ಪ್ರತಿಯೊಂದು ಕ್ರಮವನ್ನು ನ್ಯಾಯಾಂಗ ಅನುಮೋದಿಸಬೇಕೆಂದು ಅಧಿಕಾರದಲ್ಲಿರುವ ಪಕ್ಷ ಬಯಸಿದೆ: ಮುಖ್ಯ ನ್ಯಾಯಮೂರ್ತಿ ರಮಣ

Update: 2022-07-02 08:46 GMT

ಹೊಸದಿಲ್ಲಿ: "ನಾವು ನಮ್ಮ ಸ್ವಾತಂತ್ರ್ಯದ 75ನೇ ವರ್ಷ ಮತ್ತು ಗಣತಂತ್ರದ 72ನೇ ವರ್ಷಾಚರಣೆಯ ಈ ಸಂದರ್ಭದಲ್ಲಿ ಸ್ವಲ್ಪ ವಿಷಾದದಿಂದ ಹೀಗೆ ಹೇಳಬೇಕಿದೆ.  ಪ್ರತಿಯೊಂದು ಸಂಸ್ಥೆಗೆ ಸಂವಿಧಾನ ವಹಿಸಿದ ಪಾತ್ರಗಳು ಮತ್ತು ಜವಾಬ್ದಾರಿಗಳನ್ನು ನಾವು ಇನ್ನೂ ಸರಿಯಾಗಿ ಅರ್ಥೈಸಿಕೊಂಡಿಲ್ಲ. ಸರಕಾರದ ಪ್ರತಿಯೊಂದು ಕ್ರಮವನ್ನು ನ್ಯಾಯಾಂಗ ಅನುಮೋದಿಸಬೇಕೆಂದು ಅಧಿಕಾರದಲ್ಲಿರುವ ಪಕ್ಷ ನಂಬಿದೆ. ತಮ್ಮ ರಾಜಕೀಯ ಉದ್ದೇಶಗಳನ್ನು ನ್ಯಾಯಾಂಗ ಬೆಂಬಲಿಸಬೇಕೆಂದು ವಿಪಕ್ಷಗಳು ನಿರೀಕ್ಷಿಸುತ್ತವೆ ಸಂವಿಧಾನ ಮತ್ತು ಪ್ರಜಾಸತ್ತಾತ್ಮಕ ಸಂಸ್ಥೆಗಳ ಕುರಿತು ಜನರಿಗೆ ಸರಿಯಾದ ತಿಳುವಳಿಕೆಯ ಕೊರತೆ ಇರುವುದರಿಂದ ಮೇಲಿನಂತಹ ಆಲೋಚನೆಗಳೇ ಮೇಳೈಸುತ್ತವೆ," ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಹೇಳಿದರು.

ಸ್ಯಾನ್ ಫ್ರಾನ್ಸಿಸ್ಕೋ ನಗರದಲ್ಲಿ ಅಸೋಸಿಯೇಶನ್ ಆಫ್ ಇಂಡಿಯನ್ ಅಮೆರಿಕನ್ಸ್ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

"ನ್ಯಾಯಾಂಗವು ಸಂವಿಧಾನಕ್ಕೆ ಮಾತ್ರ ಉತ್ತರದಾಯಿತ್ವ ಹೊಂದಿದೆ ಎಂದು ಸ್ಪಷ್ಟಪಡಿಸಲು ನಾನು ಬಯಸುತ್ತೇನೆ" ಎಂದು ಜಸ್ಟಿಸ್ ರಮಣ ಹೇಳಿದರು.

"ಪ್ರಜಾಪ್ರಭುತ್ವದಲ್ಲಿ ವ್ಯಕ್ತಿಗಳು ಮತ್ತು ಸಂಸ್ಥೆಗಳ ಪಾತ್ರ ಮತ್ತು ಜವಾಬ್ದಾರಿ ಬಗ್ಗೆ ಜಾಗೃತಿ ಮೂಡಿಸಬೇಕು, ಎಲ್ಲರ ಭಾಗವಹಿಸುವಿಕೆಯೇ ಪ್ರಜಾಪ್ರಭುತ್ವದಲ್ಲಿ ಅಗತ್ಯ"ಎಂದು ಅವರು ಹೇಳಿದರು. "ಸರ್ವರನ್ನೂ ಸೇರ್ಪಡೆಗೊಳಿಸುವ ಅಗತ್ಯತೆ ಹಾಗೂ ಈ ಚಿಂತನೆಯನ್ನು  ಮಾನ್ಯ ಮಾಡುವ ಅಗತ್ಯತೆ ಎಲ್ಲೆಡೆ ಇದೆ ಹಾಗೂ ಇಂತಹ ದೃಷ್ಟಿಕೋನ ಇಲ್ಲದೇ ಇದ್ದಲ್ಲಿ ಅದು ಅಪಾಯಕ್ಕೆ ಆಹ್ವಾನವಿತ್ತಂತೆ" ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News