ದೇಶದ ಹಲವೆಡೆ ಮಳೆಗೆ ವ್ಯಾಪಕ ಹಾನಿ, ಸಾವು- ನೋವು

Update: 2022-07-14 03:19 GMT
 Photo: PTI

ಮುಂಬೈ/ ಅಹ್ಮದಾಬಾದ್/ಭೋಪಾಲ್: ದೇಶದ ಹಲವು ಕಡೆಗಳಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಹಲವು ಮಂದಿ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದಲ್ಲೇ 89 ಮಂದಿ ಮಳೆಸಂಬಂಧಿ ಅನಾಹುತಗಳಿಗೆ ಬಲಿಯಾಗಿದ್ದು, ಇತರ 68 ಮಂದಿ ಗಾಯಗೊಂಡಿದ್ದಾರೆ. ನಾಲ್ಕು ಮಂದಿ ನಾಪತ್ತೆಯಾಗಿದ್ದಾರೆ. ಹಲವೆಡೆ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಗುಜರಾತ್‍ನಲ್ಲಿ ಕಳೆದ 24 ಗಂಟೆಗಳಲ್ಲಿ ಮಳೆ ಸಂಬಂಧಿ ಅನಾಹುತಗಳಿಗೆ ಕನಿಷ್ಠ 14 ಮಂದಿ ಬಲಿಯಾಗಿದ್ದಾರೆ. ದಕ್ಷಿಣ ಗುಜರಾತ್ ಮತ್ತು ಕಚ್-ಸೌರಾಷ್ಟ್ರ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದೆ. 31 ಸಾವಿರಕ್ಕೂ ಹೆಚ್ಚು ಮಂದಿಯನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಕಳೆದ 13 ದಿನಗಳಿಂದ ಮುಂಬೈ ಸೇರಿದಂತೆ ಹಲವೆಡೆ ಭಾರಿ ಮಳೆಯಾಗುತ್ತಿದ್ದು, 249 ಗ್ರಾಮಗಳಲ್ಲಿ ವ್ಯಾಪಕ ಹಾನಿಯಾಗಿದೆ. 7796 ಮಂದಿಯನ್ನು ಸ್ಥಳಾಂತರಿಸಲಾಗಿದೆ. 1386 ಮನೆಗಳು ಭಾಗಶಃ ಜಖಂಗೊಂಡಿದ್ದು, 44 ಸಂಪೂರ್ಣ ನಾಶವಾಗಿವೆ.
35 ಪರಿಹಾರ ಶಿಬಿರಗಳನ್ನು ಆರಂಭಿಸಲಾಗಿದ್ದು, ಘಡಚಿರೋಲಿ, ಪಾಲ್ಗಾರ್ ಮತ್ತು ನಾಗ್ಪುರ ಜಿಲ್ಲೆಗಳಲ್ಲಿ ಗರಿಷ್ಠ ಹಾನಿಯಾಗಿದೆ. ನಾಲ್ಕು ಭೂಕುಸಿತ ಪ್ರಕರಣಗಳಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ,

ಮಧ್ಯ ಪ್ರದೇಶದ ಬೆತೂಲ್ ಮತ್ತು ಹರ್ದಾ ಜಿಲ್ಲೆಯಲ್ಲಿ ಮಳೆಹಾನಿ ವ್ಯಾಪಕವಾಗಿದೆ. ಹಲವು ನದಿಗಳು ತುಂಬಿ ಹರಿಯುತ್ತಿವೆ. ನಾಗ್ಪುರಕ್ಕೆ ಹೋಗುತ್ತಿದ್ದ ಒಂದೇ ಕುಟುಂಬದ ಆರು ಮಂದಿ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News