ರೋಶನಿ ನಿಲಯದಲ್ಲಿ 50 ದೇಶಗಳ 336 ಪ್ರಜೆಗಳ ಸಮಾಗಮ

Update: 2022-07-02 14:20 GMT

ಮಂಗಳೂರು, ಜು.೨: ನಗರದ ರೋಶನಿ ನಿಲಯದ ಸಭಾಂಗಣ ಇಂದು ಪ್ರಪಂಚದ 50 ರಾಷ್ಟ್ರಗಳ 300ಕ್ಕೂ ಅಧಿಕ ಪ್ರಜೆಗಳ ಸಮಾಗಮಕ್ಕೆ ಸಾಕ್ಷಿಯಾಯಿತು. ಮಂಗಳೂರು ಪೊಲೀಸ್ ಕಮಿಷನರೇಟ್ ವತಿಯಿಂದ ಆಯೋಜಿಸಲಾದ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯವಾಗಿ ಉದ್ಯೋಗ ಹಾಗೂ ಉನ್ನತ ಶಿಕ್ಷಣದ ಉದ್ದೇಶದಿಂದ  ವಿವಿಧ ರಾಷ್ಟ್ರಗಳಿಂದ ಆಗಮಿಸಿ ಮಂಗಳೂರಿನಲ್ಲಿ ನೆಲೆಸಿರುವ ವಿದೇಶಿಯರು ಭಾಗವಹಿಸಿ, ಮಂಗಳೂರಿನ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡರು, ಜತೆಗೆ ತಮ್ಮ ಕೆಲವೊಂದು ಸಮಸ್ಯೆಗಳನ್ನೂ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ವ್ಯಕ್ತಪಡಿಸಿದರು.

ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ  ಮಂಗಳೂರಿನಲ್ಲಿ ನೆಲೆಸಿರುವ ಎಲ್ಲಾ ವಿದೇಶಿಯರಿಗೆ ಒಂದು ವೇದಿಕೆಯನ್ನು ಕಲ್ಪಿಸಬೇಕೆಂಬ ಮನವಿಯೂ ವಿದೇಶಿ ಪ್ರಜೆಗಳಿಂದ  ವ್ಯಕ್ತವಾಯಿತು.

"ದಾಖಲೆಗಳು ಸಮರ್ಪಕವಾಗಿರಲಿ"

ಶಿಕ್ಷಣ ಅಥವಾ ಉದ್ಯೋಗ ಅಥವಾ ಪ್ರವಾಸ ಅಥವಾ ವಿಸಿಟಿಂಗ್ ವೀಸಾದಲ್ಲಿ ಭಾರತಕ್ಕೆ ಬರುವ ಎಲ್ಲರೂ ಸಮರ್ಪಕ ದಾಖಲೆಗಳನ್ನು ಹೊಂದಿರುವುದು ಕಡ್ಡಾಯ. ಮಂಗಳೂರಿಗೆ ಆಗಮಿಸುವವರು, ನೆಲೆಸುವವರು ಮಂಗಳೂರು ಪೊಲೀಸ್ ಕಮಿಷನರೇಟ್ ಕಚೇರಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಅಥವಾ ಉದ್ಯೋಗಿಗಳು  ಅಗತ್ಯ ಅನುಮತಿ ಇಲ್ಲದೆ ತಮ್ಮ ಕಲಿಕೆಯ ವಿಷಯವನ್ನು ಬದಲಾಯಿಸುವುದಾಗಲಿ ಅಥವಾ ಕಾಲೇಜು ಬದಲಾಯಿಸುವುದಾಗಲಿ ಅಥವಾ ಒಂದು ಸಂಸ್ಥೆಯಿಂದ ಇನ್ನೊಂದು ಸಂಸ್ಥೆಗೆ ಬದಲಾವಣೆ ಮಾಡುವಂತಿಲ್ಲ. ವಿದ್ಯಾರ್ಥಿಗಳು ಇಲ್ಲಿನ ರಾಜಕೀಯದಲ್ಲಿ ಅಥವಾ ಯಾವುದೇ ವಿದ್ಯಾರ್ಥಿ ಸಂಘಟನೆಯಲ್ಲಿ ಭಾಗಿಯಾಗುವಂತಿಲ್ಲ. ಇಂತಹ ಯಾವುದೇ ಚಟುವಟಿಕೆಗಳು ಕಾನೂನು ಪ್ರಕ್ರಿಯೆಗೆ ಒಳಪಡುತ್ತವೆ ಎಂದು ಡಿಸಿಐಒ ವಿಭಾಗದ ಹೇಮಚಂದ್ರ ಅವರು ಮಾಹಿತಿ ನೀಡಿದರು.

