ಬೈಂದೂರು: ಕಡಲು ಕೊರೆತದ ಪ್ರದೇಶಗಳಿಗೆ ಸಂಸದ ರಾಘವೇಂದ್ರ ಭೇಟಿ

Update: 2022-07-07 14:35 GMT

ಕುಂದಾಪುರ: ಕಳೆದೊಂದು ವಾರದ ಭಾರೀ ಮಳೆ ಹಾಗೂ ಗಾಳಿ ನಡುವೆ ಕಡಲು ಕೊರೆತದಿಂದ ಹಾನಿಗೊಳಗಾದ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಿರಿಮಂಜೇಶ್ವರ ಹಾಗೂ ಮರವಂತೆ ಪ್ರದೇಶಗಳಿಗೆ ಶಿವಮೊಗ್ಗ ಲೋಕಸಭಾ ಸಂಸದರಾದ ಬಿ.ವೈ.ರಾಘವೇಂದ್ರ, ಬೈಂದೂರು ಶಾಸಕರಾದ ಬಿ.ಎಂ.ಸುಕುಮಾರ್ ಶೆಟ್ಟಿ ಅವರೊಂದಿಗೆ ಇಂದು ಭೇಟಿ ನೀಡಿ ಹಾನಿಯನ್ನು ವೀಕ್ಷಿಸಿದರು.

ಕರಾವಳಿ ತೀರ ಪ್ರದೇಶಗಳಲ್ಲಿ ಮಳೆಗಾಲದ ವೇಳೆಯಲ್ಲಿ ಸಾಕಷ್ಟು ಪ್ರಮಾಣದ ಹಾನಿಯುಂಟಾಗುತ್ತಿದೆ. ತೋಟ ಹಾಗೂ ಬೆಳೆಗಳ ನಷ್ಟದೊಂದಿಗೆ ಜೀವ ಹಾನಿ ಯಾಗಿರುವ ವರದಿಗಳಿದ್ದು, ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಬೇಕು ಎಂಬ ಈ ಭಾಗದ ಜನರ ಆಗ್ರಹದ ಹಿನ್ನೆಲೆಯಲ್ಲಿ ತಜ್ಞರ ಅಭಿಪ್ರಾಯ ಪಡೆದು ಕೊಂಡು ಕಡಲ್ಕೊರೆತ ತಡೆಗೆ ಶಾಶ್ವತ ಪರಿಹಾರವನ್ನು ರೂಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಬಿ.ವೈ.ರಾಘವೇಂದ್ರ ಈ ಸಂದರ್ಭದಲ್ಲಿ ನುಡಿದರು.

ಶೀಘ್ರದಲ್ಲಿ ನಡೆಯಲಿರುವ ಸಂಸತ್ ಅಧೀವೇಶನದ ವೇಳೆಯಲ್ಲಿ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಅವರ ನೇತೃತ್ವದಲ್ಲಿ ಕೇಂದ್ರದ ಸಚಿವರನ್ನು ಭೇಟಿ ಮಾಡಿ ಕರಾವಳಿ ಪ್ರದೇಶದಲ್ಲಿ ಕಂಡುಬರುತ್ತಿರುವ ಕಡಲ್ಕೊರೆತಗಳಿಗೆ ಶಾಶ್ವತ ಪರಿಹಾರಕ್ಕೆ ಒತ್ತಾಯಿಸಲಾಗುವುದು ಎಂದು ಹಾನಿಯನ್ನು ಖುದ್ದಾಗಿ ವೀಕ್ಷಿಸಿದ ಬಳಿಕ ಶಿವಮೊಗ್ಗ ಸಂಸದರು ಮಾಧ್ಯಮದವರೊಂದಿಗೆ ಮಾತನಾಡುತ್ತಾ ಹೇಳಿದರು.

ಬೈಂದೂರು ಹಾಗೂ ಕುಂದಾಪುರ ತಾಲೂಕು ವ್ಯಾಪ್ತಿಯಲ್ಲಿ ವ್ಯಾಪಕ ಮಳೆ ಯಾಗಿದೆ. ಇದರಿಂದಾಗಿ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಡಲತೀರ ಸಹಿತ,  ನಾಡಾ, ನಾವುಂದ, ಹಡವು, ಅಂಪಾರು ಮುಂತಾದ ಪ್ರದೇಶಗಳಲ್ಲಿ ಸಾಕಷ್ಟು ಹಾನಿಯುಂಟಾಗಿದ್ದು, ಇಲ್ಲಿನ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸರಕಾರ ಬದ್ಧವಾಗಿದೆ. ಕಾಮಗಾರಿಗಳ ನಿರ್ವಹಣೆಯ ವೇಳೆ ಜನರ ದುಡ್ಡನ್ನು ದುರುಪ ಯೋಗ ಪಡಿಸಿಕೊಳ್ಳುವುದು ಕಂಡು ಬಂದಲ್ಲಿ ಅಂತಹ ಪ್ರಕರಣಗಳ ವಿರುದ್ಧ ನಿರ್ದಾಕ್ಷೀಣ್ಯ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಮರವಂತೆ ಕಿರುಬಂದರಿಗೆ 84 ಕೋಟಿ ರೂ.

