ಸಿದ್ದರಾಮಯ್ಯರ ವಿಷಯದಲ್ಲಿನ ಆಸಕ್ತಿಯ ಕನಿಷ್ಠ ಅರ್ಧ ಜನಪರ ಹೋರಾಟದ ಕಡೆ ತೋರಿಸಿ: ಎಚ್.ಸಿ ಮಹದೇವಪ್ಪ ಮನವಿ

Update: 2022-07-04 06:41 GMT

ಬೆಂಗಳೂರು: ರಾಜ್ಯದಲ್ಲಿ ಪ್ರಸ್ತುತ ಸರ್ಕಾರದಲ್ಲಿ ಜನರ ಹಿತಕ್ಕೆ ವಿರುದ್ಧವಾಗಿ ಸೃಷ್ಟಿಯಾಗಿರುವ ಹತ್ತಾರು ಸಮಸ್ಯೆಗಳಿರುವಾಗ ಕೆಲ ಮಾಧ್ಯಮಗಳು ಅನಗತ್ಯವಾದ ರಾಜಕಾರಣವನ್ನು ಹುಡುಕಿ ಪಕ್ಷದ ಒಳಗೆ ಒಡಕು ಮೂಡಿಸುವ ಕೆಲಸವನ್ನು ಮಾಡುತ್ತಿದೆ ಎಂದು ಮಾಜಿ ಸಚಿವ ಡಾ.ಎಚ್.ಸಿ ಮಹದೇವಪ್ಪ ಹೇಳಿದ್ದಾರೆ.

'ಸಿದ್ದರಾಮಯ್ಯನವರ ವಿಷಯದಲ್ಲಿ ನೀವು ತೋರುವ ವಿಪರೀತ ಆಸಕ್ತಿಯಲ್ಲಿ ಕನಿಷ್ಥ ಅರ್ಧದಷ್ಟನ್ನಾದರೂ ಜನಪರವಾಗಿ  ಹೋರಾಟ ಮಾಡುವ ಕಡೆ ತೋರಿಸಿ' ಎಂದು ಮಹದೇವಪ್ಪ ಅವರು ಫೇಸ್ ಬುಕ್ ನಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಅವರ ಫೇಸ್ ಬುಕ್ ಪೋಸ್ಟ್ ಹೀಗಿದೆ...

ಅಭಿಮಾನಿಗಳ ಕಾರ್ಯಕ್ರಮಕ್ಕೂ ಪಕ್ಷದ ಕಾರ್ಯಕ್ರಮಕ್ಕೂ ವ್ಯತ್ಯಾಸ ತಿಳಿಯದೇ ಹೋದರೆ ಹೇಗೆ?

ಈ ನಾಡು ಕಂಡ ಸಮರ್ಥ ಆಡಳಿತಗಾರ, ವಿಪಕ್ಷೀಯ ನಾಯಕರಾದ ಸಿದ್ದರಾಮಯ್ಯನವರ 75 ನೇ ಜನ್ಮದಿನದ ಪ್ರಯುಕ್ತ ಇದೇ ಮೊದಲ ಬಾರಿಗೆ ಅವರ ಅಪಾರ ಸಂಖ್ಯೆಯ ಅಭಿಮಾನಿಗಳು, ಗೆಳೆಯರು ಹಾಗೂ ಹಿತೈಷಿಗಳು ಸೇರಿಕೊಂಡು ಮುಂದಿನ ತಿಂಗಳು ಆಯೋಜಿಸಲಾಗುತ್ತಿರುವ ಕಾರ್ಯಕ್ರಮಕ್ಕೆ ನಮ್ಮ ಪಕ್ಷದ ವರಿಷ್ಠರಾದ ಶ್ರೀ ರಾಹುಲ್ ಗಾಂಧಿಯವರು ಶುಭಕೋರುವುದರ ಜೊತೆಗೆ ಕಾರ್ಯಕ್ರಮಕ್ಕೂ ಬರಲು ಒಪ್ಪಿಕೊಂಡಿರುವ ಸಂಗತಿಯು ನನ್ನಲ್ಲಿ ವೈಯಕ್ತಿಕವಾಗಿ ಸಂತೋಷವನ್ನು ತಂದಿದೆ.

"ಗುಣಕ್ಕೆ ಮತ್ಸರವಿಲ್ಲ" ಎಂಬಂತೆ ಜಾತಿ ಧರ್ಮ ಮತ್ತು ಪಕ್ಷ ಬೇಧವಿಲ್ಲದೇ, ಪಕ್ಷದ ವೇದಿಕೆಯಾಚೆಗೆ ಅಭಿಮಾನಿಗಳಿಂದ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲ ಕರ್ನಾಟಕ ಕಂಡ ದಕ್ಷ ಆಡಳಿತಗಾರರಾದ ಸಿದ್ದರಾಮಯ್ಯ ಅವರ 75 ನೇ ಜನ್ಮದಿನದಂದು ಅವರ ಆಡಳಿತಾತ್ಮಕ ಸಾಧನೆಗಳು, ಅವರ ಜನಪರವಾದ ಯೋಜನೆಗಳು ಮತ್ತು ಅವರೊಂದಿಗಿನ ಒಡನಾಟದ ನೆನಪುಗಳನ್ನು ಹಂಚಿಕೊಳ್ಳುವ ಕೆಲಸವು ಅಂದು ಜರುಗಲಿದೆ.

