ರಾಜ್ಯದ ಎಲ್ಲಾ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಣೆಗೆ ಸರಕಾರ ಆದೇಶ

Update: 2022-07-18 04:01 GMT

ಬೆಂಗಳೂರು, ಜು.18: ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ 1ರಿಂದ 8ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 46 ದಿನಗಳವರೆಗೆ ಪೂರಕ ಪೌಷ್ಟಿಕಾಂಶದ ರೂಪದಲ್ಲಿ ಮೊಟ್ಟೆ ಅಥವಾ ಚಿಕ್ಕಿಯನ್ನು ವಿತರಿಸಲು ರಾಜ್ಯ ಸರಕಾರ ಆದೇಶ ಹೊರಡಿಸಿದೆ. 

100 ದಿನಗಳವರೆಗೆ ಮಧ್ಯಾಹ್ನ ಉಪಹಾರ ಯೋಜನೆಯಡಿ ಮೊಟ್ಟೆ ವಿತರಿಸಲು ಶಿಕ್ಷಣ ಇಲಾಖೆ ಸಲ್ಲಿಸಿದ್ದ ಪ್ರಸ್ತಾವವನ್ನು ಭಾಗಶಃ ಒಪ್ಪಿಕೊಂಡಿದ್ದ  ಆರ್ಥಿಕ ಇಲಾಖೆಯು 100 ದಿನಗಳ ಬದಲಿಗೆ  ಕೇವಲ 46 ದಿನಗಳವರೆಗೆ ಮೊಟ್ಟೆ ನೀಡಲು ಅನುಮೋದನೆ ನೀಡುತ್ತಿದ್ದಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು 2022ರ ಜುಲೈ 16ರಂದು ಈ ಸಂಬಂಧ ಆದೇಶ ಹೊರಡಿಸಿದೆ. ಆದೇಶದ ಪ್ರತಿಯು The File'ಗೆ ಲಭ್ಯವಾಗಿದೆ.

'2022-23ನೇ ಸಾಲಿನಲ್ಲಿ ಪ್ರಧಾನಮಂತ್ರಿ ಪೋಷಣ ಶಕ್ತಿ ನಿರ್ಮಾಣ್‌ ಯೋಜನೆ (ಮಧ್ಯಾಹ್ನ ಉಪಹಾರ ಯೋಜನೆ) ಚಟುವಟಿಕೆಗಳಡಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ 1ರಿಂದ 8ನೇ ತರಗತಿಗಳವರೆಗೆ ವ್ಯಾಸಂಗ ಮಾಡುತ್ತಿರುವ ಫಲಾನುಭವಿ ವಿದ್ಯಾರ್ಥಿಗಳಿಗೆ ಪ್ರತಿ ವಿದ್ಯಾರ್ಥಿಗೆ ಒಂದು ದಿನ ಘಟಕ ವೆಚ್ಚ 6 ರೂ.ನಂತೆ 46 ದಿನಗಳವರೆಗೆ ಪೂರಕ ಪೌಷ್ಟಿಕಾಂಶ ರೂಪದಲ್ಲಿ ಮೊಟ್ಟೆ ಅಥವಾ ಚಿಕ್ಕಿಯನ್ನು ವಿತರಿಸಬೇಕು' ಎಂದು ಆದೇಶದಲ್ಲಿ ಸೂಚಿಸಲಾಗಿದೆ.

ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮೊಟ್ಟೆ ಅಥವಾ ಇತರೆ ಪೌಷ್ಟಿಕ ಆಹಾರ ಪದಾರ್ಥವನ್ನು ವಿತರಿಸಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಪ್ರತ್ಯೇಕ ಮಾರ್ಗಸೂಚಿಗಳನ್ನು ಹೊರಡಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಬೀದರ್‌, ಬಳ್ಳಾರಿ, ವಿಜಯನಗರ, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿಯೂ 46 ದಿನಗಳವರೆಗೆ ಮೊಟ್ಟೆ ಅಥವಾ ಚಿಕ್ಕಿ ವಿತರಿಸಲು ಮುಂದಿನ ಮೂರು ತಿಂಗಳ ಅವಧಿಗೆ ಅನುದಾನ ವಿತರಿಸಲಾಗಿದೆ. ಈ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ 1ರಿಂದ 8ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 46 ದಿನಗಳವರೆಗೆ ನಿಧಿ-1ರಲ್ಲಿ ಉಳಿಕೆಯಾಗಿರುವ ಅನುದಾನದಿಂದ ಮಾತ್ರ ಭರಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.

