುದೇ ಜನಾಂಗದ ಜಾತಿಯ ಸ್ವತ್ತಲ್ಲ. ಅಂಬೇಡ್ಕರ್ ಅವರು ಓದದೆ ಹೋಗಿದ್ದರೆ ಸಂವಿಧಾನ ರಚನೆ ಮಾಡಲು ಆಗುತ್ತಿತ್ತಾ? ಅಸ್ಪøಶ್ಯತೆ ಜನಾಂಗದಲ್ಲಿ ಹುಟ್ಟಿದ ಅಂಬೇಡ್ಕರ್ ಅವರು ಬುದ್ದಿವಂತಿಕೆಯಲ್ಲಿ ಯಾರಿಗಿಂತಲಾದರೂ ಕಡಿಮೆಯಿದ್ದರೆಯೇ? ಈ ದೇಶದ ಕೆಲವೇ ಮೇಧಾವಿ ರಾಜಕಾರಣಿ, ಬುದ್ದಿವಂತರಲ್ಲಿ ಅಂಬೇಡ್ಕರ್ ಒಬ್ಬರಾಗಿದ್ದಾರೆ. ಇಲ್ಲದಿದ್ದರೆ ಇಂಥಹ ಸಂವಿಧಾನ ಸಿಗಲು ಸಾಧ್ಯವಾಗುತ್ತಿತ್ತೇ? ಭಾರತದಲ್ಲಿ 4635 ಜಾತಿಗಳು ಇವೆ ಎಂದು ಪುಸ್ತಕದಲ್ಲಿ ಆಧಾರ ಸಮೇತ ಹೇಳಿದ್ದಾರೆ. ಇದನ್ನು ಹುಟ್ಟು ಹಾಕಿದವರು ಇಂದು ಮೀಸಲಾತಿ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆರ್ಯರು ಮಧ್ಯಪ್ರಾಚ್ಯದಿಂದ ಬಂದವರು. ನಾವೆಲ್ಲ ದ್ರಾವಿಡರು, ನಮ್ಮ ಮೇಲೆ ಆರ್ಯರು ದೌರ್ಜನ್ಯ ಮಾಡಿದ್ದಾರೆ. ಇದರಿಂದ ಕೆಲವರಿಗೆ ಕೋಪ ಬರುತ್ತದೆ' ಎಂದು ಕಿಡಿಕಾರಿದ ಅವರು, ‘ಅಡುಗೆ ಮಾಡುವ ಬ್ರಾಹ್ಮಣನಿಗೆ ನೀಡುವ ಗೌರವವನ್ನು ವಿದ್ಯಾವಂತ, ಶ್ರೀಮಂತ ದಲಿತನಿಗೆ ನೀಡುವುದಿಲ್ಲ. ಒಬ್ಬರಿಗೆ ನಮಸ್ಕಾರ ಸ್ವಾಮಿ ಎಂದರೆ ಇನ್ನೊಬ್ಬರಿಗೆ ಏಕವಚನದಲ್ಲಿ ಮಾತನಾಡುತ್ತೇವೆ. ಮೊದಲು ಇದನ್ನು ಕಿತ್ತೆಸೆದು ಸ್ವಾಭಿಮಾನ ರೂಢಿಸಿಕೊಳ್ಳಬೇಕು. ಆಗ ಮಾತ್ರವೇ ಗೌರವದಿಂದ ಬದುಕಲು ಸಾಧ್ಯ' ಎಂದು ಹೇಳಿದರು.

ಸರ್ವೋಚ್ಚ ನ್ಯಾಯಾಲಯವು ಒಳ ಮೀಸಲಾತಿ ನೀಡಲು ರಾಜ್ಯಗಳಿಗೆ ಶಕ್ತಿ ಇಲ್ಲ ಎಂದು ತೀರ್ಪು ನೀಡಿದೆ. ಆದರೆ ಕೆಲವೊಮ್ಮೆ ಅಧಿಕಾರ ಇದೆ ಎಂದು ಹೇಳುತ್ತದೆ. ಈ ಮೂಲಕ ಕುರಿತು ಗೊಂದಲವನ್ನು ಸೃಷ್ಟಿಯಾಗಿದೆ. ಹಾಗಾಗಿ ಇದರ ಬಗ್ಗೆ ಸಮಗ್ರ ಚರ್ಚೆ ನಡೆಸಿ ಕ್ರಮ ತೆಗೆದುಕೊಳ್ಳಬೇಕು. 

-ಸಿದ್ದರಾಮಯ್ಯ, ವಿರೋಧಪಕ್ಷದ ನಾಯಕ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News