ಪೊಲೀಸರ ಮೇಲೆ ಒತ್ತಡ ಹೇರಿ ಈಶ್ವರಪ್ಪಗೆ ಕ್ಲೀನ್‍ಚಿಟ್: ಆಪ್ ಆರೋಪ

Update: 2022-07-23 13:29 GMT

ಬೆಂಗಳೂರು, ಜು.23: ಕಳಂಕಿತ ಮಾಜಿ ಸಚಿವ ಈಶ್ವರಪ್ಪ ಅವರನ್ನು ಪುನಃ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲು ರಾಜ್ಯ ಬಿಜೆಪಿ ಸರಕಾರ ಸಂಚು ರೂಪಿಸುತ್ತಿದೆ. ಹಾಗಾಗಿ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಪೊಲೀಸರ ಮೇಲೆ ಒತ್ತಡ ಹೇರಿ ಆರೋಪಿ ಈಶ್ವರಪ್ಪ ಅವರಿಗೆ ಕ್ಲೀನ್‍ಚಿಟ್ ನೀಡಲಾಗಿದೆ ಎಂದು ಆಮ್ ಆದ್ಮಿ ಪಾರ್ಟಿ ನಗರದ ಫ್ರೀಡಂಪಾರ್ಕ್‍ನಲ್ಲಿ ಶನಿವಾರ ಪ್ರತಿಭಟನೆ ನಡೆಸಿದೆ.

ಎಎಪಿಯ ರಾಜಕೀಯ ಚಟುವಟಿಕೆಗಳ ಅಧ್ಯಕ್ಷ ಚನ್ನಪ್ಪಗೌಡ ನೆಲ್ಲೂರು ಅವರು ಮಾತನಾಡಿ, ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಬೆಳಕಿಗೆ ಬಂದ ತಕ್ಷಣ, ರಾಜ್ಯವನ್ನು ಆಳುತ್ತಿದ್ದ ಬಿಜೆಪಿ ಪಕ್ಷದ ಜನಪ್ರತಿನಿಧಿಗಳು ಶೇ.40ರಷ್ಟು ಕಮಿಷನ್ ಪಡೆಯುತ್ತಿದ್ದಾರೆ ಎಂದು ಬಹಿರಂಗವಾಯಿತು. ಇದರ ಬೆನ್ನಲ್ಲೇ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಅವರು ಸಂತೋಷ್ ಪಾಟೀಲ್‍ರ ಆತ್ಮಹತ್ಯೆಗೆ ಕಾರಣವಾಗಿದ್ದರೆಂದು ಪ್ರತಿಭಟನೆಗಳು ಆರಂಭವಾಗುತ್ತಿದ್ದಂತೆ, ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಆದರೆ ಈಗ ಪ್ರಕರಣದಲ್ಲಿ ಮಾಜಿ ಸಚಿವ ಈಶ್ವರಪ್ಪ ಅವರಿಗೆ ಕ್ಲೀನ್‍ಚಿಟ್ ನೀಡಲಾಗಿದೆ. ಈ ಮೂಲಕ ರಾಜ್ಯ ಬಿಜೆಪಿ ಸರಕಾರ ಸಾಮಾನ್ಯ ಜನರ ಸಾವಿಗಿಂತ ಪಕ್ಷದ ಪ್ರತಿನಿಧಿಗಳ ಯೋಗಕ್ಷೇಮದ ಬಗ್ಗೆ ಚಿಂತಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳಂಕಿತ ಸಚಿವ ಈಶ್ವರಪ್ಪರನ್ನು ಪುನಃ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲು ರಾಜ್ಯ ಸರಕಾರ ಸಕಲ ಪ್ರಯತ್ನಗಳನ್ನು ನಡೆಸುತ್ತಿದೆ. ಇದಕ್ಕಾಗಿಯೇ ಪೊಲೀಸರ ಮೇಲೆ ಒತ್ತಡ ಹೇರಿ ಕ್ಲೀನ್‍ಚಿಟ್ ಕೊಡಿಸಿದೆ. ಸಂತೋಷ್ ಪಾಟೀಲ್ ಆತ್ಮಹತ್ಯೆಗೂ ಮುನ್ನ ಈಶ್ವರಪ್ಪ ಅವರಿಗೆ ವಾಟ್ಸಪ್‍ನಲ್ಲಿ ಡೆತ್‍ನೋಟ್ ಕಳುಹಿಸಿರುವುದನ್ನು ಪೊಲೀಸರೇ ದೃಢಪಡಿಸಿದ್ದಾರೆ. ಆದರೂ ಈಶ್ವರಪ್ಪನವರ ವಿಚಾರಣೆಯನ್ನು ನಡೆಸದೆ ಕ್ಲೀನ್‍ಚಿಟ್ ನೀಡಿರುವುದು ಖಂಡನೀಯವಾಗಿದೆ. ಅಕ್ರಮ ಎಸಗುವವರ ಪರವಾಗಿದ್ದೇವೆ ಎಂಬ ಕೆಟ್ಟ ಸಂದೇಶವನ್ನು ರಾಜ್ಯ ಬಿಜೆಪಿ ಸರಕಾರ ಈ ಮೂಲಕ ರವಾನಿಸಿದೆ ಎಂದು ಅವರು ಕಿಡಿಕಾರಿದರು.

