​ಉತ್ತರಪ್ರದೇಶ:‌ ರೊಟ್ಟಿ ಕುರಿತ ವಿವಾದ; ಯುವಕನ ಥಳಿಸಿ ಹತ್ಯೆ

Update: 2022-06-27 18:33 GMT

ಬರೇಲಿ (ಉತ್ತರಪ್ರದೇಶ): ಉತ್ತರಪ್ರದೇಶದ ಬರೇಲಿಯ    ಕಾಂಟ್ ಪೊಲೀಸ್ ಠಾಣೆ ಪ್ರದೇಶದಲ್ಲಿ ರೊಟ್ಟಿ ಕುರಿತ ವಿವಾದದಲ್ಲಿ ೩೦ ವರ್ಷದ ವ್ಯಕ್ತಿಯೋರ್ವನನ್ನು ಹತ್ಯೆಗೈಯ್ಯಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಈ ಘಟನೆ ಎರಡು ಸಮುದಾಯಗಳಿಗೆ ಸಂಬಂಧಿಸಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಈ ಪ್ರದೇಶದಲ್ಲಿ ಹೆಚ್ಚುವರಿ ಪಡೆಯನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ನಗರದ ಚಾನೆಹಾಟಾ ಪ್ರದೇಶದಲ್ಲಿ ರವಿವಾರ ಈ ಘಟನೆ ನಡೆದಿದೆ. ತನ್ನ ಹುಟ್ಟು ಹಬ್ಬ ಆಚರಣೆಯ ಹಿನ್ನೆಲೆಯಲ್ಲಿ ಸನ್ನಿ ಎಂಬಾತ ಇಲ್ಲಿನ ರೆಸ್ಟೋರೆಂಟ್‌ನಲ್ಲಿ ೧೫೦ ರೊಟ್ಟಿಗಳಿಗೆ ಆದೇಶ ನೀಡಿದ್ದ. ಹಣ ಕೂಡ ಪಾವತಿ ಮಾಡಿದ್ದ. ಆದರೆ, ಮಾಲಕ ೪೦ ರೊಟ್ಟಿಗಳನ್ನು ಮಾತ್ರ ಕಳುಹಿಸಿದ್ದ.

ಈ ಹಿನ್ನೆಲೆಯಲ್ಲಿ ಸನ್ನಿ ತನ್ನ ಸೋದರ ಸಂಬಂಧಿಯೊಂದಿಗೆ ರೆಸ್ಟೋರೆಂಟ್‌ಗೆ ತೆರಳಿ ವಿಚಾರಿಸಿದ್ದ.  ಈ ಸಂದರ್ಭ ಅವರ ನಡುವೆ ವಾಗ್ವಾದ ನಡೆದಿತ್ತು. ಹೊಟೇಲ್‌ನ ಮಾಲಕ ಝೀಶನ್ ಹಾಗೂ ಸಿಬ್ಬಂದಿ ಇಬ್ಬರಿಗೂ ಥಳಿಸಿದರು. ಗಂಭೀರ ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಲ್ಲಿ ಸನ್ನಿ ಮೃತಪಟ್ಟಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿ ಝೀಶನ್‌ನ ಇಬ್ಬರು ಸೋದರ ಸಂಬಂಧಿಗಳನ್ನು ಹಾಗೂ ಓರ್ವ ಕಾರ್ಮಿಕನನ್ನು ಬಂಧಿಸಲಾಗಿದೆ. ಝೀಶನ್ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News