ಧ್ವನಿ ಇಲ್ಲದವರ ನೋವಿಗೂ ಸ್ಪಂದಿಸಿ: ಸಚಿವ ಆನಂದ್ ಸಿಂಗ್ ಸಲಹೆ

Update: 2022-06-26 16:46 GMT

ವಿಜಯನಗರ, ಜೂ. 26: ‘ಸರಕಾರಿ ನೌಕರರು ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುವುದರ ಜೊತೆಗೆ, ಧ್ವನಿ ಇಲ್ಲದ ಜನರ ನೋವಿಗೂ ಸ್ಪಂದಿಸುವ ಕೆಲಸವನ್ನು ಅಗತ್ಯವಾಗಿ ಮಾಡಬೇಕು' ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಇಂದಿಲ್ಲಿ ಸಲಹೆ ಮಾಡಿದ್ದಾರೆ.

ರವಿವಾರ ನಗರದಲ್ಲಿ ಕರ್ನಾಟಕ ರಾಜ್ಯ ಎಸ್ಸಿ-ಎಸ್ಟಿ ನೌಕರರ ಸಮನ್ವಯ ಸಮಿತಿ ಜಿಲ್ಲಾ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ‘ಸಂವಿಧಾನದ ಮೂಲಕ ಅಗತ್ಯ ಸೌಲಭ್ಯ ಪಡೆದುಕೊಳ್ಳುವ ವ್ಯವಸ್ಥೆ ಇದ್ದರೂ ಅಸಂಖ್ಯಾತ ಜನ ಅವಕಾಶ ವಂಚಿತರಾಗುತ್ತಿದ್ದಾರೆ. ಸ್ವಾತಂತ್ರ್ಯ ಬಂದ ನಂತರ ಯಾವುದೇ ಸರಕಾರ ಬಂದರೂ ಬಡವರಿಗೆ ಸೌಲಭ್ಯಗಳು ಸಿಗುತ್ತಿಲ್ಲ. ಹೀಗಾಗಿ ನೌಕರರು ಅವಕಾಶ ವಂಚಿತರ ಪರ ನಿಲ್ಲಬೇಕು' ಎಂದು ಸೂಚಿಸಿದರು.

‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರು ಅನೇಕ ಜನರು ಉನ್ನತ ಹುದ್ದೆಯಲ್ಲಿದ್ದೂ, ತಮ್ಮ ಕೆಲಸ- ಕಾರ್ಯಗಳು ನೀವು ಮತ್ತು ನಿಮ್ಮ ಮನೆಗೆ ಸೀಮಿತವಾಗದೇ ನಿಮ್ಮದೆ ಸಮುದಾಯದ ಜನರಿಗೆ ಆಸರೆಯಾಗಬೇಕು. ಸಮಾಜದಲ್ಲಿ ಶೋಷಿತ ಸಮುದಾಯದ ಏಳ್ಗೆಗಾಗಿ ಶ್ರಮಿಸಬೇಕು. ಸರಕಾರದ ಯೋಜನೆಗಳನ್ನು ಅಶಕ್ತರಿಗೆ ತಲುಪಿಸಬೇಕು' ಎಂದು ಅವರು ಸಲಹೆ ನೀಡಿದರು.

‘ಸರಕಾರಿ ನೌಕಕರ ಉನ್ನತ್ತಿಗಾಗಿ ರಾಜ್ಯ ಎಸ್ಸಿ-ಎಸ್ಟಿ ನೌಕರರ ಸಮನ್ವಯ ಸಮಿತಿಯನ್ನು 2005ರಲ್ಲೇ ಸ್ಥಾಪನೆ ಮಾಡಲಾಗಿದ್ದು, ವಿಜಯನಗರ ಜಿಲ್ಲೆಯಲ್ಲಿ ನೂತನ ಜಿಲ್ಲಾ ಘಟಕ ಆರಂಭಿಸಲಾಗಿದೆ. ನೌಕರರ ಸಂಘಟನೆ ನೌಕರರು ಸೇರಿದಂತೆ ಎಲ್ಲರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಲಿದೆ' ಎಂದು ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷ ಜಿ. ಶಿವಕುಮಾರ್ ತಿಳಿಸಿದರು.

ಇದೇ ಸಂದರ್ಭದಲ್ಲಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚಿ ಅಂಕ ಗಳಿಸಿದ ಸಮುದಾಯದ 25 ಮಂದಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಸರಕಾರಿ ಎಸ್ಸಿ-ಎಸ್ಟಿ ನೌಕರರ ಸಮನ್ವಯ ಸಮಿತಿ ಅಧ್ಯಕ್ಷ ಡಿ.ಶಿವಶಂಕರ್, ಉಪಾಧ್ಯಕ್ಷ ಆರ್.ಮೋಹನ್, ಪ್ರಧಾನ ಕಾರ್ಯದರ್ಶಿ ಡಾ.ಎಸ್. ವಿಜಯಕುಮಾರ್, ಕಾರ್ಯದರ್ಶಿ ಎಚ್.ಗೋಪಾಲಕೃಷ್ಣ, ನಗರಸಭೆ ಅಧ್ಯಕ್ಷೆ ಸುಂಕಮ್ಮ ಸೇರಿದಂತೆ ಸ್ಥಳೀಯ ಪದಾಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News