ಘಟನೆ ನಡೆದಾಗಲೇ ಈಶ್ವರಪ್ಪನವರ ಬೆನ್ನಿಗೆ ನಿಂತಿದ್ದ ಬಿಜೆಪಿ ಸರಕಾರವು, ತನಿಖೆಗೂ ಮುನ್ನವೇ ಈಶ್ವರಪ್ಪನವರನ್ನು ನಿರಪರಾಧಿ ಎಂದು ಘೋಷಿಸಿತ್ತು. ನಂತರ ಆಮ್ ಆದ್ಮಿ ಪಾರ್ಟಿಯು ಸಿಎಂ ಮನೆಗೆ ಮುತ್ತಿಗೆ ಹಾಕಲು ಮುಂದಾದಾಗ ಈಶ್ವರಪ್ಪನವರ ರಾಜೀನಾಮೆ ಪಡೆದಿತ್ತು. ಆದರೆ ಕೇವಲ ಕಾಟಾಚಾರಕ್ಕೆ ತನಿಖೆ ನಡೆಸಿ ಸಂತೋಷ್ ಪಾಟೀಲ್‍ರವರ ಕುಟುಂಬಕ್ಕೆ ಅನ್ಯಾಯವೆಸಗಿದೆ. ರಾಜಕೀಯ ಒತ್ತಡಕ್ಕೆ ಮಣಿದ ಉಡುಪಿ ಪೊಲೀಸರು ಈಶ್ವರಪ್ಪನವರ ವಿಚಾರಣೆ ನಡೆಸದೇ ಕೇವಲ ಮೂರು ತಿಂಗಳಲ್ಲಿ ವರದಿ ಸಿದ್ಧಪಡಿಸಿದ್ದಾರೆ. ರಾಜ್ಯ ಪೊಲೀಸ್ ಇಲಾಖೆಯು ಈ ದೋಷಪೂರಿತ ವರದಿಯನ್ನು ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದರು.

ಕೆ.ಜೆ. ಜಾರ್ಜ್ ಪ್ರಕರಣದಲ್ಲಿ ಸಿಬಿಐ ತನಿಖೆ ನಡೆದಿದ್ದರೂ ಟೀಕಿಸುತ್ತಿದ್ದ ಬಿಜೆಪಿಯು ಈಗ ಈಶ್ವರಪ್ಪನವರ ವಿರುದ್ಧ ಪೊಲೀಸ್ ತನಿಖೆಯನ್ನೂ ಸರಿಯಾಗಿ ನಡೆಸದಿರುವುದು ದುರಂತದ ಪರಮಾವಧಿ. ಆರ್‍ಡಿಪಿಆರ್ ಹಗರಣಗಳು ಹಾಗೂ ಸಂತೋಷ್ ಪ್ರಕರಣದ ಕುರಿತು ಸಮಗ್ರ ನ್ಯಾಯಾಂಗ ತನಿಖೆ ನಡೆಸಬೇಕು. ಈಶ್ವರಪ್ಪನವರು ಸಂತೋಷ್ ಪಾಟೀಲ್‍ರವರಿಗೆ ನೀಡಿದ ಕಿರುಕುಳ ಹಾಗೂ ವಂಚನೆಯು ರಾಜ್ಯದ ಜನತೆಗೆ ತಿಳಿಯಬೇಕು. ಡೆತ್‍ನೋಟ್ ಆಧಾರವಾಗಿಟ್ಟುಕೊಂಡು ಈಶ್ವರಪ್ಪ ಅವರನ್ನು ಬಂಧಿಸಬೇಕು.

-ಚನ್ನಪ್ಪಗೌಡ ನೆಲ್ಲೂರು, ಎಎಪಿಯ ರಾಜಕೀಯ ಚಟುವಟಿಕೆಗಳ ಅಧ್ಯಕ್ಷ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News