ಉಡುಪಿ: ವೃದ್ಧೆಯ ಕೊಲೆ ಪ್ರಕರಣ; ದಂಪತಿಗೆ ಜೀವಾವಧಿ ಶಿಕ್ಷೆ

Update: 2022-07-07 16:25 GMT

ಉಡುಪಿ :  ನಾಲ್ಕು ವರ್ಷದ ಹಿಂದೆ ಉಡುಪಿ ತಾಲೂಕಿನ ಪುತ್ತೂರು ಸುಬ್ರಹ್ಮಣ್ಯ ನಗರದಲ್ಲಿ ಒಂಟಿ ವೃದ್ಧೆಯನ್ನು ಬರ್ಬರವಾಗಿ ಕೊಲೆ ಮಾಡಿದ ದಂಪತಿಗೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಗುರುವಾರ  ಜೀವಾವಧಿ ಶಿಕ್ಷೆ ವಿಧಿಸಿದೆ.

ಧಾರವಾಡ ತಾಲೂಕಿನ ನವಲಗುಂದ ನಿವಾಸಿಗಳಾದ ಅಂಬಣ್ಣ ಅಲಿಯಾಸ್ ಅಂಬರೀಶ್ ಹಾಗೂ ಆತನ ಪತ್ನಿ ಜ್ಯೋತಿ ಶಿಕ್ಷೆಗೆ ಗುರಿಯಾದ ದಂಪತಿಯಾಗಿದ್ದು, 80 ವರ್ಷ ಪ್ರಾಯದ ರತ್ನಾವತಿ ಶೇಡ್ತಿ ಕೊಲೆಯಾದವರು. ದಂಪತಿಗೆ ಜೀವಾವಧಿ ಶಿಕ್ಷೆಯ ಜೊತೆಗೆ ತಲಾ ೫೦,೦೦೦ ರೂ.ದಂಡ ಸಹ ವಿಧಿಸಲಾಗಿದೆ.

ಪ್ರಕರಣದ ವಿವರ: ರತ್ನಾವತಿ ಶೇಡ್ತಿ ಅವರಿಗೆ ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರಿದ್ದು, ಪುತ್ತೂರಿನ ಸುಬ್ರಹ್ಮಣ್ಯ ನಗರದಲ್ಲಿ ಒಂಟಿಯಾಗಿ ವಾಸವಾಗಿದ್ದರು. ಮೂರು ಕೊಠಡಿಗಳನ್ನು ಬಾಡಿಗೆ ಕೊಟ್ಟು ಜೀವನ ನಿರ್ವಹಣೆ ಮಾಡುತ್ತಿದ್ದರು. ಮಕ್ಕಳು ಆಗಾಗ ಬಂದು ತಾಯಿಯ ಯೋಗಕ್ಷೇಮ ವಿಚಾರಿಸಿ ಕೊಳ್ಳುತ್ತಿದ್ದರು. 

೨೦೧೯ರ ಜು.೫ರಂದು ಪುತ್ರಿ ಸುಪ್ರಭಾ ತಾಯಿಗೆ ಕರೆ ಮಾಡಿದಾಗ ಅವರು ಸ್ವೀಕರಿಸಲಿಲ್ಲ. ಕೂಡಲೇ ಸಹೋರರಿಗೆ ಕರೆ ಮಾಡಿ ವಿಚಾರಿಸಿದಾಗಲೂ ತಾಯಿಯ ಬಗ್ಗೆ ಮಾಹಿತಿ ಸಿಕ್ಕಿರಲಿಲ್ಲ. ಅದೇ ದಿನ ಸಂಜೆ ಅಮ್ಮನ ಮನೆಗೆ ಬಂದಾಗ ಬೆಡ್‌ರೂಮಿನಲ್ಲಿ ತಾಯಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ತತ್‌ಕ್ಷಣ ಆಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಆರೋಪಿಗಳು ಬಿಟ್ಟಿದ್ದ ಸುಳಿವಿನ ಜಾಡು ಹಿಡಿದ ಪೊಲೀಸರು ಜು.೧೦ರಂದು ಆರೋಪಿ ದಂಪತಿಯನ್ನು ಬಂಧಿಸಿದ್ದರು. ಆರೋಪಿಗಳನ್ನು ವಿಚಾರಣೆಗೊಳ ಪಡಿಸಿದಾಗ ಜು.೨ರಂದು ಅಪರಾಹ್ನ ರತ್ನಾವತಿ ಶೇಡ್ತಿ ಮನೆಗೆ ನುಗ್ಗಿ ಆಭರಣಕ್ಕೆ ಬೇಡಿಕೆ ಇಡಲಾಗಿತ್ತು. ಕೊಡಲು ನಿರಾಕರಿಸಿದಾಗ ಕತ್ತಿಯಿಂದ ಕೊಲೆ ಮಾಡಿ ಮೈಮೇಲಿದ್ದ ಆಭರಣ, ಮನೆಯಲ್ಲಿದ್ದ ಚಿನ್ನಾಭರಣ, ಮೊಬೈಲ್ ಹಾಗೂ ೫,೦೦೦ರೂ. ನಗದನ್ನು ದೋಚಿ ಪರಾರಿಯಾಗಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದರು.

