"ಸೆಟಲ್ವಾಡ್ ಬಂಧನ ತನ್ನ ಉದ್ದೇಶವಾಗಿರಲಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಬೇಕು"

Update: 2022-06-30 15:06 GMT

ಹೊಸದಿಲ್ಲಿ,ಜೂ.30: ಇತ್ತೀಚಿನ ಬೆಳವಣಿಗೆಗಳಿಂದ ಕಳವಳಗೊಂಡಿರುವ 300ಕ್ಕೂ ಅಧಿಕ ಗಣ್ಯರು ಭಾರತದ ಮುಖ್ಯ ನ್ಯಾಯಾಧೀಶ (ಸಿಜೆಐ) ಎನ್.ವಿ.ರಮಣ ಅವರಿಗೆ ಪತ್ರವೊಂದನ್ನು ಬರೆದಿದ್ದು, ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಮತ್ತು ಮಾಜಿ ಗುಜರಾತ್ ಡಿಜಿಪಿ ಆರ್.ಬಿ.ಶ್ರೀಕುಮಾರ್ ಅವರ ಬಂಧನವು ನ್ಯಾಯಾಲಯಗಳಲ್ಲಿ ವಕಾಲತ್ತುಗಳು ಮತ್ತು ದೇಶದಲ್ಲಿ ಕಾನೂನಿನ ಆಡಳಿತಕ್ಕೆ ಬೆದರಿಕೆಯ ಸಂದೇಶವನ್ನು ರವಾನಿಸುತ್ತದೆ ಎಂದು ಹೇಳಿದ್ದಾರೆ ಎಂದು thewire.in ವರದಿ ಮಾಡಿದೆ.

2002ರ ಗುಜರಾತ್ ದಂಗೆಗಳಲ್ಲಿಯ ಪಾತ್ರಕ್ಕಾಗಿ ರಾಜ್ಯದ ಆಗಿನ ಮುಖ್ಯಮಂತ್ರಿ ಹಾಗೂ ಹಾಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರರ ವಿರುದ್ಧ ಪ್ರಕರಣವನ್ನು ದಾಖಲಿಸಲು ಕೆಳ ನ್ಯಾಯಾಲಯದ ನಿರಾಕರಣೆಯನ್ನು ಪ್ರಶ್ನಿಸಿ ಝಕಿಯಾ ಜಾಫ್ರಿ ಮತ್ತು ಸೆಟಲ್ವಾಡ್ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ಸರ್ವೋಚ್ಚ ನ್ಯಾಯಾಲಯವು ಜೂ.25ರಂದು ವಜಾಗೊಳಿಸಿತ್ತು. ಮರುದಿನವೇ ಗುಜರಾತಿನ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್)ವು ಸೆಟಲ್ವಾಡ್ ಮತ್ತು ಶ್ರೀಕುಮಾರ ಅವರನ್ನು ಬಂಧಿಸಿತ್ತು.

ನ್ಯಾಯಾಲಯಗಳಲ್ಲಿ ಶ್ರದ್ಧೆಯಿಂದ ಪ್ರಕರಣವನ್ನು ಮುಂದುವರಿಸುವ ಅರ್ಜಿದಾರ ಅಥವಾ ಸಾಕ್ಷಿದಾರ ಪ್ರಕರಣದಲ್ಲಿ ಹುರುಳಿಲ್ಲ ಎಂದು ನ್ಯಾಯಾಲಯವು ಪರಿಗಣಿಸಿದರೆ ತಾನೇ ಸ್ವತಃ ಕಟಕಟೆಯಲ್ಲಿ ನಿಲ್ಲಬೇಕಾಗುತ್ತದೆ ಎಂಬಂತೆ ಕಂಡುಬರುತ್ತಿದೆ ಎಂದು ಈ ಗಣ್ಯರು ಪತ್ರದಲ್ಲಿ ತಿಳಿಸಿದ್ದಾರೆ.

ಪಾಟ್ನಾ ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶರಾದ ಅಂಜನಾ ಪ್ರಕಾಶ, ಹಿರಿಯ ವಕೀಲ ಕೆ.ಎಸ್.ಚೌಹಾಣ, ಅಲಹಾಬಾದ್ ಉಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಅಮರ ಸರನ್, ಅವನಿ ಬನ್ಸಾಲ್, ಆನಂದ ಗ್ರೋವರ್, ಇಂದಿರಾ ಜೈಸಿಂಗ್, ಪರಂಜಯ ಗುಹಾ ಥಾಕುರ್ತಾ, ರಾಮಚಂದ್ರ ಗುಹಾ, ಸಂಜಯ ಹೆಗ್ಡೆ, ನವರೋಜ್ ಸೀರ್ವಾಯಿ, ಅಂಜನಾ ಮಿಶ್ರಾ, ಮನೋಜ ಝಾ ಮತ್ತು ಕವಿತಾ ಕೃಷ್ಣನ್ ಅವರು ಪತ್ರಕ್ಕೆ ಸಹಿ ಮಾಡಿದ ಗಣ್ಯರಲ್ಲಿ ಸೇರಿದ್ದಾರೆ.

ಸರ್ವೋಚ್ಚ ನ್ಯಾಯಾಲಯದ ತೀರ್ಪಿನಲ್ಲಿಯ ‘‘ಗುಜರಾತ್ ಸರಕಾರದ ಅತೃಪ್ತ ಅಧಿಕಾರಿಗಳು ಇತರರೊಂದಿಗೆ ಸೇರಿಕೊಂಡು ‘ಪ್ರಕ್ರಿಯೆಯ ದುರುಪಯೋಗ’ದಲ್ಲಿ ತೊಡಗಿಕೊಂಡಿದ್ದಾರೆ ಮತ್ತು ಅವರು ಕಟಕಟೆಯಲ್ಲಿ ನಿಲ್ಲಬೇಕಾದ ಮತ್ತು ಅವರ ವಿರುದ್ಧ ಕಾನೂನು ಕ್ರಮ ನಡೆಸುವ ಅಗತ್ಯವಿದೆ’ ಎಂಬ ಭಾಗವನ್ನು ಪತ್ರವು ಉಲ್ಲೇಖಿಸಿದೆ.

