ಇಂದು ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರಿಂದ ‘ಬೆಂಗಳೂರು ಚಲೋ’

Update: 2022-07-06 19:07 GMT

ಬೆಂಗಳೂರು, ಜು.6: ರಾಷ್ಟ್ರೀಯ ಆರೋಗ್ಯ ಅಭಿಯಾನದ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರು ವೇತನ ಪರಿಷ್ಕರಣೆ, ಸೇವಾ ಭದ್ರತೆ ಸೇರಿದಂತೆ ಶ್ರೀನಿವಾಸಚಾರಿ ವರದಿ ಜಾರಿಗೊಳಿಸುವಂತೆ ಒತ್ತಾಯಿಸಿ ಇಂದು (ಜು.7) ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ‘ಬೆಂಗಳೂರು ಚಲೋ’ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ.

ಈ ಕುರಿತಂತೆ ಹೇಳಿಕೆ ನೀಡಿರುವ ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರ ಸಂಘದ ಗೌರವಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ನೌಕರರ ಸತತ ಎರಡು ವರ್ಷಗಳ ಹೋರಾಟದ ಫಲವಾಗಿ ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಅಂದಿನ ಆರೋಗ್ಯ ಸಚಿವ ಶ್ರೀರಾಮಲು, ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸಚಾರಿ, ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹಾಗೂ ಎರಡು ಇಲಾಖೆ ಅಧಿಕಾರಿಗಳು ಹಾಗೂ ಆರ್ಥಿಕ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚನೆ ಮಾಡಲಾಗಿತ್ತು. ಸಮಿತಿ ವರದಿ ಡಿಸೆಂಬರ್‍ನಲ್ಲಿ ಸರಕಾರಕ್ಕೆ ಸಲ್ಲಿಸಿದೆ. ಆದರೆ ಇದುವರೆಗೂ ಸರಕಾರ ವರದಿ ಅನುಷ್ಠಾನಗೊಳಿಸದಿರುವುದು ವಿಪರ್ಯಾಸ. ಈ ಹಿನ್ನೆಲೆಯಲ್ಲಿ ನಾಳೆಯಿಂದ ಬೆಂಗಳೂರಿನಲ್ಲಿ ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕರೆ ನೀಡಿದ್ದಾರೆ.

ಶ್ರೀನಿವಾಸಚಾರಿ ವರದಿ ಅನುಷ್ಠಾನ ಹಾಗೂ ವಾರ್ಷಿಕ ಮೌಲ್ಯಮಾಪನ ರದ್ದುಪಡಿಸುವಂತೆ ಕೋರಿ ನೌಕರರು “ಬೆಂಗಳೂರು ಚಲೋ” ಮೂಲಕ ಪುನಃ ಬೀದಿಗೆ ಇಳಿಯುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಮುಖ್ಯಮಂತ್ರಿಗಳಿಗೆ ಸಂಘದ ಗೌರವಾಧ್ಯಕ್ಷರು ಪತ್ರದ ಮುಖೇನ ಆಗ್ರಹಿಸಿದ್ದರೂ, ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿದ್ದಾರೆ.

ಈ ವಿಳಂಬಧೋರಣೆ ಹಾಗೂ ನೌಕರರನ್ನು ಪದೇಪದೇ ಬೀದಿಗೆ ಇಳಿಯುವಂತೆ ಮಾಡುತ್ತಿರುವುದನ್ನು ಖಂಡಿಸಿ ಶಾಸಕರು ಹಾಗೂ ಸಂಘದ ಗೌರವಾಧ್ಯಕ್ಷ ಆಯನೂರು ಮಂಜುನಾಥ್, ಮುಖ್ಯಮಂತ್ರಿಗಳು ಮಧ್ಯಸ್ಥಿಕೆ ವಹಿಸಬೇಕು ಹಾಗೂ ಬೇಡಿಕೆಗಳನ್ನು ಈಡೇರಿಸುವಂತೆ ಅವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News