ಬೆಂಗಳೂರು | ರಾಹುಲ್ ಗಾಂಧಿ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು

Update: 2022-07-07 07:44 GMT

ಬೆಂಗಳೂರು, ಜು.7: ಎಐಸಿಸಿಸಿ ಮಾಜಿ ಅಧ್ಯಕ್ಷ, ಸಂಸದ ರಾಹುಲ್ ಗಾಂಧಿಯವರು  ಕರ್ನಾಟಕ ಉಚ್ಚ ನ್ಯಾಯಾಲಯದ ಕಲಾಪದ ದೃಶ್ಯವನ್ನು ಕಾನೂನುಬಾಹಿರವಾಗಿ ನಕಲು ಮಾಡಿಕೊಂಡು, ಆ ವಿಡಿಯೋವನ್ನು ತನ್ನ ರಾಜಕೀಯ ಹಿತಾಸಕ್ತಿಗಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ವಕೀಲರೊಬ್ಬರು ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ಬೆಂಗಳೂರಿನ ವಕೀಲ ಎ.ಶ್ರೇಯಸ್ ಈ ದೂರು ನೀಡಿದ್ದಾರೆ.

ಕರ್ನಾಟಕ ಹೈಕೋರ್ಟ್ ಕಲಾಪದ ವೇಳೆಯಲ್ಲಿ ಇತ್ತೀಚೆಗೆ ಪ್ರಕರಣವೊಂದರ ವಾದ ನಡೆಯುವಾಗ ನ್ಯಾಯಮೂರ್ತಿಗಳು ಭ್ರಷ್ಟಾಚಾರದ ವಿರುದ್ಧವಾಗಿ ಮಾತುಗಳನ್ನಾಡಿದ್ದರು. ರಾಹುಲ್ ಗಾಂಧಿಯವರು ಈ ಕೋರ್ಟ್ ಕಲಾಪದ ವಿಡಿಯೋ ನಕಲು ಮಾಡಿ ಅದನ್ನು ರಾಜಕೀಯ ದುರುದ್ದೇಶಕ್ಕೆ ಬಳಸಿಕೊಂಡಿದ್ದು, ಇದು ಕಾನೂನುಬಾಹಿರ ಮತ್ತು ಶಿಕ್ಷಾರ್ಹ. ಆದ್ದರಿಂದ ರಾಹುಲ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ದೂರಿನಲ್ಲಿ ಒತ್ತಾಯಿಸಲಾಗಿದೆ.

ಇದೇ ವಿಚಾರವಾಗಿ ಬಗ್ಗೆ ರಾಹುಲ್ ಗಾಂಧಿ ವಿರುದ್ಧ ನ್ಯಾಯಾಲಯದ ಕ್ರಿಮಿನಲ್ ನಿಂದನೆ (ಕ್ರಿಮಿನಲ್ ಕಂಟೆಮ್ಟ್) ಅಪರಾಧದ ಅಡಿಯಲ್ಲಿ ಸೂಕ್ತ ಕ್ರಮಕ್ಕಾಗಿ ಕರ್ನಾಟಕ ಹೈಕೋರ್ಟಿನ ಮುಖ್ಯ ನ್ಯಾಯಾದೀಶರಿಗೆ ಮತ್ತು ರಿಜಿಸ್ಟ್ರಾರ್ ಜನರಲ್  ಅವರಿಗೂ ದೂರು ಸಲ್ಲಿಸಲಾಗಿದೆ ಎಂದು ಬಿಜೆಪಿ ಕಾನೂನು ಪ್ರಕೋಷ್ಠದ ಸಂಚಾಲಕ ಯೋಗೇಂದ್ರ  ಹೊಡಘಟ್ಟ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News