ಜಪಾನಿ ಯೆನ್ ಎದುರು ಮುಗ್ಗರಿಸಿದ ಡಾಲರ್: ಆರ್ಥಿಕ ಹಿಂಜರಿತದ ಹಾದಿಯಲ್ಲಿ ಅಮೆರಿಕ?‌

Update: 2022-07-29 16:19 GMT

ನ್ಯೂಯಾರ್ಕ್,ಜು.29: ಜಪಾನಿ ಕರೆನ್ಸಿ ಯೆನ್ ಎದುರು ಅಮೆರಿಕದ ಡಾಲರ್ ವೌಲ್ಯವು ಗುರುವಾರದಂದು ಆರು ವಾರಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಅಮೆರಿಕದ ಆರ್ಥಿಕತೆಯು ಎರಡನೆ ತ್ರೈಮಾಸಿಕದಲ್ಲಿ ಮತ್ತೆ ಕುಗಿದ್ದು, ಹೀಗಾಗಿ ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ಈ ಹಿಂದೆ ನಿರೀಕ್ಷಿಸಿದಂತೆ ಬಡ್ಡಿದರಗಳನ್ನು ಆಕ್ರಮಣಕಾರಿಯಾದ ರೀತಿಯಲ್ಲಿ ಹೆಚ್ಚಿಸುವುದಿಲ್ಲವೆಂಬ ಊಹಾಪೋಹಗಳಿಗೆ ಹೆಚ್ಚಿನ ಬಲ ಬಂದಿದೆ.

2020ರ ಮಾರ್ಚ್ ತಿಂಗಳ ಮಧ್ಯದಿಂದೀಚೆಗೆ ಯೆನ್ ವಿರುದ್ಧ ಡಾಲರ್ನ ವೌಲ್ಯದಲ್ಲಿ ಉಂಟಾಗಿರುವ ಅತ್ಯಧಿಕ ಪ್ರಮಾಣದ ಕುಸಿತ ಇದಾಗಿದೆ.

ಅಮೆರಿಕದ ಒಟ್ಟು ಆಂತರಿಕ ಉತ್ಪನ್ನವು ಎರಡನೆ ತ್ರೈಮಾಸಿಕದಲ್ಲಿ 0.9 ಶೇಕಡ ಕುಸಿತವನ್ನು ಕಂಡಿದೆ. ಗ್ರಾಹಕ ಖರೀದಿ ದರವೂ ಕಳೆದ ಎರಡು ವರ್ಷಗಳಲ್ಲಿ ಅತ್ಯಂತ ನಿಧಾನಗತಿಯ ಬೆಳವಣಿಗೆಯನ್ನು ಕಂಡಿದೆ. ಇದರ ಜೊತೆಗೆ ಔದ್ಯಮಿಕ ವೆಚ್ಚವೂ ಕುಗ್ಗಿದ್ದು, ದೇಶದ ಆರ್ಥಿಕತೆ ಹಿಂಜರಿತದೆಡೆಗೆ ಸಾಗುವ ಅಪಾಯವಿದೆಯೆಂದು ಅರ್ಥಶಾಸ್ತ್ರಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಅಮೆರಿಕದ ಖಜಾನೆ ಕಾರ್ಯದರ್ಶಿ ಜಾನೆಟ್ ಯೆಲೆನ್ ಅವರು ಗುರುವಾರ ಹೇಳಿಕೆಯೊಂದನ್ನು ನೀಡಿ, ದೇಶವು ಆರ್ಥಿಕ ಹಿಂಜರಿತದ ಸಾಧ್ಯತೆಯನ್ನು ಅಲ್ಲಗಳೆಯಲಾಗದೆಂದು ಹೇಳಿದ್ದಾರೆ.

  ಹಣದುಬ್ಬರವನ್ನು ತಡೆಗಟ್ಟಲು ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ಬಡ್ಡಿದರಗಳಲ್ಲಿ 75 ಮೂಲಾಂಶಗಳಷ್ಟು ಹೆಚ್ಚಿಸಿದ ಮರುದಿನವೇ ಈ ದತ್ತಾಂಶಗಳನ್ನು ಬಿಡುಗಡೆಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News