ಅಫ್ಘಾನ್ ಗೆ 20 ಮಿಲಿಯನ್ ಡಾಲರ್ ಆರ್ಥಿಕ ನೆರವು: ವಿಶ್ವಸಂಸ್ಥೆ, ವಿಶ್ವಬ್ಯಾಂಕ್ ಜಂಟಿ ಒಪ್ಪಂದ

Update: 2022-07-16 16:45 GMT

ಕಾಬೂಲ್, ಜು.16: ಅಫ್ಘಾನಿಸ್ತಾನದ 8 ವಲಯ ಹಾಗೂ 34 ಪ್ರಾಂತಗಳಿಗೆ ಮಾನವೀಯ, ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ ಉಪಕ್ರಮ ಕೈಗೊಳ್ಳಲು ನೆರವಾಗುವ 20 ಮಿಲಿಯನ್ ಡಾಲರ್ ಮೊತ್ತದ ಒಪ್ಪಂದಕ್ಕೆ ವಿಶ್ವಸಂಸ್ಥೆಯ ಅಭಿವೃದ್ಧಿ ಯೋಜನೆ (ಯುಎನ್ಡಿಪಿ) ಮತ್ತು ವಿಶ್ವಬ್ಯಾಂಕ್ ಸಹಿ ಹಾಕಿದೆ. ಆರ್ಥಿಕ ಪುನರುಜ್ಜೀವನ ಮತ್ತು ದುರ್ಬಲ ಸಮುದಾಯಗಳನ್ನು ಬೆಂಬಲಿಸುವಲ್ಲಿ ದಶಕಗಳ ಅನುಭವ ಮತ್ತು ಪರಿಣತಿಯ ಹಿನ್ನೆಲೆಯಲ್ಲಿ ಯುಎನ್ಡಿಪಿ 400 ಎನ್ಜಿಒ ಹಾಗೂ ಸಿಎಸ್ಒಗಳನ್ನು ಅದರ ಸಾಮರ್ಥ್ಯ ಮತ್ತು ಯೋಜನಾ ವಿನ್ಯಾಸದ ಆಧಾರದಲ್ಲಿ ಆಯ್ಕೆ ಮಾಡಲಾಗುವುದು ಎಂದು ವಿಶ್ವಸಂಸ್ಥೆ ಹೇಳಿದೆ.


 ವಿಕಲಾಂಗ ವ್ಯಕ್ತಿಗಳು ಸೇರಿದಂತೆ ದುರ್ಬಲ ಮತ್ತು ಅಂಚಿನಲ್ಲಿರುವ ಸಮುದಾಯಗಳಿಗೆ ಆರೋಗ್ಯ, ಶಿಕ್ಷಣ , ಕೃಷಿ ಮತ್ತು ಆಹಾರದ ಭದ್ರತೆ ಮತ್ತು ಜೀವನೋಪಾಯ ಚಟುವಟಿಕೆಗಳಿಗೆ ಪ್ರವೇಶವನ್ನು ಹೆಚ್ಚಿಸುವ ಉದ್ದೇಶವನ್ನು ತ್ವರಿತ ಪರಿಣಾಮ ಯೋಜನೆಗಳು ಹೊಂದಿದೆ. ಅಫ್ಘಾನ್ನಲ್ಲಿ ದೀರ್ಘಾವಧಿಯ ಯುದ್ಧದ ಹಿನ್ನೆಲೆಯಲ್ಲಿ, ಎನ್ಜಿಒ (ಸರಕಾರೇತರ ಸಂಸ್ಥೆಗಳು) ಹಾಗೂ ಸಿಎಸ್ಒಗಳು ಮಾನವೀಯ ಸೇವೆ ಮತ್ತು ಅಭಿವೃದ್ಧಿ ಚಟುವಟಿಕೆಯನ್ನು ದುರ್ಗಮ ಪ್ರದೇಶಕ್ಕೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ವಿಶ್ವಸಂಸ್ಥೆ ಹೇಳಿದೆ.
    
   
ಅಫ್ಘಾನ್ನಲ್ಲಿನ ಎನ್ಜಿಒ ಹಾಗೂ ಸಿಎಸ್ಒ ಜತೆ ಒಗ್ಗಟ್ಟು ಮತ್ತು ಬೆಂಬಲವನ್ನು ತೋರಿಸಿರುವುದಕ್ಕೆ ಮತ್ತು ಅವುಗಳ ಪ್ರಗತಿಗೆ ನೆರವಾಗಿರುವುದಕ್ಕೆ ವಿಶ್ವಬ್ಯಾಂಕ್ಗೆ ಧನ್ಯವಾದಗಳು. ಈ ಯೋಜನೆಯ ಮೂಲಕ ಸಮುದಾಯಕ್ಕೆ ತ್ವರಿತವಾಗಿ ಮತ್ತು ಹೊಂದಿಕೊಳ್ಳುವ ರೀತಿಯಲ್ಲಿ ನೆರವಾಗುವ ಯುಎನ್ಡಿಪಿಯ ಆದ್ಯತೆಯನ್ನು ಇದು ಎತ್ತಿತೋರಿಸಿದೆ ಎಂದು ಯುಎನ್ಡಿಪಿ ಸ್ಥಾನಿಕ ಪ್ರತಿನಿಧಿ ಸುರಯೊ ಬುಝರ್ಕೋವ ಹೇಳಿದ್ದಾರೆ. ಅಫ್ಘಾನಿಸ್ತಾನ ಪುನರ್ರಚನೆ ಪ್ರತಿಷ್ಟಾನ (ಎಆರ್ಟಿಎಫ್) , ದೇಣಿಗೆದಾರರು ಮತ್ತು ಅಂತರಾಷ್ಟ್ರೀಯ ಸಮುದಾಯದ ಕೋರಿಕೆಯ ಆಧಾರದಲ್ಲಿ ಅಫ್ಘಾನ್ನ ಜನತೆಯನ್ನು ಬೆಂಬಲಿಸುವ ಹೆಚ್ಚುವರಿ ವಿಧಾನವಾಗಿದೆ. ಆಯ್ದ ವಿಶ್ವಸಂಸ್ಥೆ ಏಜೆನ್ಸಿಗಳಿಗೆ ಹಾಗೂ ಅಂತರಾಷ್ಟ್ರೀಯ ಎನ್ಜಿಒಗಳಿಗೆ ಎಆರ್ಟಿಎಫ್ನ ಸ್ವೀಕಾರ-ಕಾರ್ಯಗತ ರೂಪದ 1 ಬಿಲಿಯನ್ ಡಾಲರ್ನಷ್ಟು ನಿಧಿಯನ್ನು ಒದಗಿಸುವುದಕ್ಕೆ ಈ ವಿಧಾನ ಮಾರ್ಗಸೂಚಿಯಾಗಿದೆ ಎಂದು ಯುಎನ್ಡಿಪಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News