ಪ್ರತಿಭಾವಂತರನ್ನು ಪ್ರೋತ್ಸಾಹಿಸುವುದು ಸಮಾಜದ ಕರ್ತವ್ಯ: ನ್ಯಾ. ಸಂತೋಷ್ ಹೆಗ್ಡೆ

Update: 2022-07-31 13:56 GMT

ಬೆಂಗಳೂರು, ಜು.31: ‘ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ, ಪ್ರೋತ್ಸಾಹಿಸುವುದು ಸಮಾಜದ ಕರ್ತವ್ಯವಾಗಿದೆ. ಇಂತಹ ಕಾರ್ಯಕ್ರಮಗಳಿಂದ ಇಲ್ಲಿರುವ ವಿದ್ಯಾರ್ಥಿಗಳಿಗಷ್ಟೇ ಪ್ರೋತ್ಸಾಹ ಸಿಗುವುದಿಲ್ಲ, ಜೊತೆಗೆ ಬೇರೆ ಬೇರೆ ಶಾಲೆಗಳಲ್ಲಿರುವ ವಿದ್ಯಾರ್ಥಿಗಳಲ್ಲೂ ಸಾಧನೆಯ ಛಲ ಮೂಡುತ್ತದೆ' ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ಮಹದೇವಪುರ ಕ್ಷೇತ್ರದ ಕಾಡುಗುಡಿಯಲ್ಲಿರುವ ಈದ್ಗಾ ಮೈದಾನದಲ್ಲಿ ಡಿವೈನ್ ಸರ್ವೀಸ್ ಫಾರ್‍ಎವರ್ ಫೌಂಡೇಶನ್(ಡಿಎಸ್‍ಎಫ್) ವತಿಯಿಂದ 2021-22ನೆ ಸಾಲಿನಲ್ಲಿ ಎಸೆಸೆಲ್ಸಿ, ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭವನ್ನುದ್ದೇಶಿಸಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.

‘ಡಿಎಸ್‍ಎಫ್ ಸಂಘಟನೆಯವರು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉತ್ತಮ ಕೆಲಸ ಮಾಡುತ್ತಿದ್ದಾರೆ. ಅದಕ್ಕಾಗಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ವಿದ್ಯಾವಂತ ಯುವ ಸಮುದಾಯವು ನಮ್ಮ ದೇಶದ ಭವಿಷ್ಯ ಹಾಗೂ ಶಕ್ತಿಯಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವ ಕೆಲಸವನ್ನು ಪೋಷಕರು ಹಾಗೂ ಶಿಕ್ಷಕರು ಮಾಡಬೇಕು' ಎಂದು ಅವರು ಕರೆ ನೀಡಿದರು.

ಗೌರವ ಅತಿಥಿಯಾಗಿ ಮಾತನಾಡಿದ ಕೆಎಎಸ್ ಅಧಿಕಾರಿ ಮುಹಮ್ಮದ್ ರಫಿ ಪಾಷ, ‘ಇಡೀ ವಿಶ್ವದಲ್ಲಿ ಅತೀ ಹೆಚ್ಚು ಆರೋಗ್ಯವಂತರು ಹಾಗೂ ಸಂತೃಪ್ತರು ಇರುವ ದೇಶದ ಪಟ್ಟಿಯಲ್ಲಿ ನಮ್ಮ ನೆರೆಯ ಭೂತಾನ್ ದೇಶ ಮೊದಲ ಸ್ಥಾನದಲ್ಲಿದೆ. ನಮ್ಮ ಭಾರತವು ಆ ನಿಟ್ಟಿನಲ್ಲಿ ಮುಂದುವರೆಯಬೇಕು. ದೇಶ ಹಾಗೂ ರಾಜ್ಯದ ಪ್ರಗತಿ ನಮ್ಮೆಲ್ಲರ ಜವಾಬ್ದಾರಿಯಾಗಿದೆ' ಎಂದರು.

‘ಇಲ್ಲಿರುವ ಹಲವಾರು ಮಂದಿ ವಿದ್ಯಾರ್ಥಿಗಳು ಭವಿಷ್ಯದಲ್ಲಿ ವಿಜ್ಞಾನಿಗಳು, ವೈದ್ಯರು, ಅಧಿಕಾರಿಗಳು ಆಗಬೇಕು ಎಂಬ  ಕನಸು ಕಂಡಿರುತ್ತಾರೆ. ನಿಮ್ಮ ಗುರಿಯನ್ನು ಸಾಧಿಸಲು ನಿರಂತರವಾಗಿ ಪರಿಶ್ರಮ ಪಡಬೇಕು. ಪ್ರಾಥಮಿಕ ಹಂತದಲ್ಲಿ ಸಿಗುವಂತಹ ಶಿಕ್ಷಣವು ಭವಿಷ್ಯದ ಜೀವನಕ್ಕೆ ಅಡಿಪಾಯವಾಗಿದೆ. ಆದುದರಿಂದ, ಆರಂಭದಿಂದಲೆ ಸ್ಪಷ್ಟ ಗುರಿ ಹಾಗೂ ಮಾರ್ಗವನ್ನು ಆಯ್ದುಕೊಂಡು ಮುಂದುವರೆಯಬೇಕು' ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಡಿಎಸ್‍ಎಫ್ ಮಾರ್ಗದರ್ಶಕ ಹಾಫಿಝ್ ಸೈಯ್ಯದ್ ಆಸಿಮ್ ಅಬ್ದುಲ್ಲಾ, ಡಿಎಸ್‍ಎಫ್ ಹೊಸಕೋಟೆ ಅಧ್ಯಕ್ಷ ಆಬಿದ್ ಹುಸೇನ್, ವೈಟ್‍ಫೀಲ್ಡ್ ಕಾರ್ಯದರ್ಶಿ ಸೈಯ್ಯದ್ ವಸೀಮ್, ಮಾಲೂರು ಉಪಾಧ್ಯಕ್ಷ ಅಲ್ಲಾಹ್ ಬಕ್ಷ್, ಕೆ.ಆರ್.ಪುರ ಖಚಾಂಜಿ ತಬ್ರೇಝ್ ಅಹ್ಮದ್, ಕೋಲಾರ ಜಂಟಿ ಕಾರ್ಯದರ್ಶಿ ಅಬ್ದುಲ್ ರಶೀದ್, ಮುಖಂಡರಾದ ಗಫಾರ್ ಬೇಗ್, ಚಾಂದ್ ಪಾಷ, ಫಿರ್ದೋಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News