ತೀಸ್ತಾ ಸೆಟಲ್ವಾಡ್ ಬಂಧನ: ಹಲವಾರು ಸಂಘಟನೆಗಳಿಂದ ಗುಜರಾತ್ ಪೊಲೀಸರು, ಸರ್ವೋಚ್ಚ ನ್ಯಾಯಾಲಯದ ಟೀಕೆ

Update: 2022-06-26 16:33 GMT

ಹೊಸದಿಲ್ಲಿ, ಜೂ.26: 2002ರ ಗೋಧ್ರಾ ದಂಗೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧದ ಪ್ರಕರಣದಲ್ಲಿ ಅರ್ಜಿದಾರರಾಗಿದ್ದ ಝಾಕಿಯಾ ಜಾಫ್ರಿಯವರ ಬೆಂಬಲಕ್ಕೆ ನಿಂತಿದ್ದ ಖ್ಯಾತ ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರನ್ನು ಬಂಧಿಸಿದ್ದಕ್ಕಾಗಿ ಹಲವಾರು ಮಾನವ ಹಕ್ಕುಗಳ ಸಂಘಟನೆಗಳು ಮತ್ತು ವಕೀಲರು ಗುಜರಾತ ಪೊಲೀಸರು ಮತ್ತು ಸರ್ವೋಚ್ಚ ನ್ಯಾಯಾಲಯವನ್ನು ಟೀಕಿಸಿದ್ದಾರೆ.

ಸೆಟಲ್ವಾಡ್ ಬಂಧನವನ್ನು ಖಂಡಿಸಿ ಶನಿವಾರ ಹೇಳಿಕೆಯನ್ನು ಹೊರಡಿಸಿರುವ ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಇಂಡಿಯಾ,‘ಭಾರತೀಯ ಅಧಿಕಾರಿಗಳು ಸೆಟಲ್ವಾಡ್‌ರನ್ನು ಬಂಧಿಸಿರುವುದು ತಮ್ಮ ಮಾನವ ಹಕ್ಕುಗಳ ದಾಖಲೆಯನ್ನು ಪ್ರಶ್ನಿಸುವವರ ವಿರುದ್ಧದ ನೇರ ಪ್ರತೀಕಾರ ಕ್ರಮವಾಗಿದೆ. ಇದು ನಾಗರಿಕ ಸಮಾಜಕ್ಕೆ ಬೆದರಿಕೆಯ ಸಂದೇಶವನ್ನು ರವಾನಿಸಿದೆ ಮತ್ತು ದೇಶದಲ್ಲಿ ಭಿನ್ನಾಭಿಪ್ರಾಯಕ್ಕೆ ಅವಕಾಶವನ್ನು ಇನ್ನಷ್ಟು ಕುಗ್ಗಿಸಿದೆ. ಮಾನವ ಹಕ್ಕುಗಳ ಕಾರ್ಯಕರ್ತರನ್ನು ಅವರ ಶಾಸನಬದ್ಧ ಮಾನವ ಹಕ್ಕುಗಳ ಕೆಲಸಕ್ಕಾಗಿ ಗುರಿಯಾಗಿಸಿಕೊಳ್ಳುವುದು ಸ್ವೀಕಾರಾರ್ಹವಲ್ಲ. ಭಾರತೀಯ ಅಧಿಕಾರಿಗಳು ಸೆಟ್ಲವಾಡ್‌ರನ್ನು ತಕ್ಷಣ ಬಿಡುಗಡೆಗೊಳಿಸಬೇಕು ಮತ್ತು ಭಾರತೀಯ ನಾಗರಿಕ ಸಮಾಜ ಹಾಗೂ ಮಾನವ ಹಕ್ಕುಗಳ ಸಮರ್ಥಕರಿಗೆ ಕಿರುಕುಳವನ್ನು ನಿಲ್ಲಿಸಬೇಕು’ ಎಂದು ಹೇಳಿದೆ.