ಸೆಟಲ್ವಾಡ್, ಶ್ರೀಕುಮಾರ ಮತ್ತು ಮಾಜಿ ಐಪಿಎಸ್ ಅಧಿಕಾರಿ ಸಂಜೀವ ಭಟ್ ಅವರ ವಿರುದ್ಧದ ಎಫ್ಐಆರ್ ತೀರ್ಪಿನ ಈ ಭಾಗವನ್ನು ಉಲ್ಲೇಖಿಸಿದ್ದು, ಹಿಂಸಾಚಾರದ ಪ್ರಕರಣಗಳ ತನಿಖೆಗಾಗಿ ರಚಿಸಲಾಗಿದ್ದ ವಿಶೇಷ ತನಿಖಾ ದಳವನ್ನು ಹಾದಿ ತಪ್ಪಿಸುವ ಮೂಲಕ ಅಮಾಯಕ ವ್ಯಕ್ತಿಗಳನ್ನು ಜೈಲಿಗೆ ಕಳುಹಿಸಲು ಸಂಚು ಹೂಡಿದ್ದ ಆರೋಪವನ್ನು ಅವರ ಮೇಲೆ ಹೊರಿಸಲಾಗಿದೆ.

‘ಪ್ರಸಕ್ತ ಸರಕಾರವು ಅನುಸರಿಸಲು ಆಯ್ಕೆ ಮಾಡಿಕೊಂಡಿರುವ ಪ್ರತೀಕಾರದ ಮಾರ್ಗಕ್ಕೆ ಮುಂಚಿತವಾಗಿ ಮಂಜೂರಾತಿಯನ್ನು ನೀಡಲು ಸರ್ವೋಚ್ಚ ನ್ಯಾಯಾಲಯವು ನಿಜಕ್ಕೂ ಉದ್ದೇಶಿಸಿತ್ತು ಎನ್ನುವುದನ್ನು ನಂಬಲು ನಾವು ನಿರಾಕರಿಸುತ್ತೇವೆ. ತುರ್ತು ಪರಿಸ್ಥಿತಿಯಲ್ಲಿಯೂ ಸರ್ವೋಚ್ಚ ನ್ಯಾಯಾಲಯವು ತನಗೆ ಮೇಲ್ಮನವಿಯನ್ನು ಸಲ್ಲಿಸುವ ಮೂಲಕ ಕಾನೂನು ಪ್ರಕ್ರಿಯೆಗಳನ್ನು ಬಳಸಿಕೊಳ್ಳಲು ಬಯಸಿದ್ದವರನ್ನು ಜೈಲಿಗೆ ತಳ್ಳಿರಲಿಲ್ಲ. ಎಡಿಎಂ ಜಬಲಪುರ ವಿರುದ್ಧ ಶಿವಕಾಂತ ಶುಕ್ಲಾ ಪ್ರಕರಣದಲ್ಲಿ ನಾಗರಿಕನ ಪರವಾಗಿ ನಿಲ್ಲುವಲ್ಲಿ ನ್ಯಾಯಾಲಯವು ವಿಫಲವಾಗಿದ್ದಿರಬಹುದು, ಆದರೆ ಅದು ನ್ಯಾಯಾಲಯದಲ್ಲಿ ನಾಗರಿಕರ ಪರವಾಗಿ ಹೋರಾಡಿದ್ದವರನ್ನು ತುಳಿದಿರಲಿಲ್ಲ ಎಂದು ಸಿಜೆಐಗೆ ಬರೆದಿರುವ ಪತ್ರದಲ್ಲಿ ಹೇಳಲಾಗಿದೆ.

‘ತನ್ನ ತೀರ್ಪಿನಲ್ಲಿಯ ಮೇಲೆ ಉಲ್ಲೇಖಿಸಿರುವ ಪ್ಯಾರಾ ಯಾವುದೇ ವ್ಯತಿರಿಕ್ತ ಪರಿಣಾಮಗಳನ್ನುಂಟು ಮಾಡುವ ಉದ್ದೇಶವನ್ನು ಹೊಂದಿರಲಿಲ್ಲ ಎನ್ನುವುದನ್ನು ಸ್ವಯಂಪ್ರೇರಿತವಾಗಿ ಸ್ಪಷ್ಟಪಡಿಸುವಂತೆ ನಾವು ಸರ್ವೋಚ್ಚ ನ್ಯಾಯಾಲಯಕ್ಕೆ ಕರೆ ನೀಡುತ್ತೇವೆ. ಇಂತಹ ಸ್ಪಷ್ಟೀಕರಣದ ಅನುಪಸ್ಥಿತಿಯು ಅನ್ಯಾಯವಾಗಿ ಜೈಲಿಗೆ ತಳ್ಳಲ್ಪಟ್ಟಿದ್ದಾರೆ ಎಂದು ನಾವು ಭಾವಿಸಿರುವ ವ್ಯಕ್ತಿಗಳು ಜಾಮೀನು ಕೋರಿದಾಗ ಇನ್ನಷ್ಟು ಪ್ರತಿಕೂಲ ಪರಿಣಾಮಗಳಿಗೆ ಕಾರಣವಾಗಬಹುದು ’ ಎಂದು ಗಣ್ಯರು ಪತ್ರದಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News