66 ದೇಶ ಸುತ್ತಿರುವೆ, ಭಾರತದಂತಹ ದೇಶ ಇನ್ನೊಂದಿಲ್ಲ

ನಾನು 66 ದೇಶಗಳನ್ನು ಸುತ್ತಾಡಿದ್ದೇನೆ. ವಿದೇಶಗಳಲ್ಲಿ ಕೆಲಸ ಮಾಡಿದ್ದೇನೆ. ಆದರೆ ಭಾರತದಂತಹ ದೇಶ ಇನ್ನೊಂದಿಲ್ಲ. ಇದೀಗ ನನ್ನ ಪತಿಯೊಂದಿಗೆ 2004ರಿಂದ ಮಂಗಳೂರಿನಲ್ಲೇ ವಾಸವಾಗಿದ್ದೇನೆ. ಹಾಗಾಗಿ ವಿದೇಶದಿಂದ ಬರುವ ಎಲ್ಲರೂ ಇಲ್ಲಿ ಸುರಕ್ಷಿತರು, ದಾಖಲೆಗಳು ಮಾತ್ರ ಸರಿಯಾಗಿ ಹೊಂದಿರಬೇಕು ಎಂದು ಫ್ಲೋರಿನ್ ಅವರು ಅನಿಸಿಕೆ ವ್ಯಕ್ತಪಡಿಸಿದರು.

ಫ್ಲೋರಿನ್ ಅವರ ಪತಿ ಜಾನ್ ಅವರು ಮಾತನಾಡಿ, ನಾನು ಯುಕೆಯಲ್ಲೇ ನನ್ನ ಜೀವನದ ಸಾಕಷ್ಟು ಸಮಯ ಕಳೆದಿದ್ದರೂ ಮಂಗಳೂರು ನಗರ ನನ್ನನ್ನು ಆಕರ್ಷಿಸಿ ಇಲ್ಲೇ ವಾಸಿಸುವಂತೆ ಮಾಡಿದೆ. 2004ರಲ್ಲಿ ಇಲ್ಲಿ ಬಂದಾಗ ಸಾಕಷ್ಟು ಹಸಿರು, ಕಡಿಮೆ ಟ್ರಾಫಿಕ್ ಇತ್ತು. ಆದರೆ ಈಗ ಅದೆಲ್ಲವೂ ಬದಲಾಗಿದೆ. ಹಾಗಿದ್ದರೂ ಇಲ್ಲಿ ಜೀವನ ಉತ್ತಮವಾಗಿದೆ ಎಂದರು.

ಸಂವಾದದ ವೇಳೆ ಇಲ್ಲಿನ ಟ್ರಾಫಿಕ್ ವ್ಯವಸ್ಥೆಯನ್ನು ಸುಗಮಗೊಳಿಸುವಂತೆ ತಾಂಜೇನಿಯಾದ ವಿದ್ಯಾರ್ಥಿಯೊಬ್ಬರು ಮನವಿ ಮಾಡಿದರೆ, ಇರಾನ್‌ನಿಂದ ಬಂದಿರುವ ವಿದ್ಯಾರ್ಥಿಯೊಬ್ಬರು ಮಾತನಾಡಿ, ಬೆಂಗಳೂರಿನಲ್ಲಿ ವಿದೇಶಿ ವಿದ್ಯಾರ್ಥಿಗಳು ವಾಹನ ತಮ್ಮ ಸ್ವಂತ ಹೆಸರಿನಲ್ಲಿ ಖರೀದಿಸಲು ವ್ಯವಸ್ಥೆ ಇರುವಂತೆ ಮಂಗಳೂರಿನಲ್ಲಿಯೂ ಅವಕಾಶ ಕಲ್ಪಿಸಬೇಕೆಂದರು.

