ದಲಿತ ಚಳವಳಿ ಹಿಂದುತ್ವ ವಿರುದ್ಧ ಹೋರಾಟದ ಶಕ್ತಿ: ಡಾ.ವಡ್ಡಗೆರೆ ನಾಗರಾಜಯ್ಯ

Update: 2022-06-26 14:56 GMT

ಉಡುಪಿ, ಜೂ.೨೬: ದಲಿತ ಚಳುವಳಿಯು ಬಂಧುತ್ವ ಬೆಸೆಯುವ ಪರಿಕಲ್ಪನೆಯಾದರೆ ಹಿಂದುತ್ವ ಎಂಬುದು ಬಂಧುತ್ವ ಛೇಧಿಸುವ ಹಾಗೂ ಸಂಬಂಧ ಒಡೆಯುವ ಪರಿಕಲ್ಪನೆಯಾಗಿದೆ. ಹಿಂದುತ್ವ ಎಂಬುದು ಸಮಾನತೆ ಅಲ್ಲ. ದಲಿತ ಎಂಬ ಶಬ್ದಕ್ಕೆ ಹಿಂದುತ್ವದ ವಿರುದ್ಧ ಘರ್ಷಿಸುವ ದೊಡ್ಡ ಶಕ್ತಿ ಇದೆ ಎಂದು ಕವಿ, ಸಂಶೋಧಕ ಹಾಗೂ ಸಾಮಾಜಿಕ ಕಾರ್ಯಕರ್ತ ಡಾ.ವಡ್ಡಗೆರೆ ನಾಗರಾಜಯ್ಯ ಹೇಳಿದ್ದಾರೆ.

ಅಂಬೇಡ್ಕರ್ ಯುವಸೇನೆ ಉಡುಪಿ ಜಿಲ್ಲೆ ಇದರ ಆಶ್ರಯದಲ್ಲಿ ರವಿವಾರ ಆದಿಉಡುಪಿಯ ಜಿಲ್ಲಾ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾದ ಸಾಂಸ್ಕೃತಿಕ ವಸಾಹತುಶಾಹಿ ಮತ್ತು ದಲಿತ ಚಳವಳಿಯ ಪ್ರತಿರೋಧ ಎಂಬ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ದಲಿತ ಚಳವಳಿಯು ಸಮಾಜದಲ್ಲಿ ಸಂಕಷ್ಟದಲ್ಲಿರುವ ಹಾಗೂ ದುಃಖಿತರನ್ನು ತಬ್ಬಿಕೊಳ್ಳುವ ವಿಶಾಲ ಬಂಧುತ್ವದ ಚಳವಳಿಯಾಗಿರುವ ಕಾರಣಕ್ಕೆಯೇ ಹಿಂದುತ್ವದ ವಿರುದ್ಧ ಸೆಣಸುವ ಹಾಗೂ ಹೋರಾಟದ ಶಕ್ತಿಯನ್ನು ತನ್ನೊಳಗೆ ಧಾರಣೆ ಮಾಡಿಕೊಂಡಿದೆ ಎಂದು ಅವರು ತಿಳಿಸಿದರು.

ಬಿ.ಕೃಷ್ಣಪ್ಪ ಕಟ್ಟಿದ ದಲಿತ ಚಳವಳಿಯಿಂದ ಇಂದು ಬಡವರ, ದಲಿತರ, ಶೋಷಿತರ ಮನೆಯೊಳಗೆ ಹೋರಾಟದ ದೀಪ ಬೆಳಗುತ್ತಿದೆ. ಹೊರಗಡೆ ನಮ್ಮ ಸಂಸ್ಕೃತಿಯೇ ಶ್ರೇಷ್ಠ ಎಂದು ಬೀಗುವ ಬಿರುಗಾಳಿಗೆ ಬೀಸುತ್ತಿದೆ. ಇದಕ್ಕೆ ಸಿಕ್ಕಿ ಈ ದೀಪ ಹಾರದಂತೆ ಕಾಪಾಡಿಕೊಳ್ಳಬೇಕಾಗಿದೆ. ಇದು ಕೇವಲ ದಲಿತ ಜವಾಬ್ದಾರಿ ಮಾತ್ರವಲ್ಲ, ಸಮಸ್ತ ಪ್ರಜ್ಞಾವಂತ ನಾಗರಿಕರ ಜವಾಬ್ದಾರಿಯಾಗಿದೆ. ದಲಿತರ ಸಮಸ್ಯೆಗಳಿಗೆ ಕೇವಲ ದಲಿತರು, ಮಹಿಳೆಯರ ಸಮಸ್ಯೆಗಳಿಗೆ ಮಹಿಳೆ ಯರು ಮಾತ್ರ ಹೋರಾಟ ಮಾಡುವುದಲ್ಲ. ಎಲ್ಲರ ಒಳಗೊಳ್ಳುವಿಕೆಯಿಂದ ಹೋರಾಟ ನಡೆಸಬೇಕಾಗಿದೆ ಎಂದರು.

