5 ಲಕ್ಷ ರೂ. ಲಂಚಕ್ಕೆ ಬೇಡಿಕೆ ಪ್ರಕರಣ; ಎಸಿಬಿಯಿಂದ ಐಎಎಸ್ ಅಧಿಕಾರಿ ಜೆ.ಮಂಜುನಾಥ್ ಬಂಧನ

Update: 2022-07-04 16:00 GMT

ಬೆಂಗಳೂರು, ಜು.4: 5 ಲಕ್ಷರೂ. ಲಂಚಕ್ಕೆ ಬೇಡಿಕೆ ಆರೋಪ ಪ್ರಕರಣ ಸಂಬಂಧ ತನಿಖೆ ಮುಂದುವರೆಸಿರುವ ಎಸಿಬಿ ತನಿಖಾಧಿಕಾರಿಗಳು, ಐಎಎಸ್ ಅಧಿಕಾರಿ ಜೆ.ಮಂಜುನಾಥ್ ಅವರನ್ನು ಸೋಮವಾರ ಬಂಧಿಸಿದರು.

ಆನೇಕಲ್ ತಾಲೂಕಿನ ಕೂಡ್ಲು ಗ್ರಾಮದ 38 ಗುಂಟೆ ಜಮೀನು ಒಡೆತನಕ್ಕೆ ಸಂಬಂಧಿಸಿದ ವ್ಯಾಜ್ಯದಲ್ಲಿ ಅನುಕೂಲಕರ ಆದೇಶ ನೀಡಲು ಬೇಗೂರು ನಿವಾಸಿವೊಬ್ಬರಿಂದ  5ಲಕ್ಷ ಲಂಚ ಪಡೆಯುತ್ತಿದ್ದಾಗ ಜಿಲ್ಲಾಧಿಕಾರಿ ಕಚೇರಿ ವ್ಯವಸ್ಥಾಪಕ ಮಹೇಶ್ ಮತ್ತು ನ್ಯಾಯಾಲಯ ವಿಭಾಗದ ಸಹಾಯಕ ಚೇತನ್‍ಕುಮಾರ್ ಯಾನೆ ಚಂದ್ರು ಎಂಬುವವರನ್ನು ಎಸಿಬಿ ಮೇ 21ರಂದು ಬಂಧಿಸಿತ್ತು.

ಇದಾದ ಬಳಿಕ ಲಂಚದ ಹಣವನ್ನು ಮಹೇಶ್ ಮತ್ತು ಚೇತನ್‍ಕುಮಾರ್ ಪಡೆದಿದ್ದರೂ, ದೂರುದಾರರಿಗೆ ಸಂಬಂಧಿಸಿದ ಕಡತ ನೇರವಾಗಿ ಜಿಲ್ಲಾಧಿಕಾರಿ ಬಳಿ ಇರುವುದು ತನಿಖೆ ವೇಳೆ ಪತ್ತೆಯಾಗಿತ್ತು. ಪ್ರಕರಣದ ವಿಚಾರಣೆ ಪೂರ್ಣಗೊಳಿಸಿ ಮೂರು ತಿಂಗಳಾದರೂ ಆದೇಶ ಪ್ರಕಟಿಸಿದೇ ಇರುವುದು ಕಂಡುಬಂದಿತ್ತು.

ಹೀಗಾಗಿ, ತನಿಖೆ ಮುಂದುವರೆಸಿದ ಎಸಿಬಿ ಮಂಜುನಾಥ್ ಅವರನ್ನು ಬಂಧಿಸಿದೆ. ಪ್ರಕರಣದಲ್ಲಿ ಮಂಜುನಾಥ್ ಅವರನ್ನು ಮೂರನೇ ಆರೋಪಿ ಎಂದು ಹೆಸರಿಸಲಾಗಿದೆ.

ಲಂಚ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮಂಜುನಾಥ್ ಅವರನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿ ಹುದ್ದೆಯಿಂದ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ನಿರ್ದೇಶಕರ ಹುದ್ದೆಗೆ ವರ್ಗಾವಣೆಗೊಳಿಸಿ ಇತ್ತೀಚಿಗೆ ರಾಜ್ಯ ಸರಕಾರ ಆದೇಶ ಹೊರಡಿಸಲಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News