ಹಿರಿಯ ನಾಗರಿಕನನ್ನು ತಲೆಕೆಳಗಾಗಿ ನೇತಾಡಿಸಿದ ಪೊಲೀಸ್ ಸಿಬ್ಬಂದಿ ಅಮಾನತು: ವೀಡಿಯೊ ವೈರಲ್

Update: 2022-07-29 12:52 GMT

ಭೋಫಾಲ್: ಸಮವಸ್ತ್ರದಲ್ಲಿರುವ ಪೊಲೀಸ್ ಸಿಬ್ಬಂದಿಯೊಬ್ಬರು ಹಿರಿಯ ನಾಗರಿಕರೊಬ್ಬರಿಗೆ ಥಳಿಸುತ್ತಿರುವುದು ಹಾಗೂ ಅವರನ್ನು ತಲೆಕೆಳಗಾಗಿ ಪ್ಲಾಟ್‍ಫಾರ್ಮ್‍ನಲ್ಲಿ ನೇತಾಡಿಸುತ್ತಿರುವ ಆಘಾತಕಾರಿ ವೀಡಿಯೋವೊಂದು ಹೊರಬಿದ್ದಿದೆ. ಈ ಘಟನೆ ಮಧ್ಯಪ್ರದೇಶದ ಜಬಲ್ಪುರ ರೈಲು ನಿಲ್ದಾಣದಲ್ಲಿ ಗುರುವಾರ ನಡೆದಿದೆಯೆನ್ನಲಾಗಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ವೀಡಿಯೋದಲ್ಲಿದ್ದ ಪೊಲೀಸ್ ಸಿಬ್ಬಂದಿಯನ್ನು ಅನಂತ್ ಶರ್ಮ ಎಂದು ಗುರುತಿಸಲಾಗಿದ್ದು ಆತನನ್ನು ಅಮಾನತುಗೊಳಿಸಲಾಗಿದೆ.

ಸಂತ್ರಸ್ತ ಹಿರಿಯ ನಾಗರಿಕನನ್ನು ಗೋಪಾಲ್ ಪ್ರಸಾದ್ ಎಂದು ಗುರುತಿಸಲಾಗಿದೆ. ``ಒಬ್ಬ ವ್ಯಕ್ತಿ ನನ್ನನ್ನು ನಿಂದಿಸುತ್ತಿದ್ದಾನೆಂದು ಹೇಳಿಕೊಂಡು ಪೊಲೀಸ್ ಸಿಬ್ಬಂದಿ ಬಳಿ ದೂರಿದ್ದೇ ತಡ ಆತ ನನ್ನ ಮೇಲೆಯೇ ದಾಳಿ ನಡೆಸಿದ್ದಾನೆ,'' ಎಂದು ಪ್ರಸಾದ್ ಹೇಳಿದ್ದಾರೆ.

ವೀಡಿಯೋದಲ್ಲಿ ಪೊಲೀಸ್ ಸಿಬ್ಬಂದಿ ಮೊದಲು ಪ್ರಸಾದ್ ಅವರ ಮುಖಕ್ಕೆ  ತುಳಿಯುತ್ತಿರುವುದು ಹಾಗೂ ನಂತರ ಅವರನ್ನು ಕಾಲುಗಳಿಂದ ಎತ್ತಿ ಪ್ಲಾಟ್‍ಫಾರ್ಮ್‍ನಲ್ಲಿ ತಲೆಕೆಳಗಾಗಿ ನೇತಾಡಿಸಿದ್ದೇ ಅಲ್ಲದೆ ಮತ್ತೆ ತುಳಿದಿದ್ದಾನೆ.

ಅಲ್ಲಿದ್ದ ಜನರು ಈ ದೃಶ್ಯವನ್ನು ನೋಡುತ್ತಿದ್ದರೂ ಯಾರೂ ಮಧ್ಯಪ್ರವೇಶಿಸಿ ಹಿರಿಯ ನಾಗರಿಕನನ್ನು ರಕ್ಷಿಸುವ ಗೋಜಿಗೆ ಹೋಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News