ಈ ಹಿನ್ನಲೆಯಲ್ಲಿ ಹಿಂದುಳಿದ ವರ್ಗಗಳಿಂದ ಬಂದರೂ ಎಲ್ಲ ಜನಾಂಗದ ಜನರ ಆಶೀರ್ವಾದದಿಂದ ಸರ್ವ ಜನಾಂಗದ ನಾಯಕನಾಗಿ ಬೆಳೆದಿರುವ ಸಿದ್ದರಾಮಯ್ಯನವರ ಜನ್ಮದಿನೋತ್ಸವದಲ್ಲೂ ಗೊಂದಲ ಸೃಷ್ಟಿಗೆ ಪ್ರಯತ್ನಿಸುತ್ತಿರುವ ನಮ್ಮ ಕೆಲ ಮಾಧ್ಯಮಗಳು ಅನಗತ್ಯವಾದ ರಾಜಕಾರಣವನ್ನು ಹುಡುಕಿ ಪಕ್ಷದ ಒಳಗೆ ಒಡಕು ಮೂಡಿಸುವ ಕೆಲಸವನ್ನು ಕೈಬಿಟ್ಟು ಓರ್ವ ಜನಪರ ಬದ್ಧತೆ ಇರುವ ನಾಯಕನಿಗೆ ಸಲ್ಲುವ ಪ್ರೀತಿ ಹಾರೈಕೆಗಳಿಗೆ ಸಾಕ್ಷಿಯಾಗಲು ಕೋರುತ್ತೇನೆ.

ಜೊತೆಗೆ ಜನಪರ ಮತ್ತು ಸೈದ್ಧಾಂತಿಕ ಬದ್ಧತೆಯ ಆಡಳಿತವೇ ಕಾಣೆಯಾಗುತ್ತಿರುವ ಈ ಹೊತ್ತಿನಲ್ಲಿ ಅನಗತ್ಯವಾಗಿ ಮೂಡುವ ಅಸಹನೆಗಿಂತಲೂ ಮನುಷ್ಯ ಪ್ರೇಮವೇ ಮುಖ್ಯವಾಗಬೇಕು ಎಂದು ಹೇಳುತ್ತಾ, ಉತ್ತಮ ಮನುಷ್ಯರು, ಆಡಳಿತಗಾರರು ನಮ್ಮೊಡನೆ ಇರುವಾಗಲೇ ಅವರಿಗೆ ಸಲ್ಲಬೇಕಾದ ಪ್ರೀತಿ, ಗೌರವ ಮತ್ತು ಮನ್ನಣೆಯನ್ನು ನೀಡೋಣ ಹಾಗೂ ವಿನಾಕಾರಣ ಅವರ ಮೇಲೆ ಮೂಡಿರಬಹುದಾದ ನಮ್ಮ ಅಸಹನೆ ಹಾಗೂ ಅಸೂಯೆಗಳನ್ನು ಮೀರುವ ಮೂಲಕ ಸೂಕ್ಷ್ಮತೆಯಿಂದ ವರ್ತಿಸೋಣ ಎಂದು ವಿನಂತಿಸುತ್ತಾ ನಿಮ್ಮೆಲ್ಲರಿಗೂ ಮತ್ತೊಮ್ಮೆ ಆ ಕಾರ್ಯಕ್ರಮಕ್ಕೆ ಪ್ರೀತಿಯ ಸ್ವಾಗತವನ್ನು ಕೋರುತ್ತೇನೆ.

ಕೊನೆಯಲ್ಲಿ ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಜನರು ತತ್ತರಿಸಿ, ಕೋಮುದ್ವೇಷದಿಂದ ಬಸವಳಿದಿದ್ದಾರೆ. ಪ್ರಸ್ತುತ ಸರ್ಕಾರದಲ್ಲಿ ಜನರ ಹಿತಕ್ಕೆ ವಿರುದ್ಧವಾಗಿ ಸೃಷ್ಟಿಯಾಗಿರುವ ಹತ್ತಾರು ಸಮಸ್ಯೆಗಳಿವೆ.

ಹೀಗಾಗಿ ಸಿದ್ದರಾಮಯ್ಯನವರ ವಿಷಯದಲ್ಲಿ ನೀವು ತೋರುವ ವಿಪರೀತ ಆಸಕ್ತಿಯಲ್ಲಿ ಕನಿಷ್ಟ ಅರ್ಧದಷ್ಟನ್ನಾದರೂ ಜನಪರವಾಗಿ  ಹೋರಾಟ ಮಾಡುವ ಕಡೆ ತೋರಿಸಿ ಎಂದು ಮತ್ತೊಮ್ಮೆ ವಿನಂತಿಸಿಕೊಳ್ಳುತ್ತೇನೆ!!

- ಡಾ ಹೆಚ್ ಸಿ ಮಹದೇವಪ್ಪ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News