ಮರವಂತೆಯ ಕಿರು ಬಂದರು ಅಭಿವೃದ್ಧಿಗಾಗಿ ಈಗಾಗಲೇ 84 ಕೋಟಿ ರೂ. ಯೋಜನೆ ಮಂಜೂರಾತಿ ದೊರಕಿದ್ದು, ಶೀಘ್ರದಲ್ಲಿ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಕೋವಿಡ್ ಕಾರಣದಿಂದ ಹಿಂದಿನ ಕಾಮಗಾರಿಗಳ ಪಾವತಿ ಬಾಕಿ ಇರುವುದರಿಂದ, ಅನುದಾನ ಇಲ್ಲದೆ ಗುತ್ತಿಗೆದಾರರು ಕಾಮಗಾರಿ ನಿರ್ವಹಿಸಲು ಮುಂದೆ ಬರುತ್ತಿಲ್ಲ. ಸದ್ಯ ಬಂದರು ಹಾಗೂ ಮೀನುಗಾರಿಕಾ ಇಲಾಖೆಯಿಂದ ಅಗತ್ಯ ಸ್ಥಳಗಳಲ್ಲಿ ತುರ್ತು ಕಾಮಗಾರಿ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.

ಮೀನುಗಾರರ ಆಕ್ರೋಶ: ಕಡಲ್ಕೊರೆತದಿಂದ ಕಳೆದ ೧೫ ದಿನಗಳನ್ನು ಆತಂಕ ದಿಂದಲೇ ಕಳೆದಿದ್ದೇವೆ. ನಮ್ಮ ಸಂಕಷ್ಟ ಕೇಳಲು ಯಾವ ಅಧಿಕಾರಿಗಳು ಬಂದಿಲ್ಲ. ತುರ್ತು ಕಾಮಗಾರಿ ಮಾಡಲು ಕೇಳಿದರೆ ದುಡ್ಡಿಲ್ಲ ಎಂದು ಉತ್ತರಿಸುತ್ತಾರೆ. ಸ್ಥಳೀಯರೇ ಒಟ್ಟಾಗಿ ಬಿಂದಿಗೆ ಹಿಡಿದುಕೊಂಡು ಹಣ ಒಟ್ಟು ಮಾಡಿ ಕಡಲ್ಕೊರೆತ ತಡೆಯಲು ತುರ್ತು ಕಾಮಗಾರಿಗಳನ್ನು ನಡೆಸಲು ಶ್ರಮದಾನ ಮಾಡುತ್ತಿದ್ದೇವೆ. ಸಂಜೆಯಾದರೇ ನೀರು ರಸ್ತೆಗೆ ಬರುತ್ತದೆ. ಕೂಡಲೇ ತುರ್ತು ಕಾಮಗಾರಿ ಪ್ರಾರಂಭಿಸುವಂತೆ ಸ್ಥಳೀಯರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಜಿಲ್ಲಾಧಿಕಾರಿ ಎಂ.ಕೂರ್ಮರಾವ್, ಸಿಇಓ ಪ್ರಸನ್ನ ಎಚ್., ಬಂದರು ಇಲಾಖೆ ಅಧಿಕಾರಿ ಉದಯ್ ಕುಮಾರ್, ಡಿವೈಎಸ್ಪಿ ಶ್ರೀಕಾಂತ್ ಕೆ, ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ ಶೆಟ್ಟಿ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಶರತ್ ಕುಮಾರ ಶೆಟ್ಟಿ ಉಪ್ಪುಂದ, ಮಾಜಿ ಜಿಪಂ ಸದಸ್ಯರಾದ ಬಾಬು ಹೆಗ್ಡೆ, ಶಂಕರ ಪೂಜಾರಿ, ಸುರೇಶ್ ಬಟವಾಡಿ, ರೋಹಿತ್ ಕುಮಾರ ಶೆಟ್ಟಿ ಸಿದ್ದಾಪುರ,  ಉದ್ಯಮಿ ವೆಂಕಟೇಶ್ ಕಿಣಿ ಬೈಂದೂರು ಸಂಸದರ ಜೊತೆಗಿದ್ದರು.

ಇದೇ ಸಂದರ್ಭದಲ್ಲಿ ಸಂಸದರು ಬೈಂದೂರು ವಿಧಾನಸಭಾ ಕ್ಷೇತ್ರದ ಗೋಳಿಹೊಳೆ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಎಲ್ಲೂರು ಮೆಸ್ಕಾಂ ಸಬ್‌ಸ್ಟೇಷನ್ ಕಾಮಗಾರಿಯನ್ನು ವೀಕ್ಷಿಸಿದ್ದು, ತ್ವರಿತಗತಿಯಲ್ಲಿ ಕೆಲಸವನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News