ಗುಜರಾತ ಎಟಿಎಸ್‌ನಿಂದ ಸೆಟಲ್ವಾಡ್ ಬಂಧನವನ್ನು ಖಂಡಿಸಿರುವ ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳೆಯರ ಸಂಘ (ಎಐಡಿಡಬ್ಲುಎ)ವು,‘ಗುಜರಾತ ಹತ್ಯಾಕಾಂಡದಲ್ಲಿ ಕ್ರೂರವಾಗಿ ಕೊಲ್ಲಲ್ಪಟ್ಟ ಎಹ್ಸಾನ್ ಜಾಫ್ರಿಯವರ ಪತ್ನಿ ಝಕಿಯಾ ಜಾಫ್ರಿ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಿರುವ ಸರ್ವೋಚ್ಚ ನ್ಯಾಯಾಲಯದ ದುರದೃಷ್ಟಕರ ನಿರ್ಧಾರದ ಬೆನ್ನಲ್ಲೇ ಗುಜರಾತ ಪೊಲಿಸರು ಜಾಫ್ರಿಯವರ ಬೆಂಬಲಕ್ಕೆ ಬಂಡೆಯಂತೆ ನಿಂತಿದ್ದ ಸೆಟಲ್ವಾಡ್ ರನ್ನು ಬಂಧಿಸಿದ್ದಾರೆ. ಇದಕ್ಕಾಗಿ ಮತ್ತು ಅವರ ಅನುಕರಣೀಯ ಧೈರ್ಯದ ಇತರ ಕಾರ್ಯಗಳಿಗಾಗಿ ಅವರನ್ನು ಬಲಿಪಶು ಮಾಡಲಾಗಿದೆ ’ಎಂದು ಹೇಳಿದೆ. ಅವರ ವಿರುದ್ಧದ ಪ್ರಕರಣವನ್ನು ತಕ್ಷಣ ಹಿಂದೆಗೆದುಕೊಳ್ಳಬೇಕು ಮತ್ತು ಕಿರುಕುಳವನ್ನು ನಿಲ್ಲಿಸಬೇಕು ಎಂದು ಅದು ಆಗ್ರಹಿಸಿದೆ.

‘ಭಾರತಕ್ಕೆ ಝಕಿಯಾ ಜಾಫ್ರಿಯವರ ಧೈರ್ಯ ಮತ್ತು ಸ್ಥೈರ್ಯವನ್ನು ಹೊಂದಿರುವ ಹೆಚ್ಚಿನ ಪ್ರಜೆಗಳ ಮತ್ತು ಸೆಟ್ಲ್‌ವಾಡ್ ಅವರಂತಹ ಇನ್ನಷ್ಟು ಮಾನವ ಹಕ್ಕುಗಳ ಹೋರಾಟಗಾರರ ಅಗತ್ಯವಿದೆ. ನಾವು ಅವರ ಜೊತೆಯಲ್ಲಿದ್ದೇವೆ ’ಎಂದು ಲೆಫ್ಟ್‌ವರ್ಡ್ ಬುಕ್ಸ್ ಹೇಳಿಕೆಯಲ್ಲಿ ತಿಳಿಸಿದೆ.

ಪ್ರತ್ಯೇಕವಾಗಿ ಹಲವಾರು ವಕೀಲರು ಸಹ, ಝಕಿಯಾ ಜಾಫ್ರಿಯವರ ಅರ್ಜಿಯನ್ನು ವಜಾಗೊಳಿಸುವಾಗ ಪ್ರಕ್ರಿಯೆಯ ಇಂತಹ ದುರುಪಯೋಗದಲ್ಲಿ ಪಾಲ್ಗೊಂಡಿರುವ ಎಲ್ಲರ ವಿರುದ್ಧ ಕಾನೂನು ಕ್ರಮವನ್ನು ಜರುಗಿಸುವ ಅಗತ್ಯವಿದೆ ಎಂದು ಹೇಳಿರುವ ಸರ್ವೋಚ್ಚ ನ್ಯಾಯಾಲಯವನ್ನು ಖಂಡಿಸಿದ್ದಾರೆ.