ಕಾರ್ಯಕ್ರಮದಲ್ಲಿ ಡಿಸಿಪಿ ದಿನೇಶ್ ಕುಮಾರ್, ಅಂಶುಕುಮಾರ್, ರೋಶನಿ ನಿಲಯ ಕಾಲೇಜಿನ ಪ್ರಾಂಶುಪಾಲೆ ಜೂಲಿಯಟ್ ಸಿ.ಜೆ. ಉಪಸ್ಥಿತರಿದ್ದರು.

ಅಫ್ಘಾನಿಸ್ತಾನದ ೮೨ ಮಂದಿ, ಬಾಂಗ್ಲಾದ ೧೧, ಇಥಿಯೋಪಿಯಾದ ೨೫, ಇರಾನ್‌ನ ೧೩, ಮಲೇಶಿಯಾದ ೧೩, ಯಮನ್ ೨೦, ಶ್ರೀಲಂಕಾದ ೨೦, ಯುಕೆಯ ೧೬, ಫಿಲಿಫೀನ್ಸ್‌ನ ೧೭, ಯುಎಸ್‌ಎ ೧೮ ಮಂದಿ ಸೇರಿ ಮಂಗಳೂರಿನಲ್ಲಿ ೫೦ ರಾಷ್ಟ್ರಗಳ ಒಟ್ಟು ೩೩೬ ಮಂದಿಯಲ್ಲಿ ೨೧೦ ಮಂದಿ ಪುರುಷರು ಹಾಗೂ ೧೨೬ ಮಂದಿ ಮಹಿಳೆಯರಿದ್ದಾರೆ. ಅವರೆಲ್ಲರು ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿಲ್ಲದಿರುವುದು ಸಂತಸದ ವಿಚಾರ. ಅಪ್ಘಾನಿಸ್ತಾನದ ವಿದ್ಯಾರ್ಥಿಗಳು ಸೇರಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಧಿಕೃತ ಅಂಕಿ ಅಂಶಗಳ ಪ್ರಕಾರ ಪ್ರಪಂಚದ ವಿವಿಧ ರಾಷ್ಟ್ರಗಳಲ್ಲಿ ಭಾರತದ ೩.೩೬ ಕೋಟಿ ಜನರು ಶಿಕ್ಷಣ, ಉದ್ಯೋಗ ಸೇರಿದಂತೆ ವಿವಿಧ ಕಾರಣಗಳಿಂದ ವಿದೇಶದಲ್ಲಿ ನೆಲೆಸಿದ್ದಾರೆ. ಅವರೆಲ್ಲರಿಗೂ ಆ ರಾಷ್ಟ್ರಗಳಲ್ಲಿ ಗೌರವ, ಸುರಕ್ಷತೆ ಸಿಗುತ್ತಿರುವಂತೆಯೇ ನಮ್ಮ ದೇಶದಲ್ಲಿ, ನಗರದಲ್ಲಿ ನೆಲೆಸಿರುವ ವಿದೇಶಿಯರ ಸುರಕ್ಷತೆಯೂ ನಮ್ಮ ಕರ್ತವ್ಯ. ವಿದೇಶಿ ಪ್ರಜೆಗಳು ಸಮರ್ಪಕ ದಾಖಲೆಗಳನ್ನು ಹೊಂದಿರುವುದರ ಜತೆಗೆ ಯಾವುದೇ ತುರ್ತು ಸಂದರ್ಭಗಳಲ್ಲಿ ಇಲಾಖಾ ಅಧಿಕಾರಿಗಳನ್ನು ನೇರವಾಗಿ ಸಂಪರ್ಕಿಸಬಹುದು ಇಲ್ಲವೇ ೧೧೨ಗೆ ಕರೆ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು.
-ಎನ್. ಶಶಿಕುಮಾರ್, ಕಮಿಷನರ್, ಮಂಗಳೂರು ಪೊಲೀಸ್.

