ಸಚಿವರ ಒತ್ತಡದಿಂದ ಕರ್ನಾಟಕ ಮುಕ್ತ ವಿವಿಯ ಹಣ ಕಾನೂನುಬಾಹಿರ ವರ್ಗಾವಣೆ: ರಮೇಶ್ ಬಾಬು ಆರೋಪ

Update: 2022-07-23 16:38 GMT

ಬೆಂಗಳೂರು, ಜು. 23: ‘ಕರ್ನಾಟಕ ರಾಜ್ಯ ಮುಕ್ತ ವಿವಿಯ ಸುಮಾರು 85 ಕೋಟಿ ರೂ.ಹಣವನ್ನು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್ ನಾರಾಯಣ ಪ್ರಭಾವದಿಂದ ಇತರೆ ಕಾಮಗಾರಿಗಳಿಗೆ ವರ್ಗಾವಣೆ ಮಾಡಲಾಗಿದ್ದು, ಇದು ಕಾನೂನಿಗೆ ವಿರುದ್ಧ. ಅಲ್ಲದೆ ಮುಕ್ತ ವಿವಿ ವತಿಯಿಂದ ಮಾಡಲಾದ ವಿವಿಧ ಸಹಕಾರ ಸಂಸ್ಥೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದ್ದು, ಇದೆಲ್ಲದರ ವಿರುದ್ಧ ನ್ಯಾಯಾಂಗ ತನಿಖೆ ನಡೆಸಬೇಕು’ ಎಂದು ಕಾಂಗ್ರೆಸ್ ಆಗ್ರಹಿಸಿದೆ.

ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಸಂವಹನ ವಿಭಾಗದ ಉಪಾಧ್ಯಕ್ಷರಾದ ರಮೇಶ್ ಬಾಬು ‘ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿವಿ 1992ರ ಕಾಯಿದೆ ಅಡಿಯಲ್ಲಿ ರಚನೆಯಾಗಿದ್ದು, ಕಲಂ 4ರ ಅಡಿಯಲ್ಲಿ ತನ್ನ ಧೈಯೋದ್ದೇಶಗಳ ಅನುಗುಣವಾಗಿ ಕಾರ್ಯ ನಿರ್ವಹಿಸಬೇಕು. ಈ ವಿವಿಗೆ ರಾಜ್ಯಪಾಲರು ಕುಲಾಧಿಪತಿಗಳಾಗಿದ್ದು, ಉನ್ನತ ಶಿಕ್ಷಣ ಸಚಿವರು ಸಮ ಕುಲಾಧಿಪತಿಗಳಾಗಿರುತ್ತಾರೆ. ಡಾ.ಎಸ್.ವಿದ್ಯಾಶಂಕರ್ ಕುಲಪತಿಗಳಾಗಿರುತ್ತಾರೆ' ಎಂದರು.

‘ಯಾವುದೇ ವಿವಿ ರಾಜ್ಯ ಸರಕಾರದ ರೀತಿಯಲ್ಲಿ ಅನುದಾನಗಳನ್ನು ಹಂಚಿಕೆ ಮಾಡಲು ಸಾದ್ಯವಿಲ್ಲ. ಸಚಿವರ ಪ್ರಭಾವದ ಕಾರಣಕ್ಕೆ ಈ ವಿವಿ ಕುಲಪತಿಗಳು ನಿಯಮ ಮೀರಿ ಹಣ ದುರ್ಬಳಕೆ ಮಾಡಿದ್ದು, ಇದರ ಸಂಪೂರ್ಣ ತನಿಖೆ ಆಗಬೇಕಾಗಿರುತ್ತದೆ. ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಮಾಸಿಕ ಅಂದಾಜು 6 ಕೋಟಿ ರೂ.ಗಳ ವೇತನ ಪಾವತಿ ಮಾಡಬೇಕಾಗಿದ್ದು, ವಿದ್ಯಾರ್ಥಿಗಳ ಮೂಲಕ ವಾರ್ಷಿಕ ಸುಮಾರು 15-16 ಕೋಟಿ ರೂ.ಶುಲ್ಕ ಸಂಗ್ರಹವಾಗುತ್ತದೆ. ವಿವಿ ಯಾವುದೇ ಆದಾಯದ ಮೂಲಗಳು ಇಲ್ಲದಿದ್ದರೂ, ಶಿಕ್ಷಣ ಸಚಿವರ ಕಾರಣಕ್ಕಾಗಿ ವಿವಿಯಲ್ಲಿದ್ದ ಠೇವಣಿ ರೂಪದಲ್ಲಿರುವ ಹಣವನ್ನು ದುರ್ಬಳಕೆ ಮಾಡಿ ಅನುದಾನಗಳ ಮೂಲಕ ಹಂಚಲಾಗಿದೆ' ಎಂದು ಅವರು ದೂರಿದರು.

