ಉದಯಪುರ ಟೈಲರ್ ಹತ್ಯೆಯ ಪ್ರಮುಖ ಆರೋಪಿಗಳಲ್ಲಿ ಓರ್ವ 'ಬಿಜೆಪಿ ಸದಸ್ಯ': ಕಾಂಗ್ರೆಸ್ ಆರೋಪ

Update: 2022-07-02 08:47 GMT

ಹೊಸದಿಲ್ಲಿ: ಉದಯಪುರದಲ್ಲಿ ಟೈಲರ್‌ನ ಅಮಾನುಷ ಹತ್ಯೆಯ ಪ್ರಮುಖ ಆರೋಪಿಗಳಲ್ಲಿ ಓರ್ವ  "ಬಿಜೆಪಿಯ ಸದಸ್ಯ" ಎಂದು ಕಾಂಗ್ರೆಸ್ ಶನಿವಾರ ಆರೋಪಿಸಿದೆ. ಈ ಕಾರಣಕ್ಕಾಗಿ ಪ್ರಕರಣವನ್ನು ತ್ವರಿತವಾಗಿ ರಾಷ್ಟ್ರೀಯ ತನಿಖಾ ತಂಡಕ್ಕೆ(ಎನ್ ಐಎ) ವರ್ಗಾಯಿಸಲು ಕೇಂದ್ರ ಮುಂದಾಗಿದೆಯೇ? ಎಂದು ಪ್ರಶ್ನಿಸಿದೆ.

ಇಲ್ಲಿನ ಕಾಂಗ್ರೆಸ್ ಪ್ರಧಾನ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಕ್ಷದ ಮಾಧ್ಯಮ ವಿಭಾಗದ ಮುಖ್ಯಸ್ಥ ಪವನ್ ಖೇರಾ, ಉದಯ್‌ಪುರ ಘಟನೆಗೆ ಸಂಬಂಧಿಸಿದಂತೆ ಮಾಧ್ಯಮ ಸಮೂಹವೊಂದರ ವರದಿಯು ಆರೋಪಿ  ರಿಯಾಝ್  ಅಖ್ಟಾರಿ ಅವರೊಂದಿಗಿನ ಬಿಜೆಪಿ ನಂಟನ್ನು ತೋರಿಸುತ್ತದೆ ಎಂದು ಹೇಳಿದರು.

ಕನ್ಹಯ್ಯಾ ಲಾಲ್ ಹಂತಕ ರಿಯಾಝ್  ಅಖ್ಟಾರಿ ಬಿಜೆಪಿಯ ಸದಸ್ಯ ಎಂದು ಖೇರಾ ಪತ್ರಿಕಾಗೋಷ್ಠಿಯ ನಂತರ ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ನಾಯಕರೊಬ್ಬರು ಮಾಡಿದ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ಈ ಹೇಳಿಕೆಯನ್ನು "ನಕಲಿ ಸುದ್ದಿ" ಎಂದು ತಳ್ಳಿ ಹಾಕಿದರು.

ಇಬ್ಬರು ಆರೋಪಿಗಳಾದ ರಿಯಾಝ್ ಅಖ್ಟಾರಿ ಮತ್ತು ಘೌಸ್ ಮೊಹಮ್ಮದ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ, ಖೇರಾ ಅವರು ಬಿಜೆಪಿ ನಾಯಕರಾದ ಇರ್ಷಾದ್ ಚೈನ್‌ವಾಲಾ ಹಾಗೂ  ಮುಹಮ್ಮದ್ ತಾಹಿರ್ ಅವರೊಂದಿಗೆ ಅಖ್ಟಾರಿಗೆ ನಂಟಿರುವ ಚಿತ್ರಗಳು ಹಾಗೂ  ಫೇಸ್ ಬುಕ್ ಪೋಸ್ಟ್‌ಗಳನ್ನು ಉಲ್ಲೇಖಿಸಿದ್ದಾರೆ.

"ಪ್ರಮುಖ ಆರೋಪಿ ರಿಯಾಝ್ ಅಖ್ಟಾರಿ ಆಗಾಗ್ಗೆ ರಾಜಸ್ಥಾನದ ಬಿಜೆಪಿ ನಾಯಕ ಹಾಗೂ  ಮಾಜಿ ಸಚಿವ ಗುಲಾಬ್‌ಚಂದ್ ಕಟಾರಿಯಾ ಅವರ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ.ಇದಷ್ಟೇ ಅಲ್ಲ, ಬಿಜೆಪಿಯ ರಾಜಸ್ಥಾನ ಅಲ್ಪಸಂಖ್ಯಾತ ಘಟಕದ ಸಭೆಗಳಲ್ಲಿ ಪ್ರಮುಖ ಆರೋಪಿ ರಿಯಾಝ್ ಭಾಗವಹಿಸುತ್ತಿರುವ ಚಿತ್ರಗಳು ಜಗತ್ತಿನ ಮುಂದೆ ಇವೆ" ಎಂದು ಖೇರಾ ಹೇಳಿದ್ದಾರೆ.

ಬಿಜೆಪಿ ನಾಯಕ ಇರ್ಷಾದ್ ಚೈನ್ ವಾಲಾ ಹಾಗೂ ಮುಹಮ್ಮದ್ ತಾಹಿರ್ 2018ರಿಂದ 2021ರ ತನಕ ಮಾಡಿರುವ ಫೇಸ್ ಬುಕ್ ಪೋಸ್ಟ್ ನಲ್ಲಿ ರಿಯಾಝ್  ಬಿಜೆಪಿ ನಾಯಕರೊಂದಿಗೆ ಆಪ್ತನಾಗಿದ್ದ ಮಾತ್ರವಲ್ಲ ಬಿಜೆಪಿಯ ಸಕ್ರಿಯ ಸದಸ್ಯನಾಗಿರುವುದನ್ನು ಸ್ಪಷ್ಟಪಡಿಸುತ್ತದೆ ಎಂದು ಖೇರಾ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News