ಶಿವಸೇನೆ ನಾಯಕನ ಸ್ಥಾನದಿಂದ ಏಕನಾಥ್ ಶಿಂಧೆಯನ್ನು ಕಿತ್ತುಹಾಕಿದ ಉದ್ಧವ್ ಠಾಕ್ರೆ

Update: 2022-07-02 05:08 GMT
Photo:PTI

ಮುಂಬೈ: ಶಿವಸೇನೆಯ ಮುಖ್ಯಸ್ಥ  ಉದ್ಧವ್ ಠಾಕ್ರೆ ಅವರು ಶುಕ್ರವಾರ ನೂತನವಾಗಿ ನೇಮಕಗೊಂಡಿರುವ  ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಶಿವಸೇನೆ ನಾಯಕನ ಸ್ಥಾನದಿಂದ ತೆಗೆದುಹಾಕಿದ್ದಾರೆ ಎಂದು NDTV ವರದಿ ಮಾಡಿದೆ.

ಶಿಂಧೆ ಅವರು "ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ" ತೊಡಗಿಸಿಕೊಂಡಿದ್ದಾರೆ ಹಾಗೂ ಸ್ವಯಂಪ್ರೇರಣೆಯಿಂದ ತಮ್ಮ ಸದಸ್ಯತ್ವವನ್ನು ತ್ಯಜಿಸಿದ್ದಾರೆ ಎಂದು ಪಕ್ಷವು ಬಿಡುಗಡೆ ಮಾಡಿದ ಪತ್ರದಲ್ಲಿ ಠಾಕ್ರೆ ಹೇಳಿದ್ದಾರೆ.

"ಶಿವಸೇನಾ ಪಕ್ಷ ಪ್ರಮುಖನಾಗಿ ನನಗೆ ನೀಡಿರುವ ಅಧಿಕಾರವನ್ನು ಚಲಾಯಿಸಿ, ನಾನು ನಿಮ್ಮನ್ನು ಪಕ್ಷ ಸಂಘಟನೆಯಲ್ಲಿನ ಶಿವಸೇನೆ ನಾಯಕನ ಸ್ಥಾನದಿಂದ ತೆಗೆದುಹಾಕುತ್ತೇನೆ" ಎಂದು ಉದ್ಧವ್ ಠಾಕ್ರೆ ಸಹಿ ಮಾಡಿದ ಪತ್ರದಲ್ಲಿ ತಿಳಿಸಲಾಗಿದೆ.

ತಾನೇ  ಶಿವಸೇನೆಯ ನಾಯಕ ಹಾಗೂ  ಠಾಕ್ರೆ ಪಾಳಯದಲ್ಲಿ ಸಂಖ್ಯೆ ಕಡಿಮೆ ಇದೆ. ಹೀಗಾಗಿ ಅವರು  ತಮ್ಮನ್ನು ಎಂದಿಗೂ ಪಕ್ಷ ಪ್ರಮುಖ್ (ಪಕ್ಷದ ಮುಖ್ಯಸ್ಥರು) ಎಂದು ಕರೆದುಕೊಂಡಿಲ್ಲ ಎಂದು ಶಿಂಧೆ ವಾದಿಸಿದ್ದಾರೆ.

ಉದ್ಧವ್  ಠಾಕ್ರೆ ತಾಂತ್ರಿಕವಾಗಿ ಇನ್ನೂ ಪಕ್ಷದ ಮುಖ್ಯಸ್ಥರಾಗಿದ್ದಾರೆ.

ಈ ಹಿಂದೆ, ಶಿಂಧೆ ಅವರು ತಾನೇ ಶಿವಸೇನೆ ಸಂಸ್ಥಾಪಕ ಬಾಳ್ ಠಾಕ್ರೆ ಅವರ ರಾಜಕೀಯ ಉತ್ತರಾಧಿಕಾರಿ ಎಂದು ಸೂಕ್ಷ್ಮ ಸಂದೇಶವನ್ನು ಕಳುಹಿಸಿದ್ದರು. ಅವರು ತಮ್ಮ ಟ್ವಿಟ್ಟರ್ ಹ್ಯಾಂಡಲ್‌ನ ಪ್ರೊಫೈಲ್ ಚಿತ್ರವನ್ನು ಬದಲಾಯಿಸಿದ್ದರು.

ತಾವೇ ನಿಜವಾದ ಶಿವಸೇನೆ ಎಂದು ಶಿಂಧೆ ಬಣ ಸುಪ್ರೀಂ ಕೋರ್ಟ್‌ನಲ್ಲಿ ಘೋಷಿಸಿಕೊಂಡಿದೆ.  ಶರದ್ ಪವಾರ್ ಅವರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಹಾಗೂ  ಕಾಂಗ್ರೆಸ್‌ನೊಂದಿಗೆ ಒಕ್ಕೂಟವನ್ನು ರಚಿಸುವ ಮೂಲಕ ಠಾಕ್ರೆ ಅವರು ತಮ್ಮ ತಂದೆ ಬಾಳ್  ಠಾಕ್ರೆಯವರ ಹಿಂದುತ್ವ ಸಿದ್ಧಾಂತವನ್ನು ದುರ್ಬಲಗೊಳಿಸಿದ್ದಾರೆ ಎಂದು ವಾದಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News