ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಬೆಲೆ ಏರಿಕೆ ನಿಯಂತ್ರಣದಲ್ಲಿದೆ: ಅಮಿತ್ ಶಾ

Update: 2022-07-13 15:46 GMT

ಹೊಸದಿಲ್ಲಿ,ಜು.13: ನರೇಂದ್ರ ಮೋದಿ ಸರಕಾರದ ನೀತಿಗಳಿಂದಾಗಿ ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಬೆಲೆಏರಿಕೆ ಮತ್ತು ಆರ್ಥಿಕ ಹಿಂಜರಿತ ನಿಯಂತ್ರಣದಲ್ಲಿವೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿದ್ದಾರೆ.
 ಮಂಗಳವಾರ ಇಲ್ಲಿ ಗಣಿಗಳು ಮತ್ತು ಖನಿಜಗಳ ಕುರಿತು ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಶಾ,‘ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಬೆಲೆಏರಿಕೆ ನಿಯಂತ್ರಣದಲ್ಲಿದೆ. ಶ್ರೀಲಂಕಾ,ಪಾಕಿಸ್ತಾನ ಮತ್ತ ಇತರ ನೆರೆಯ ದೇಶಗಳಲ್ಲಿಯ,ಅಷ್ಟೇ ಏಕೆ,ಅಮೆರಿಕದಲ್ಲಿಯ ಸ್ಥಿತಿಯನ್ನೂ ನಾವು ನೋಡುತ್ತಿದ್ದೇವೆ ’ ಎಂದರು.

 ಕೋವಿಡ್ ಸಾಂಕ್ರಾಮಿಕದ ಬಳಿಕ ಈಗಲೂ ಹಲವಾರು ದೇಶಗಳು ತಮ್ಮ ಆರ್ಥಿಕತೆಯ ಮೇಲೆ ಅದರ ಪರಿಣಾಮವನ್ನು ಅನುಭವಿಸುತ್ತಿವೆ,ಆದರೆ ಭಾರತದಲ್ಲಿ ಬೆಲೆಏರಿಕೆ ಮತ್ತು ಆರ್ಥಿಕ ಮಂದಗತಿ ಇವೆಯಾದರೂ ಅವು ನಿಯಂತ್ರಣದಲ್ಲಿವೆ ಎಂದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಳಿ ನಡೆಸಿದ ಶಾ,ಜಿಎಸ್ಟಿಯನ್ನು ‘ಗಬ್ಬರ್ ಸಿಂಗ್ ಟ್ಯಾಕ್ಸ್’ ಎಂದು ಕರೆಯುವವರು ಇಂದು ಜಿಎಸ್ಟಿ ಸಂಗ್ರಹ 1.62 ಲ.ಕೋ.ರೂ.ಗಳನ್ನು ದಾಟಿದೆ ಎನ್ನುವುದನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.
                  ‌
ಕಲ್ಲಿದ್ದಲು ಗಣಿಗಳ ಹರಾಜು

ಕಲ್ಲಿದ್ದಲು ಆಮದನ್ನು ತಗ್ಗಿಸಲು ಸರಕಾರವು ತನ್ನ ವಶದಲ್ಲಿರುವ ಶೇ.50ರಷ್ಟು ಕಲ್ಲಿದ್ದಲು ಬ್ಲಾಕ್ಗಳ ಹರಾಜಿಗೆ ಅವಕಾಶ ನೀಡಿದೆ ಎಂದು ಶಾ ತಿಳಿಸಿದರು.

ಹಿಂದೆ ಮೊದಲು ಬಂದವರಿಗೆ ಮೊದಲು ಆದ್ಯತೆ ನೆಲೆಯಲ್ಲಿ ಕಲ್ಲಿದ್ದಲು ಬ್ಲಾಕ್ಗಳನ್ನು ಹಂಚಿಕೆ ಮಾಡಲಾಗುತ್ತಿತ್ತು. ಆಗ ಹಂಚಿಕೆಗಳು ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿದ್ದವು. ಖನಿಜಗಳು ದೇಶದ ಸಂಪನ್ಮೂಲಗಳಾಗಿವೆ ಮತ್ತು ದೇಶದ ಅಭಿವೃದ್ಧಿಗಾಗಿ ಅವುಗಳನ್ನು ಹರಾಜು ಮಾಡಬೇಕು ಎಂದರು. ನಿಮಗೆಷ್ಟು ಖನಿಜ ಬೇಕೋ ತೆಗೆದುಕೊಳ್ಳಿ,ಸರಕಾರವು ನಿಮ್ಮನ್ನು ಉತ್ತೇಜಿಸುತ್ತದೆ. ಆದರೆ ಕೇವಲ ಖನಿಜವನ್ನು ರಫ್ತುಮಾಡುವುದು ದೇಶಕ್ಕೆ ಲಾಭದಾಯಕವಲ್ಲ. ಅದನ್ನು ಇಲ್ಲಿಯೇ ಬಳಸಬೇಕು,ಅಂತಿಮ ಉತ್ಪನ್ನ ಇಲ್ಲಿಯೇ ತಯಾರಾಗಬೇಕು ಮತ್ತು ವಿದೇಶಿ ಮಾರುಕಟ್ಟೆಗಳಿಗೆ ರವಾನೆಯಾಗಬೇಕು ಎಂದು ಶಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News