ನಮ್ಮ ದೇಶದ ಕೇವಲ ಶೇ.೩ರಷ್ಟಿರುವ ಜನವರ್ಗ ಶೇ.೯೭ರಷ್ಟಿರುವ ಜನರ ಮೇಲೆ ತಮ್ಮ ಸಂಸ್ಕೃತಿ, ನಂಬಿಕೆ, ಗೊಡ್ಡು ಆಚಾರ ವಿಚಾರ, ಶಾಸ್ತ್ರ, ರಾಜಕೀಯ ಸಿದ್ಧಾಂತವನ್ನು ಹೇರುತ್ತಿದೆ. ಶೇ.೩ರ ಜನರ ಸಂಸ್ಕೃತಿ ಒಳಗೆ ಇರುವ ಮೌಢ್ಯ, ಕಂದಾಚಾರ, ಜಾತಿ ವ್ಯವಸ್ಥೆಯನ್ನು ಬಗ್ಗೆ ಮಾತನಾಡುವರನ್ನು ದೇಶದ್ರೋಹಿ, ಧರ್ಮದ್ರೋಹಿ ಗಳೆಂದು ಬಿಂಬಿಸಲಾಗುತ್ತಿದೆ. ಅವರ ಸಂಸ್ಕೃತಿಯ ಪರ ಮಾತ ನಾಡುವವರನ್ನು ದೇಶಭಕ್ತರೆಂದು ಕರೆಯಲಾ ಗುತ್ತಿದೆಂದು ಅವರು ಟೀಕಿಸಿದರು.

ಅಧ್ಯಕ್ಷತೆಯನ್ನು ಯುವಸೇನೆ ಜಿಲ್ಲಾಧ್ಯಕ್ಷ ಹರೀಶ್ ಸಾಲ್ಯಾನ್ ವಹಿಸಿದ್ದರು. ಮುಖ್ಯಅತಿಥಿಗಳಾಗಿ ನೇತ್ರತಜ್ಞ ಡಾ.ಪ್ರೇಮದಾಸ್ ಕಾರ್ಕಳ, ಪ್ರಗತಿಪರ ಚಿಂತಕ ಶ್ರೀರಾಮ ದಿವಾಣ, ದಲಿತ ಮುಖಂಡ, ವಕೀಲ ಮಂಜುನಾಥ ಗಿಳಿಯಾರು, ಚಿಂತಕ ವಿಜಯ್ ಉಪಸ್ಥಿತರಿದ್ದರು.

ಜನಪರ ಹೋರಾಟಗಾರ ಜಯನ್ ಮಲ್ಪೆಪ್ರಾಸ್ತಾವಿಕವಾಗಿ ಮಾತನಾಡಿ ದರು. ಅಂಬೇಡ್ಕರ್ ಯುವಸೇನೆಯ ಗೀತಾ ಉಡುಪಿ ಸ್ವಾಗತಿಸಿದರು. ಭಗವಾನ್ ಮಲ್ಪೆ ವಂದಿಸಿದರು. ಹಿರಿಯ ದಲಿತ ಮುಖಂಡ ದಯಾಕರ್ ಮಲ್ಪೆ ಕಾರ್ಯಕ್ರಮ ನಿರೂಪಿಸಿದರು.

ಲೇಖಕರ ಅಭಿವ್ಯಕ್ತಿ ಸ್ವಾತಂತ್ರ್ಯದ ವಿರುದ್ಧ ಹಲ್ಲೆ

ಲೇಖಕರು ಪಠ್ಯ ವಾಪಾಸ್ಸಾತಿ ಚಳವಳಿ ನಡೆಸಿದರೂ, ದೇವನೂರು, ದೇವೇ ಗೌಡರು, ಸಿದ್ಧರಾಮಯ್ಯ ಪತ್ರ ಬರೆದರೂ, ಎಲ್ಲ ಕಡೆಗಳಿಂದ ಹೋರಾಟ ನಡೆದರೂ ಸರಕಾರ ಪಠ್ಯ ಪುಸ್ತಕಗಳನ್ನು ವಾಪಾಸ್ಸು ಪಡೆದುಕೊಂಡಿಲ್ಲ. ಇದು  ಲೇಖಕರ ಅಭಿವ್ಯಕ್ತಿ ಸ್ವಾತಂತ್ರ್ಯದ ವಿರುದ್ಧ ನಡೆಸುತ್ತಿರುವ ಹಲ್ಲೆಯಾಗಿದೆ ಎಂದು ಡಾ.ವಡ್ಡಗೆರೆ ನಾಗರಾಜಯ್ಯ ತಿಳಿಸಿದರು.  

ಪಠ್ಯದ ಮೂಲಕ ಮಕ್ಕಳ ಎಳೆ ಮೆದುಳಿಗೆ ಸಾಂಸ್ಕೃತಿಕ ವಿಷ ಉಣಿಸಿದರೆ ತಲೆಮಾರುಗಳೇ ನಾಶವಾಗಲಿದೆ. ಪಠ್ಯ ಪರಿಷ್ಕರಣಾ ಸಮಿತಿಯಲ್ಲಿ ಬ್ರಾಹ್ಮಣರನ್ನು ಮಾತ್ರ ಸೇರಿಸಿಕೊಳ್ಳುವ ಮೂಲಕ ಪಠ್ಯದಲ್ಲಿ ಸಾಂಸ್ಕೃತಿಕ ವಸಹತುಶಾಹಿ ತರುವ ಯತ್ನ ಮಾಡಲಾಗುತ್ತಿದೆ. ಇದೆಲ್ಲವೂ ಸಾಂಸ್ಕೃತಿಕ ಹೇರಿಕೆಯಾಗಿದೆ ಎಂದು ಅವರು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News