46 ದಿನಗಳಿಗೆ ಮೊಟ್ಟೆ ಅಥವಾ ಮೊಟ್ಟೆಯನ್ನು ಸ್ವೀಕರಿಸದ ವಿದ್ಯಾರ್ಥಿಗಳಿಗೆ ಇತರ ಪೌಷ್ಟಿಕ ಆಹಾರ ಪದಾರ್ಥವನ್ನು ವಿತರಿಸಲು ಪ್ರತಿ ವಿದ್ಯಾರ್ಥಿಗೆ ಒಂದು ದಿನದ ಘಟಕ ವೆಚ್ಚ 6 ರೂ.ನಂತೆ ಒಟ್ಟಾರೆ 4,494.29 ಲಕ್ಷ ರೂ.ಗಳಿಗೆ ಅನುಮೋದನೆ ದೊರೆತಿತ್ತು. ಈ ಪೈಕಿ 2696.58 ಲಕ್ಷ ರೂ. ಕೇಂದ್ರ ಸರಕಾರದ ಪಾಲಿನ ಅನುದಾನವಾಗಿದ್ದರೆ, 1797.72 ಲಕ್ಷ ರೂ. ಗಳನ್ನು ರಾಜ್ಯ ಸರಕಾರ ಭರಿಸಲಿದೆ.

2022-23ನೇ ಸಾಲಿಗೆ ರಾಜ್ಯದ ಎಲ್ಲಾ ಸರಕಾರಿ ಮತ್ತು ಅನುದಾನಿತ ಶಾಲೆಗಳ 1ರಿಂದ 10ನೇ ತರಗತಿ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ಜೊತೆಗೆ ಪೂರಕ ಪೌಷ್ಟಿಕ ಆಹಾರದ ರೂಪದಲ್ಲಿ ಆಯ್ದ ದಿನಗಳಂದು ಮೊಟ್ಟೆ/ಬಾಳೆಹಣ್ಣು/ಚಿಕ್ಕಿ ಪದಾರ್ಥಗಳ್ನು 100 ದಿನಗಳ ಅವಧಿಗೆ ಒದಗಿಸಲು 34711.55 ಲಕ್ಷ ರೂ.ಗಳಿಗೆ ಅನುಮೋದನೆ ಕೋರಿತ್ತು. ಆದರೆ ಆರ್ಥಿಕ ಇಲಾಖೆಯು 46 ದಿನಗಳಿಗಷ್ಟೇ ಅನುಮೋದನೆ ನೀಡಿದ್ದನ್ನು ಸ್ಮರಿಸಬಹುದು. ಈ ಕುರಿತು The-FIle ಮತ್ತು 'ವಾರ್ತಾಭಾರತಿ'ಯು ವರದಿ ಪ್ರಕಟಿಸಿತ್ತು.

ರಾಜ್ಯದ ಶೇ.32ರಷ್ಟು ಮಕ್ಕಳು ಕಡಿಮೆ ತೂಕ ಹಾಗೂ ಕುಂಠಿತ ಬೆಳವಣಿಗೆ ಹೊಂದಿದ್ದು, ಶೇ. 45.2ರಷ್ಟು ಮಕ್ಕಳು ಮತ್ತು ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂದು 2020–21ರ ‘ನೀತಿ ಆಯೋಗದ ವರದಿಯಲ್ಲಿ ವಿವರಿಸಿತ್ತು. ಹೀಗಾಗಿ  ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಮಕ್ಕಳಿಗೆ  ಮೊಟ್ಟೆ ನೀಡುವ ಕಾರ್ಯಕ್ರಮ ಜಾರಿಗೊಂಡಿತ್ತು.

Writer - ಜಿ.ಮಹಾಂತೇಶ್

contributor

Editor - ಜಿ.ಮಹಾಂತೇಶ್

contributor

Similar News