ಭದ್ರತಾ ಕೋಟೆ ಭೇದಿಸಿ ಮಮತಾ ಬ್ಯಾನರ್ಜಿ ನಿವಾಸಕ್ಕೆ ನುಸುಳಿದ ವ್ಯಕ್ತಿಯ ಬಂಧನ

Update: 2022-07-04 02:30 GMT
 ಮಮತಾ ಬ್ಯಾನರ್ಜಿ (Photo: PTI)

ಕೊಲ್ಕತ್ತಾ: ಝೆಡ್ ವರ್ಗದ ಭದ್ರತಾ ಕೋಟೆಯನ್ನು ಉಲ್ಲಂಘಿಸಿ ದಕ್ಷಿಣ ಕೊಲ್ಕತ್ತಾದ ಕಾಳಿಘಾಟ್‍ನಲ್ಲಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ನಿವಾಸಕ್ಕೆ ನುಸುಳಿದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ವ್ಯಕ್ತಿಯ ಗುರುತು ಮತ್ತು ವಯಸ್ಸನ್ನು ಪೊಲೀಸರು ಬಹಿರಂಗಪಡಿಸಿಲ್ಲವಾದರೂ, ಈತ ಯಾವುದೇ ಶಸ್ತ್ರಾಸ್ತ್ರಗಳನ್ನು ಹೊಂದಿರಲಿಲ್ಲ ಎಂದು ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ಒಂದು ಅಂತಸ್ತಿನ ಮನೆಯ ಗೋಡೆಯನ್ನು ಏರಿ ಮನೆಗೆ ನುಸುಳಿರಬೇಕು ಎಂದು ಶಂಕಿಸಲಾಗಿದೆ. ಗಂಗಾನದಿಯ ಟೋಲಿ ನಾಲಾದ ಹಳೆಯ ಕಾಲುವೆ ಬಳಿ ಮಮತಾ ಬ್ಯಾನರ್ಜಿಯವರ ನಿವಾಸ ಇದೆ.

ಮನೆಯ ಒಳಗೆ ನುಗ್ಗಿ ಮೂಲೆಯಲ್ಲಿ ಇಡೀ ರಾತ್ರಿ ಕಳೆದಿದ್ದ. ಭದ್ರತಾ ಸಿಬ್ಬಂದಿಗೆ ಬೆಳಿಗ್ಗೆಯಷ್ಟೇ ಈತನ ಇರುವಿಕೆ ಬಗ್ಗೆ ತಿಳಿದುಬಂದಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

"ಕಾಲುವೆಯ ಇನ್ನೊಂದು ಬದಿ ಕೂಡಾ ದಿನವಿಡೀ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿರುತ್ತದೆ. ಆದರೆ ಈ ವ್ಯಕ್ತಿಯನ್ನು ಯಾರೂ ಏಕೆ ಗಮನಿಸಿಲ್ಲ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ" ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ. ಈ ಘಟನೆ ಬಗ್ಗೆ ವಿವರ ನೀಡುವಂತಿಲ್ಲ. ಉನ್ನತ ಅಧಿಕಾರಿಗಳು ಇದನ್ನು ನಿರ್ವಹಿಸುತ್ತಿದ್ದಾರೆ ಎಂದು ಕಾಳಿಘಾಟ್ ಪೊಲೀಸ್ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ಹರೀಶ್ ಚಟರ್ಜಿ ರಸ್ತೆಯಲ್ಲಿರುವ ಸಿಎಂ ನಿವಾಸಕ್ಕೆ ಧಾವಿಸಿದ ಕೊಲ್ಕತ್ತಾ ಪೊಲೀಸ್ ಕಮಿಷನರ್ ವಿನೀತ್ ಗೋಯಲ್ ಮಾರ್ಗದರ್ಶನದಲ್ಲಿ ತನಿಖೆ ನಡೆಯುತ್ತಿದೆ. ವ್ಯಕ್ತಿಯ ಉದ್ದೇಶ ಕುಚೋದ್ಯದ್ದಾಗಿತ್ತು ಎಂದು ಪೊಲೀಸರು ಪ್ರಕಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News