ಬೆಳ್ತಂಗಡಿ: ಮನೆಗೆ ನುಗ್ಗಿ ವೃದ್ಧೆಯನ್ನು ಕೊಲೆಗೈದು ಚಿನ್ನಾಭರಣ, ನಗದು ದರೋಡೆ

Update: 2022-07-23 13:16 GMT

ಬೆಳ್ತಂಗಡಿ: ಮನೆಯಲ್ಲಿದ್ದ ವೃದ್ಧರೋರ್ವರ ಮೇಲೆ ಹಾಡುಹಗಲೇ ಹಲ್ಲೆ ಮಾಡಿ ಅವರ ಚಿನ್ನಾಭರಣ ಸಹಿತ ಮನೆಯಲ್ಲಿದ್ದ ನಗದನ್ನು ದರೋಡೆಗೈದ ಘಟನೆ ಶನಿವಾರ ಮಧ್ಯಾಹ್ನ ಬೆಳಾಲು ಗ್ರಾಮದ ಕೆರೆಕೋಡಿ ಎಂಬಲ್ಲಿ ನಡೆದಿದ್ದು, ಹಲ್ಲೆಗೊಳಗಾದ ವೃದ್ಧೆ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಬೆಳಾಲು ಗ್ರಾಮದ ಕೆರೆಕೋಡಿ ನಿವಾಸಿ ಅಕ್ಕು (85) ಗಂಭೀರ ಹಲ್ಲೆಗೊಳಗಾಗಿ ಸ್ಥಳದಲ್ಲೇ ಮೃತಪಟ್ಟವರು. ಅಕ್ಕು ಅವರು ತಮ್ಮ ಮಗ, ಸೊಸೆ ಮತ್ತು ಮೊಮ್ಮಗಳ ಜೊತೆ ವಾಸವಿದ್ದು, ಮಗ ಮತ್ತು ಸೊಸೆ ಕೆಲಸಕ್ಕೆ ಹೋಗಿದ್ದರು. ಮೊಮ್ಮಗಳು ಮಧ್ಯಾಹ್ನ ಶಾಲೆ ಬಿಟ್ಟು ಮನೆಗೆ ಬಂದು ಅಜ್ಜಿಯನ್ನು ಕೆರೆದಾಗ, ಅಜ್ಜಿ ಮನೆಯಲ್ಲಿ ಇರಲಿಲ್ಲ. ನಂತರ ಹೊರಗಡೆ ಬಂದು ನೋಡಿದಾಗ ಅಜ್ಜಿ ಅಕ್ಕು ಅವರು ಮನೆಯ ಸಮೀಪದ ಹಟ್ಟಿಯ ಹಿಂದೆ ಬಿದ್ದಿರುವುದು ಕಂಡು ಬಂದಿದ್ದು ಪೋಷಕರಿಗೆ ವಿಷಯ ತಿಳಿಸಿದ್ದಾಳೆ. ಅವರು ಬಂದು ನೋಡಿದಾಗ ಅಕ್ಕು ಅವರು ಮೃತಪಟ್ಟಿದ್ದು, ಅವರ ಕಿವಿಯಲ್ಲಿದ್ದ ಚಿನ್ನಾಭರಣ ಕಿತ್ತುಕೊಂಡು ಮನೆಯಲ್ಲಿದ್ದ ನಗದನ್ನು ದರೋಡೆಗೈದಿರುವುದು ಬೆಳಕಿಗೆ ಬಂದಿದೆ.

ದುಷ್ಕರ್ಮಿಗಳು ಅವರ ಮೇಲೆ ಹಲ್ಲೆ ನಡೆಸಿ ಕೊಲೆಗೈದು ಅವರು ಚಿನ್ನಾಭರಣ ದರೋಡೆಗೈದಿರಬೇಕೆಂದು ದೂರಲಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News