ತಮಿಳುನಾಡು ಇಬ್ಬಾಗ ಮಾಡಬೇಕೆಂಬ ಸಲಹೆ ನೀಡಿದ ಬಿಜೆಪಿ ಶಾಸಕ ನಾಗೇಂದ್ರನ್

Update: 2022-07-07 05:10 GMT
Photo:IANS

ಚೆನ್ನೈ: ಬಿಜೆಪಿ ಶಾಸಕ ನಾಗೇಂದ್ರನ್  ತಮಿಳುನಾಡನ್ನು ಇಬ್ಭಾಗ ಮಾಡಬೇಕೆಂಬ ಸಲಹೆ ನೀಡಿದ್ದಾರೆ.  

ಡಿಎಂಕೆ ನಾಯಕ ಎ. ರಾಜಾ ಅವರು ಪ್ರತ್ಯೇಕ ತಮಿಳುನಾಡು ಬೇಡಿಕೆ ಈಡೇರಿಸುವಂತೆ ಕೇಂದ್ರವನ್ನು ಕೋರಿದ ಕೆಲವೇ ದಿನಗಳಲ್ಲಿ ಬಿಜೆಪಿ ನಾಯಕನಿಂದ ಈ  ಒತ್ತಾಯ ಕೇಳಿಬಂದಿದೆ.

ಆಡಳಿತಾರೂಢ ಡಿಎಂಕೆ ವಿರುದ್ಧ ಇತ್ತೀಚೆಗೆ  ದಕ್ಷಿಣ ತಮಿಳುನಾಡಿನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ  ನೈನಾರ್, "ರಾಜಾ ಅವರ ಭಾಷಣದ ನಂತರ ನನಗೆ ಒಂದು ಐಡಿಯಾ ಸಿಕ್ಕಿತು. ಒಂದು ವೇಳೆ  ತಮಿಳುನಾಡು ಇಬ್ಭಾಗವಾದರೆ, ನಾವು ಕೇಂದ್ರದ ಯೋಜನೆಗಳನ್ನು ಜನರಿಗೆ ಉತ್ತಮ ರೀತಿಯಲ್ಲಿ ತಲುಪಿಸಲು ಸಾಧ್ಯವಾಗುತ್ತದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಹೆಚ್ಚಿನ ಅನುದಾನ ಪಡೆಯಬಹುದು'' ಎಂದರು.

ರಾಜ್ಯ ಸ್ವಾಯತ್ತತೆಗಾಗಿ ಒತ್ತಾಯಿಸಿ  ಡಿಎಂಕೆ ನಾಯಕ ಹಾಗೂ  ಮಾಜಿ ಕೇಂದ್ರ ಸಚಿವ ರಾಜಾ, ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಸಮ್ಮುಖದಲ್ಲಿ ಪಕ್ಷದ ಚುನಾಯಿತ ಸ್ಥಳೀಯ ಸಂಸ್ಥೆ ಸದಸ್ಯರನ್ನು ಉದ್ದೇಶಿಸಿ ಮಾತನಾಡುತ್ತಾ, “ನಾನು ಅಮಿತ್ ಶಾ ಮತ್ತು ಪ್ರಧಾನಿಗೆ ನನ್ನ ನಾಯಕನ ಸಮ್ಮುಖದಲ್ಲಿ ಅತ್ಯಂತ ನಮ್ರತೆಯಿಂದ ಮನವಿ ಮಾಡುತ್ತೇನೆ..ನಮ್ಮ ಮುಖ್ಯಮಂತ್ರಿ ಅಣ್ಣಾ ಅವರ ಹಾದಿಯಲ್ಲಿ ಸಾಗುತ್ತಾರೆ.ನಮ್ಮನ್ನು ಪೆರಿಯಾರ್ ಅವರ  ದಾರಿಗೆ ತಳ್ಳಬೇಡಿ.ಪ್ರತ್ಯೇಕ ರಾಷ್ಟ್ರಕ್ಕೆ ಬೇಡಿಕೆ ಇಡುವಂತೆ ಮಾಡಬೇಡಿ.ರಾಜ್ಯಕ್ಕೆ  ಸ್ವಾಯತ್ತತೆ ನೀಡಿ.ಅಲ್ಲಿಯವರೆಗೆ ನಾವು ವಿರಮಿಸುವುದಿಲ್ಲ'' ಎಂದಿದ್ದರು.

ತಮಿಳುನಾಡು 38 ಜಿಲ್ಲೆಗಳಲ್ಲಿ 234 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ರಾಜ್ಯ ವಿಭಜನೆಗೆ ಜನಾಂದೋಲನವಾಗಲಿ, ರಾಜಕೀಯ ಬೇಡಿಕೆಯಾಗಲಿ ನಡೆದಿಲ್ಲ. ಬಿಜೆಪಿ ಕೇವಲ ನಾಲ್ಕು ಸ್ಥಾನಗಳಲ್ಲಿ ಅಲ್ಪ ಅಸ್ತಿತ್ವ ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News