ಕನ್ನಡ, ತುಳು ಬಲ್ಲ ಶ್ರೀಲಂಕಾ ಪ್ರಜೆ

ಉದ್ಯೋಗ ನಿಮಿತ್ತ ಮಂಗಳೂರಿನಲ್ಲಿ ಕಳೆದ ಸುಮಾರು ಆರು ವರ್ಷಗಳಿಂದ ನೆಲೆಸಿರುವ ಶ್ರೀಲಂಕಾದ ದಂಪತಿ ಇಂದು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಪೊಲೀಸ್ ಆಯುಕ್ತರ ಜತೆ ಫೋಟೋ ಕ್ಲಿಕ್ಕಿಸಿಕೊಂಡರು. ಈ ಸಂದರ್ಭ ಗೃಹಿಣಿ ಮಹಿಳೆ ಮಾತನಾಡಿ ನನಗೆ ಕನ್ನಡ ಮಾತನಾಡಲು ಬರುತ್ತದೆ, ತುಳು ಕೆಲವು ಶಬ್ಧಗಳನ್ನು ಮಾತನಾಡಬಲ್ಲೆ ಎಂದು ಹೇಳುತ್ತಾ ಸಂಭ್ರಮಿಸಿದರು.

ತಾಯಿ ನೆಲದಲ್ಲೇ ಇರುವ ಅನುಭವ

ಅಫ್ಘಾನಿಸ್ತಾನದ ವಿದ್ಯಾರ್ಥಿಗಳ ಪರವಾಗಿ ಮಾತನಾಡಿದ ಫರ್ಕುದಿನ್, ಮೂರು ವರ್ಷದಿಂದ ನಾನು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಇಲ್ಲಿನ ಸಂಸ್ಕೃತಿ ಹಾಗೂ ಸಂಪ್ರದಾಯವನ್ನು ತಿಳಿದುಕೊಂಡಿದ್ದೇನೆ. ರಾಷ್ಟ್ರಭಾಷೆ ಹಿಂದಿಯನ್ನೂ ಕಲಿತಿದ್ದೇನೆ. ನನಗೆ ನನ್ನ ಮನೆಯಲ್ಲೇ ಇರುವ ಅನುಭವ ಮಂಗಳೂರಿನಲ್ಲಿ ದೊರಕಿದೆ. ಇಲ್ಲಿನ ಜನರು, ಸ್ನೇಹಿತರಿಂದ ಅಂತಹ ಸ್ನೇಹ ದೊರಕಿದೆ ಎಂದರು.

ವಿಶ್ವ ಯುವ ಸಂಘಟನೆಯ ಅಧ್ಯಕ್ಷ, ಮಂಗಳೂರಿನ ವಿಶ್ವವಿದ್ಯಾನಿಲಯದಲ್ಲಿ ಕಲಿಯುತ್ತಿರುವ ಸಯ್ಯದ್ ಅನ್ವರ್ ಮಾತನಾಡಿ, ವೈವಿಧ್ಯತೆಗೆ ಹೆಸರಾದ ದೇಶ ಭಾರತವಾಗಿದ್ದು, ನಮ್ಮ ತಾಯಿ ನೆಲದಲ್ಲಿ ಸಿಗದ ಸ್ವಾತಂತ್ರ್ಯ ನಮಗೆ ಮಂಗಳೂರಿನಲ್ಲಿ ದೊರಕಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News