ಗುಜರಾತ್: ಕಳ್ಳಭಟ್ಟಿ ಪ್ರಕರಣ; ಅಹ್ಮದಾಬಾದ್, ಬೋಟಾದ್ ಎಸ್ಪಿ ವರ್ಗಾವಣೆ

Update: 2022-07-28 18:34 GMT
ಸಾಂದರ್ಭಿಕ ಚಿತ್ರ 

ಅಹ್ಮದಾಬಾದ್, ಜು. 28:  ಕಳ್ಳಭಟ್ಟಿ ಸೇವಿಸಿ 42 ಮಂದಿ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿ ಗುಜರಾತ್ ಸರಕಾರ ಗುರುವಾರ ಬೋಟಾದ್ ಹಾಗೂ ಅಹ್ಮದಾಬಾದ್ ಜಿಲ್ಲೆಗಳ ಪೊಲೀಸ್ ಅಧೀಕ್ಷಕರನ್ನು ವರ್ಗಾವಣೆ ಮಾಡಿದೆ. ಅಲ್ಲದೆ, ಇತರ 6 ಅಧಿಕಾರಿಗಳನ್ನು ಅಮಾನತುಗೊಳಿಸಿದೆ. ಗುಜರಾತ್‌ನಲ್ಲಿ ಮದ್ಯ ಉತ್ಪಾದನೆ, ಮಾರಾಟ ಹಾಗೂ ಸೇವನೆ ನಿಷೇಧಿಸಲಾಗಿದೆ. 

ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಇಬ್ಬರು ಪೊಲೀಸ್ ಉಪ ಅಧೀಕ್ಷಕರು, ಒಬ್ಬರು ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್, ಒಬ್ಬರು ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಇಬ್ಬರು ಸಬ್ ಇನ್ಸ್‌ಪೆಕ್ಟರ್‌ಗಳನ್ನು ಅಮಾನತುಗೊಳಿಸಲಾಗಿದೆ ಎಂದು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜ್ ಕುಮಾರ್ ತಿಳಿಸಿದ್ದಾರೆ. 
ಬೋಟಾದ್‌ನ ಬರ್ವಾಲ ತಾಲೂಕಿನ ರೋಜಿದ್ ಗ್ರಾಮದ ಕೆಲವು ನಿವಾಸಿಗಳು ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ದಾಖಲಾದ ಬಳಿಕ ಸೋಮವಾರ ಬೆಳಗ್ಗೆ ಈ ಕಳ್ಳಭಟ್ಟಿ ವಿಚಾರ ಬೆಳಕಿಗೆ ಬಂದಿತ್ತು. 
ಕೈಗಾರಿಕಾ ರಾಸಾಯನಿಕ ಮೆಥೆನಾಲ್ ಅಥವಾ ಮೆಥಿಲ್ ಮದ್ಯವನ್ನು ಈ ಸಂತ್ರಸ್ತರು ಸೇವಿಸಿದ್ದಾರೆ ಎಂದು ಗುಜರಾತ್‌ನ ಡಿಜಿಪಿ ಆಶಿಷ್ ಭಾಟಿಯಾ ಅವರು ಹೇಳಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News