ಅಂದಿನ ಉಡುಪಿ ಇನ್‌ಸ್ಪೆಕ್ಟರ್ ಮಂಜುನಾಥ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಾಯಾಲಯದಲ್ಲಿ ಪ್ರಕರಣ ಸಂಬಂಧ ೨೧ ಸಾಕ್ಷಿಗಳ ವಿಚಾರಣೆ ನಡೆದಿತ್ತು. ಪ್ರಾಸಿಕ್ಯೂಷನ್ ಪರವಾಗಿ ೫೩ ದಾಖಲಾತಿ ಹಾಗೂ ೬ ಇತರ ವಸ್ತುಗಳನ್ನು ಗುರುತಿಸಲಾಗಿತ್ತು. ಸಾಕ್ಷಿದಾರರ ವಿಚಾರಣೆಯನ್ನು ಪ್ರಧಾನ ಜಿಲ್ಲಾ ಸೆಷನ್ಸ್ ನ್ಯಾಾಯಾಲಯದ ಸರಕಾರಿ ಅಭಿಯೋಜಕರಾದ ಶಾಂತಿಬಾಯಿ ನಡೆಸಿದ್ದರು.

ಪ್ರಕರಣ ೨೦೨೨ರ ಫೆಬ್ರವರಿಯಲ್ಲಿ ೨ನೇ ಹೆಚ್ಚುವರಿ ಜಿಲ್ಲಾ ನ್ಯಾಾಯಾಲಯಕ್ಕೆ  ವರ್ಗಾವಣೆಯಾಯಿತು. ನ್ಯಾಯಾಧೀಶರಾದ ದಿನೇಶ್ ಹೆಗಡೆ ವಾದ- ವಿವಾದಗಳನ್ನು ಆಲಿಸಿ ಆರೋಪಿಗಳ ವಿರುದ್ಧದ ಆರೋಪಗಳು ರುಜುವಾತಾ ಗಿದೆ ಎಂದು ತೀರ್ಪು ನೀಡಿ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಸರಕಾರದ ಪರವಾಗಿ ಸರಕಾರಿ  ಅಭಿಯೋಜಕ ಜಯರಾಮ ಶೆಟ್ಟಿ ವಾದ ಮಂಡಿಸಿದ್ದರು.

ಶಿಕ್ಷೆಯ ವಿವರ: ಆರೋಪಿಗಳ ವಿರುದ್ಧ ಜೀವಾವಧಿ ಶಿಕ್ಷೆ,  ೭ ವರ್ಷ ಕಠಿನ ಸಜೆ,  ೭ ವರ್ಷ ಸಾದಾ ಸಜೆ ಹಾಗೂ ೬ ತಿಂಗಳು ಶಿಕ್ಷೆ ವಿಧಿಸಲಾಗಿದ್ದು, ಏಕಕಾಲದಲ್ಲಿ ಅವುಗಳನ್ನು ಅನುಭವಿಸುವಂತೆ ಆದೇಶಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News