‘ಸಚಿವ ಅಶ್ವತ್ಥ್ ನಾರಾಯಣ ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡು ಶಿಫಾರಸ್ಸು ಮಾಡುವುದರ ಮೂಲಕ ಮುಕ್ತ ವಿವಿಯ ಹಣವನ್ನು ಇತರ ಉದ್ದೇಶಗಳಿಗೆ ಬಳಸಲು ಅವಕಾಶ ನೀಡಿರುತ್ತಾರೆ. ಮುಕ್ತ ವಿಶ್ವ ವಿದ್ಯಾಲಯದ ಉಪಕುಲಪತಿಗಳು 2021ರ ಆಗಸ್ಟ್ 17ರಂದು ಸುಮಾರು 85 ಕೋಟಿ ರೂ. ವಿವಿ ಹಣವನ್ನು ಇತರೆ ಕಾಮಗಾರಿಗಳಿಗೆ ಬಳಸಲು ಸಭೆಯ ಮೂಲಕ ಅನುಮತಿ ನೀಡಿದ್ದು, ಪರಿಷ್ಕøತ ವೆಚ್ಚದಲ್ಲಿ ಇದು 94ಕೋಟಿ ರೂ.ಆಗಿರುತ್ತದೆ. ಶಿಕ್ಷಣ ಸಚಿವರ ಪ್ರಭಾವದ ಕಾರಣಕ್ಕಾಗಿ 25ಕೋಟಿ ರೂ.ಸಂಸ್ಕೃತ ವಿವಿ ಕಟ್ಟಡಕ್ಕೆ ನೀಡಿರುತ್ತಾರೆ' ಎಂದು ಅವರು ವಿವರಿಸಿದರು.

‘ಬೆಂಗಳೂರಿನ ಖಾಸಗಿ ಇಂಜಿನಿಯರಿಂಗ್ ಕಾಲೇಜ್ ನೌಕರರಾಗಿದ್ದ ಡಾ.ವಿದ್ಯಾಶಂಕರ್ ಅವರನ್ನು ಶಿಕ್ಷಣ ಸಚಿವರ ಪ್ರಭಾವದ ಕಾರಣಕ್ಕೆ ಮುಕ್ತ ವಿವಿ ಕುಲಪತಿಗಳನ್ನಾಗಿ ನೇಮಿಸಿ, ಇವರ ಮೇಲೆ ಅನೇಕ ಅಕ್ರಮದ ದೂರುಗಳು ಬಂದರೂ 2022ರ ಎಪ್ರಿಲ್ 6ರಲ್ಲಿ ಇವರನ್ನು ವರ್ಷದ ಅವಧಿಗೆ ಮುಂದುವರೆಸಲಾಗಿದೆ. ಇವರ ಮುಂದುವರಿಕೆಯ ಅಕ್ರಮದಲ್ಲಿ ಸಚಿವರು ಮತ್ತು ರಾಜ್ಯಪಾಲರ ಕಚೇರಿಯೂ ಭಾಗಿಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಆರೋಪಿತ ಕುಲಪತಿ ವಿರುದ್ದ ನ್ಯಾಯಾಂಗ ತನಿಖೆ ನಡೆಸಿ, ವಿವಿ ಮತ್ತು ಇದರ ಹಣವನ್ನು ರಕ್ಷಿಸಬೇಕು. ಕಳಂಕಿತರನ್ನು ತೊಲಗಿಸಿ, ವಿವಿಯನ್ನು ಸಂರಕ್ಷಿಸಬೇಕು’ ಎಂದು ಅವರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News