ಸವಿತಾ ಸಮಾಜದಿಂದ ರಾಜ್ಯಮಟ್ಟದ ವಿಚಾರ ಸಂಕಿರಣ

Update: 2022-07-02 16:15 GMT

ಉಡುಪಿ : ‘ಸವಿತಾ ಸಮಾಜಕ್ಕೆ ಸಹಕಾರಿ ಸಂಘಗಳ ಅವಶ್ಯಕತೆ ಮತ್ತು ಅನುಷ್ಠಾನ’ ಎಂಬ ವಿಷಯದ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣವೊಂದು ಜು.೫ರಂದು ಅಪರಾಹ್ನ ೨:೩೦ಕ್ಕೆ ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿ. ಜಿಲ್ಲಾ ಸವಿತಾ ಸಮಾಜ ಉಡುಪಿ ಇವರ ಸಹಯೋಗದೊಂದಿಗೆ  ಆಯೋಜಿಸಿದೆ.

ಅಂಬಲಪಾಡಿಯಲ್ಲಿರುವ ಜಿಲ್ಲಾ ಸವಿತಾ ಸಮಾಜ ಸಮುದಾಯ ಭವನದಲ್ಲಿ ನಡೆಯುವ ಈ ವಿಚಾರ ಸಂಕಿರಣ ವನ್ನು ಶಿಕಾರಿಪುರದ ಸವಿತಾ ವಿವಿಧೋದ್ದೇಶ ಸಹಕಾರಿ ಸಂಘದ ಸ್ಥಾಪಕ ಅಧ್ಯಕ್ಷ ವೆಂಕಟೇಶ್ ಶಿಕಾರಿಪುರ ಇವರು ಉದ್ಘಾಟಿಸಲಿದ್ದಾರೆ ಎಂದು ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಉಡುಪಿ ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಅಧ್ಯಕ್ಷ ನವೀನ್‌ಚಂದ್ರ ಭಂಡಾರಿ ಮಣಿಪಾಲ ತಿಳಿಸಿದರು.

ವಿಚಾರ ಸಂಕಿರಣದಲ್ಲಿ ಕರ್ನಾಟಕ ರಾಜ್ಯ ಸವಿತಾ ಸಮಾಜದ ಮಾಜಿ ರಾಜ್ಯಾಧ್ಯಕ್ಷ ಎಂ.ಜಿ.ಬಾಲು ಶಿವಮೊಗ್ಗ, ಸವಿತಾ ಸಮಾಜದ ಮುಖಂಡ ಬೆಂಗಳೂರಿನ ನಾಮದೇವ್ ನಾಗರಾಜ್, ರಾಜ್ಯದ ವಿಭಾಗೀಯ ಕಾರ್ಯ ಸಂಘಟನಾ ಕಾರ್ಯದರ್ಶಿ ಆನಂದ ಆರ್.ವಾರಿಕ್, ರಾಜ್ಯ ಸವಿತಾ ಕೋ-ಅಪರೇಟಿವ್ ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ ಬಿ.ವಿ.ರಾಮಚಂದ್ರ ಮುಳಬಾಗಿಲು, ಗೋಪಾಲಕೃಷ್ಣ ಲಕ್ಷ್ಮಣ ಹಳೇಪೇಟೆ, ದಕ್ಷಿಣ ಕನ್ನಡ ಜಿಲ್ಲಾ  ಸವಿತಾ ಸಮಾಜದ ಅಧ್ಯಕ್ಷ ಆನಂದ ಭಂಡಾರಿ ಮುಂತಾದವರು ಪಾಲ್ಗೊಳ್ಳಲಿದ್ದಾರೆ ಎಂದರು.

ಐದನೇ ಶಾಖೆ ಉದ್ಘಾಟನೆ: ಜಿಲ್ಲೆಯ ಕ್ಷೌರಿಕರ ಆರ್ಥಿಕ ಅಭಿವೃದ್ಧಿಗಾಗಿ ೨೦೦೭ರಲ್ಲಿ ಪ್ರಾರಂಭಗೊಂಡ ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿ.ದ ಐದನೇ ಶಾಖೆ ಜು.೫ರಂದು ಬೆಳಗ್ಗೆ ೧೦ಕ್ಕೆ ಬ್ರಹ್ಮಾವರದ ಸೈಂಟ್ ಅಂತೋನಿ ಪ್ರೆಸ್‌ನ ಮೊದಲ ಮಹಡಿಯಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು  ಉಪಾದ್ಯಕ್ಷ ನವೀನ್‌ಚಂದ್ರ ಭಂಡಾರಿ ತಿಳಿಸಿದರು.

ಉಡುಪಿ, ಕುಂದಾಪುರ, ಕಾರ್ಕಳ ಹಾಗೂ ಕಾಪುವಿನಲ್ಲಿ ನಾಲ್ಕು ಶಾಖೆಯನ್ನು ಹೊಂದಿದ್ದು, ಇದೀಗ ನೂತನ ಐದನೇ ಶಾಖೆಯನ್ನು ಬೆಂಗಳೂರಿನ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಇದರ ಅಧ್ಯಕ್ಷ ಬಿ.ಎಚ್.ಕೃಷ್ಣ ರೆಡ್ಡಿ ಉದ್ಘಾಟಿಸಲಿದ್ದಾರೆ. ನೂತನ ಸೆಲೂನ್‌ಸಾಮಗ್ರಿ ಮಳಿಗೆಯನ್ನು ಬಾರಕೂರಿನ ಕುಚ್ಚೂರು ಶ್ರೀನಾಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಸುರೇಶ್ ಭಂಡಾರಿ ಕಡಂದಲೆ ಉದ್ಘಾಟಿಸುವರು.

ರಾಜ್ಯ ಸೌಹಾರ್ದ ಸಹಕಾರಿ ಒಕ್ಕೂಟದ ನಿರ್ದೇಶಕ ಜಯಕರ ಶೆಟ್ಟಿ ಇಂದ್ರಾಳಿ ಭದ್ರತಾ ಕೋಶವನ್ನು ಉದ್ಘಾಟಿಸುವರು. ಸಭಾ ಕಾರ್ಯಕ್ರಮವು ಬ್ರಹ್ಮಾವರ ಬಸ್ ನಿಲ್ದಾಣದ ಬಳಿ ಇರುವ ಬಂಟರ ಭವನದಲ್ಲಿ ನಡೆಯಲಿದೆ ಎಂದವರು ತಿಳಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಬನ್ನಂಜೆ ಗೋವಿಂದ ಭಂಡಾರಿ, ನಿರ್ದೇಶಕರಾದ ಕುರ್ಕಾಲು ಸದಾಶಿವ ಬಂಗೇರ, ವಿಶ್ವನಾಥ ಭಂಡಾರಿ ನಿಂಜೂರು, ಶಿವರಾಮ ಭಂಡಾರಿ ಹಂದಾಡಿ ಹಾಗೂ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಮಾಲತಿ ಅಶೋಕ್ ಭಂಡಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News