‘ಜಾಗತಿಕ ನ್ಯಾಯಶಾಸ್ತ್ರಕ್ಕೆ ಭಾರತೀಯ ಸರ್ವೋಚ್ಚ ನ್ಯಾಯಾಲಯದ ಕೊಡುಗೆಯೆಂದರೆ ವ್ಯಕ್ತಿಯನ್ನು ಬಂಧಿಸುವಂತೆ ಸರಕಾರಕ್ಕೆ ಸೂಚಿಸುವ ಮೂಲಕ ವ್ಯಕ್ತಿ ವಿರುದ್ಧ ಸರಕಾರ ಪ್ರಕರಣವನ್ನು ಇತ್ಯರ್ಥಗೊಳಿಸುವುದು. ಇದೊಂದು ಗಮನಾರ್ಹ ಸಾಂವಿಧಾನಿಕ ನವೀನತೆಯಾಗಿದೆ’ ಎಂದು ಸಾಂವಿಧಾನಿಕ ವಕೀಲ ಮತ್ತು ಕಾನೂನು ತಜ್ಞ ಗೌತಮ ಭಾಟಿಯಾ ಟ್ವೀಟಿಸಿದ್ದಾರೆ.

2002ರ ಗುಜರಾತ ದಂಗೆಗಳ ಪ್ರಕರಣದಲ್ಲಿ ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿ ಸೇರಿದಂತೆ 64 ಜನರಿಗೆ ವಿಶೇಷ ತನಿಖಾ ತಂಡವು ಕ್ಲೀನ್ ಚಿಟ್ ನೀಡಿದ್ದನ್ನು ಪ್ರಶ್ನಿಸಿ ಝಕಿಯಾ ಜಾಫ್ರಿ ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರ ಸರ್ವೋಚ್ಚ ನ್ಯಾಯಾಲಯವು ವಜಾಗೊಳಿಸಿತ್ತು. ಅದರ ಬೆನ್ನಲ್ಲೇ ಶನಿವಾರ ಗುಜರಾತ ಎಟಿಎಸ್ ಸೆಟ್ಲವಾಡ್‌ರನ್ನು ಮುಂಬೈನ ಅವರ ನಿವಾಸದಿಂದ ವಶಕ್ಕೆ ತೆಗೆದುಕೊಂಡು ಅಹ್ಮದಾಬಾದ್‌ಗೆ ಕರೆದೊಯ್ದಿತ್ತು. ರವಿವಾರ ಸೆಟ್ಲವಾಡ್‌ರನ್ನು ನ್ಯಾಯಾಲಯದಲ್ಲಿ ಹಾಜರುಪಡಿಸುವ ಮುನ್ನ ಅಹ್ಮದಾಬಾದ್‌ನ ಎಸ್‌ವಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಗೊಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿದವು. ಗುಜರಾತಿನ ಇಬ್ಬರು ಐಪಿಎಸ್ ಅಧಿಕಾರಿಗಳಾದ ಸಂಜೀವ ಭಟ್ ಮತ್ತು ಆರ್.ಬಿ.ಶ್ರೀಕುಮಾರ ಅವರು ಸೆಟ್ಲವಾಡ್ ಅವರೊಂದಿಗೆ ಆರೋಪಿಗಳಾಗಿದ್ದಾರೆ. ಬೇರೊಂದು ಪ್ರಕರಣದಲ್ಲಿ ಭಟ್ ಈಗಾಗಲೇ ಜೈಲಿನಲ್ಲಿದ್ದರೆ ಶ್ರೀಕುಮಾರ ಅವರನ್ನು ಶನಿವಾರ ಗಾಂಧಿನಗರದ ಅವರ ನಿವಾಸದಿಂದ ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News