ಬಿಎಂಟಿಸಿಯಿಂದ ದಿನಾಂಕವಾರು ಮಾಸಿಕ ಪಾಸ್ ವಿತರಣೆ

Update: 2022-06-29 18:31 GMT

ಬೆಂಗಳೂರು, ಜೂ. 29: ಬಿಎಂಟಿಸಿ ಪ್ರಯಾಣಿಕರ ಅನುಕೂಲಕ್ಕಾಗಿ ಸಾಮಾನ್ಯ ಮಾಸಿಕ, ಹಿರಿಯ ನಾಗರಿಕರ, ವಜ್ರ ಮತ್ತು ವಾಯುವಜ್ರ ಮಾಸಿಕ ಪಾಸುಗಳನ್ನು ಪಡೆಯಲು ಅನುವಾಗುವಂತೆ ದಿನಾಂಕವಾರು ಮಾಸಿಕ ಪಾಸುಗಳನ್ನು ಜುಲೈ 29ರಿಂದ ಅನ್ವಯವಾಗುವಂತೆ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಪ್ರಯಾಣಿಕರು ದಿನಾಂಕವಾರು ಮಾಸಿಕ ಪಾಸುಗಳನ್ನು ಪಾಸು ಪಡೆದ ದಿನಾಂಕದಿಂದ ಒಂದು ತಿಂಗಳು ಮಾನ್ಯತೆ ಇರುವಂತೆ ಪಡೆಯಬಹುದಾಗಿದೆ. ಸಂಸ್ಥೆಯು ಮಾಸಿಕ ಪಾಸಿನೊಂದಿಗೆ ಸಂಸ್ಥೆಯ ಗುರುತಿನ ಚೀಟಿಯನ್ನು ಹೊಂದುವುದನ್ನು ನಿಗದಿಪಡಿಸಲಾಗಿತ್ತು. ಆದರೆ ಜುಲೈ-2022ರಿಂದ ಸಂಸ್ಥೆಯ ಗುರುತಿನ ಚೀಟಿಯನ್ನು ಹಿಂಪಡೆಯಲಾಗುವುದು.

ಸಾರ್ವಜನಿಕ ಪ್ರಯಾಣಿಕರು ಸಂಸ್ಥೆಯ ಮಾಸಿಕ ಪಾಸುಗಳನ್ನು ಪಡೆಯಲು ಹಾಗೂ ಪ್ರಯಾಣಿಸುವಾಗ ಪಾಸಿನೊಂದಿಗೆ, ಚಾಲನಾ ಪರವಾನಿಗೆ, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಪಾಸ್‍ಪೋರ್ಟ್, ಬಿಎಂಟಿಸಿ ಗುರುತಿನ ಚೀಟಿ(ಮಾನ್ಯತಾ ಅವಧಿ ಹೊಂದಿರುವವರೆಗೆ) ಇವುಗಳಲ್ಲಿ ಯಾವುದಾದರೂ ಭಾವಚಿತ್ರವಿರುವ ಗುರುತಿನ ಚೀಟಿಯನ್ನು ಹೊಂದಿರಬೇಕು.

ಪಾಸ್ ವಿತರಣೆ ಮಾಡುವಾಗ ಪ್ರಯಾಣಿಕರು ಹಾಜರುಪಡಿಸುವ ಗುರುತಿನ ಚೀಟಿಯ ಸಂಖ್ಯೆಯನ್ನು ಪಾಸಿನಲ್ಲಿ ನಮೂದಿಸಿ ವಿತರಣೆ ಮಾಡಲಾಗುವುದು. ಪ್ರಯಾಣಿಕರು ಪಾಸಿನಲ್ಲಿ ನಮೂದಿಸಿದ ಗುರುತಿನ ಚೀಟಿಯನ್ನು ಹೊಂದಿ ಬಸ್ಸುಗಳಲ್ಲಿ ಪ್ರಯಾಣಿಸುವುದು ಕಡ್ಡಾಯ. ಸಾರ್ವಜನಿಕರಿಗೆ ಸುಲಭ ಹಾಗೂ ತ್ವರಿತವಾಗಿ ಪಾಸುಗಳು ದೊರಕಲು ಅನುವಾಗುವಂತೆ ಟಿಟಿಎಂಸಿ ಮತ್ತು ಬಸ್ ನಿಲ್ದಾಣಗಳಲ್ಲಿ ಒಟ್ಟು 72 ಸ್ಥಳಗಳಲ್ಲಿ ದಿನಾಂಕವಾರು ಪಾಸುಗಳನ್ನು ವಿತರಣೆ ಮಾಡಲಾಗುತ್ತಿದೆ. 90 ಬೆಂಗಳೂರು ಒನ್ ಕೇಂದ್ರಗಳಲ್ಲಿ ಹಾಗೂ ಬೆಂಗಳೂರಿನ ಖಾಸಗಿ ಏಜೆನ್ಸಿಗಳ ಮೂಲಕ ದಿನಾಂಕವಾರು ಪಾಸುಗಳನ್ನು ವಿತರಿಸಲಾಗುತ್ತಿದೆ ಎಂದು ಸಂಸ್ಥೆಯ ಅಧಿಕೃತ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News