ಬಂಟ್ವಾಳ | ಗುಡ್ಡ ಕುಸಿತ ಸ್ಥಳಕ್ಕೆ ಸಚಿವ ಸುನೀಲ್ ಕುಮಾರ್ ಭೇಟಿ, ಪರಿಶೀಲನೆ

Update: 2022-07-07 06:05 GMT

ಬಂಟ್ವಾಳ, ಜು.7: ಶೆಡ್ ಮೇಲೆ ಗುಡ್ಡ ಕುಸಿದು ಮೂವರು ‌ಕಾರ್ಮಿಕರು ಮೃತಪಟ್ಟ ತಾಲೂಕಿನ ಪಂಜಿಕಲ್ಲು ಘಟನಾ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಮತ್ತು ಶಾಸಕ‌ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಗುರುವಾರ ಬೆಳಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಸುನೀಲ್ ಕುಮಾರ್, ಘಟನೆ ನಡೆದ ಮಾಹಿತಿ ಸಿಕ್ಕಿದ ಕೂಡಲೇ ಸ್ಥಳಕ್ಕೆ ಜಿಲ್ಲಾಧಿಕಾರಿ, ಪೊಲೀಸ್, ತಹಶೀಲ್ದಾರ್, ಪಿಡಿಒ, ಅಗ್ನಿಶಾಮಕ ದಳ, ಎನ್.ಡಿ.ಆರ್.ಎಫ್‌. ತಂಡ ಹಾಗೂ ಸ್ಥಳೀಯರು ಆಗಮಿಸಿ ಮಣ್ಣಿನೊಳಗೆ ಸಿಲುಕಿಕೊಂಡಿದ್ದ ನಾಲ್ವರನ್ನು ರಕ್ಷಣೆ ಮಾಡುವ ಪ್ರಯತ್ನ ಮಾಡಿದ್ದಾರೆ‌. ಆದರೆ ಈ ಪೈಕಿ ಓರ್ವನನ್ನು ಮಾತ್ರ ಜೀವಂತ ಉಳಿಸಿಕೊಳ್ಳಲು ಸಾಧ್ಯವಾಯಿತು ಎಂದರು‌.

ನಾಲ್ವರು ಕಾರ್ಮಿಕರು ಕೂಡ ಕೇರಳ ರಾಜ್ಯದವರೆಂಬ ಪ್ರಾಥಮಿಕ ವರದಿಯ ಮಾಹಿತಿ. ಪೂರ್ಣ ವರದಿ ಬಂದ ನಂತರ ಸಂತ್ರಸ್ತ ಕುಟುಂಬಕ್ಕೆ ಸರಕಾರದ ಮಟ್ಟದಲ್ಲಿ ಸಾಧ್ಯವಿರುವ ಪರಿಹಾರ ನೀಡಲಾಗುವುದು ಎಂದು ಹೇಳಿದರು.

ಮಂಗಳೂರು ಮತ್ತು ಉಡುಪಿ ಭಾಗದಲ್ಲಿ ನಾಲ್ಕು ದಿನಗಳಿಂದ ನಿರಂತರವಾಗಿ ಸುರಿಯುವ ಮಳೆಗೆ ಸಾಕಷ್ಟು ನಷ್ಟವನ್ನು ಉಂಟು ಮಾಡಿದೆ. ಬೇರೆ ಬೇರೆ ಕಡೆಗಳಲ್ಲಿ ಪ್ರಾಕೃತಿಕ ವಿಕೋಪ ಉಂಟಾಗಿದ್ದು, ಎಲ್ಲ ಪ್ರದೇಶಗಳಿಗೆ ಸಚಿವರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಹಾರದ ಕಾರ್ಯವನ್ನು ಕೈಗೊಳ್ಳಲಿದ್ದೇವೆ. ಜೊತೆಗೆ ಜನರಿಗೆ ಧೈರ್ಯವನ್ನು ನೀಡುತ್ತವೆ. ಇಡೀ ಆಡಳಿತ ಯಂತ್ರವನ್ನು ಚುರುಕುಗೊಳಿಸಿ ಸನ್ನದ್ಧ ಮಾಡುವ ಕೆಲಸ ಮಾಡುತ್ತೇವೆ ಎಂದರು.

ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದಂತೆ ಹಾಗೂ ಮುಂಜಾಗೃತಾ ಕ್ರಮವಾಗಿ ಇಂದು(ಜು.7) ಸಂಜೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ತುರ್ತು ಸಭೆಯನ್ನು ಕರೆಯಲಾಗಿದೆ ಎಂದು ಸಚಿವ ಸುನೀಲ್ ಕುಮಾರ್ ತಿಳಿಸಿದರು.

ಮುಂದಿನ 48 ಗಂಟೆಯಲ್ಲಿ ಸಂಭವ್ಯ ಮಳೆಯ ಅಂದಾಜು ಮಾಡಿಕೊಂಡು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವುದು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ‌ಡಾ.ರಾಜೇಂದ್ರ ಕೆ.ವಿ., ತಹಶೀಲ್ದಾರ್ ಸ್ಮಿತಾರಾಮು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News