ಭಾರತದ ಸಂವಿಧಾನ ಕಾರ್ಮಿಕರ ಶೋಷಣೆಯನ್ನು ಕ್ಷಮಿಸುತ್ತದೆ ಎಂದ ಕೇರಳ ಸಚಿವ!

Update: 2022-07-06 02:58 GMT
ಸಜಿ ಚೆರಿಯನ್

ಪಟ್ಟಣಂತಿಟ್ಟ: ಭಾರತದ ಸಂವಿಧಾನ ಕಾರ್ಮಿಕರ ಶೋಷಣೆಯನ್ನು ಮನ್ನಿಸುತ್ತದೆ ಎಂದು ಹೇಳುವ ಮೂಲಕ ಕೇರಳದ ಸಂಸ್ಕೃತಿ ಸಚಿವ ಸಜಿ ಚೆರಿಯನ್ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಸಚಿವರ ಹೇಳಿಕೆಗೆ ಸಾರ್ವತ್ರಿಕ ಖಂಡನೆ ವ್ಯಕ್ತವಾಗಿದ್ದು, ಅವರ ರಾಜೀನಾಮೆಗೂ ಆಗ್ರಹ ಕೇಳಿಬಂದಿದೆ.

ಈ ಮೊದಲು ಕೂಡಾ ವಿವೇಚನಾರಹಿತ ಹೇಳಿಕೆಗಳ ಮೂಲಕ ವಿವಾದ ಸೃಷ್ಟಿಸಿದ್ದ ಸಚಿವರು, ವಿವಾದದ ಬಳಿಕ ಕ್ಷಮೆ ಯಾಚಿಸಿದ್ದಾರೆ.  ಪಟ್ಟಣಂತಿಟ್ಟದ ಮಲ್ಲಪಳ್ಳಿಯಲ್ಲಿ ನಡೆದ ಸಮಾರಂಭದಲ್ಲಿ ತಾವು ನೀಡಿದ ಹೇಳಿಕೆಯನ್ನು ತಿರುಚಲಾಗಿದೆ ಎಂದು ಅವರು ಸಮುಜಾಯಿಷಿ ನೀಡಿದ್ದಾರೆ.

ಮಲ್ಲಪಳ್ಳಿ ಸಿಪಿಎಂ ಏರಿಯಾ ಕಮಿಟಿ ಆಯೋಜಿಸಿದ್ದ ವಾರದ ರಾಜಕೀಯ ಬೆಳವಣಿಗೆ ಕುರಿತ ಫೇಸ್‍ಬುಕ್ ಲೈವ್‍ನ 100ನೇ ಸಂಚಿಕೆಯನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಸಂವಿಧಾನವನ್ನು ಬ್ರಿಟಿಷರು ಸಂಗ್ರಹಿಸಿದ್ದಾರೆ ಹಾಗೂ ಭಾರತೀಯರು ಅದನ್ನು ಯಥಾವತ್ತಾಗಿ ಬರೆದಿದ್ದಾರೆ. ಕಳೆದ 75 ವರ್ಷಗಳಿಂದ ಭಾರತ ಅದನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹೇಳಿದ್ದರು.

"ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವದಂಥ ಮೌಲ್ಯಗಳನ್ನು ಬದಿಯಲ್ಲಿ ಉಲ್ಲೇಖಿಸಿದ್ದರೂ, ಅದು ಶೋಷಣೆಯನ್ನು ಮನ್ನಿಸುತ್ತದೆ. ದೇಶದ ಮಹತ್ವದ ಆಯಾಮವಾದ ಸಂವಿಧಾನವನ್ನು ಅತ್ಯಾಕರ್ಷಕವಾಗಿ ರಚಿಸಲಾಗಿದೆ ಎಂದು ನಾವೆಲ್ಲ ಹೇಳುತ್ತೇವೆ. ಆದರೆ ಹಲವು ಮಂದಿಯನ್ನು ಲೂಟಿ ಮಾಡಲು ಅನುವು ಮಾಡಿಕೊಡುವ ಸಂವಿಧಾನವನ್ನು ದೇಶಕ್ಕೆ ನೀಡಲಾಗಿದೆ" ಎಂದು ವಿವರಿಸಿದ್ದರು ಎಂದು ವರದಿಯಾಗಿದೆ.

ಇದು ವಿವಾದದ ರೂಪು ತಳೆಯುತ್ತಿದ್ದಂತೆಯೇ ಮಲ್ಲಪಳ್ಳಿ ಏರಿಯಾ ಕಮಿಟಿ ಈ ಭಾಷಣವನ್ನು ಫೇಸ್‍ಬುಕ್ ಪೇಜ್‍ನಿಂದ ಕಿತ್ತುಹಾಕಿದೆ. ಹೊಸದಿಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಪಿಎಂ ಪಾಲಿಟ್‍ಬ್ಯೂರೊ ಸದಸ್ಯ ಎಂ.ಎ.ಬೇಬಿ, ಈ ಹೇಳಿಕೆ ಬಾಯ್ತಪ್ಪಿನಿಂದ ಬಂದ ಮಾತು ಎಂದು ಹೇಳಿದ್ದಾರೆ.

ಮಂಗಳವಾರ ಸದನದಲ್ಲಿ ಈ ಸಂಬಂಧ ಹೇಳಿಕೆ ನೀಡಿದ ಚೆರಿಯನ್, ನನ್ನ ಉದ್ದೇಶವಲ್ಲದ ಅರ್ಥವನ್ನು ನನ್ನ ಭಾಷಣಕ್ಕೆ ಕಲ್ಪಿಸಲಾಗಿದೆ ಎಂದು ಸಮುಜಾಯಿಷಿ ನೀಡಿದ್ದಾರೆ ಎಂದು timesofindia.com ವರದಿ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News