ಕೇಂದ್ರ ಸರಕಾರವನ್ನು ಸೇರುವುದಿಲ್ಲ, ನಿತೀಶ್ ರನ್ನು ದುರ್ಬಲಗೊಳಿಸಲು ಸಂಚು ನಡೆದಿದೆ: ಜೆಡಿಯು

Update: 2022-08-08 14:12 GMT
Photo:PTI

ಪಾಟ್ನಾ,ಆ.8: ದಿಲ್ಲಿಯಲ್ಲಿ ರವಿವಾರ ಪ್ರಧಾನಿ ನರೇದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ನೀತಿ ಆಯೋಗದ ಸಭೆಗೆ ಬಿಹಾರದ ಮುಖ್ಯಮಂತ್ರಿ ನಿತೀಶ ಕುಮಾರ ಅವರು ಸತತ ಎರಡನೇ ಬಾರಿಗೆ ಗೈರುಹಾಜರಾಗಿದ್ದು,ಬಿಜೆಪಿ-ಜೆಡಿಯು ಮೈತ್ರಿಯಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬ ಊಹಾಪೋಹಗಳಿಗೆ ಕಾರಣವಾಗಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಜೆಡಿಯು ತನ್ನ ಮಾಜಿ ಸದಸ್ಯ ಆರ್.ಸಿ.ಪಿ.ಸಿಂಗ್ ರಾಜೀನಾಮೆಯಿಂದ ಕೇಂದ್ರದಲ್ಲಿ ಸಚಿವ ಸ್ಥಾನ ಖಾಲಿಯಿದ್ದರೂ ತಾನು ಸರಕಾರವನ್ನು ಸೇರುವುದಿಲ್ಲ ಎಂದು ಹೇಳಿದೆ.

ರವಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಯು ರಾಷ್ಟ್ರಾಧ್ಯಕ್ಷ ರಾಜೀವ ರಂಜನ್ ಸಿಂಗ್ ಅಲಿಯಾಸ್ ಲಾಲನ್ ಸಿಂಗ್ ಅವರು,ಈ ವಿಷಯದಲ್ಲಿ ಪಕ್ಷವು ತನ್ನ 2019ರ ನಿಲುವಿಗೆ ಬದ್ಧವಾಗಿರುತ್ತದೆ ಎಂದು ಹೇಳಿದರು. ಆದಾಗ್ಯೂ ಜೆಡಿಯು ಎನ್ಡಿಎದ ಭಾಗವಾಗಿ ಮುಂದುವರಿಯುತ್ತದೆ ಎಂದು ಅವರು ತಿಳಿಸಿದರು. ‘ಪಕ್ಷವು ಕೇಂದ್ರ ಸಂಪುಟದಲ್ಲಿ ಸೇರುವುದಿಲ್ಲ ಎಂದು 2019ರಲ್ಲಿ ನಿತೀಶ್ ಕುಮಾರ್ ಪ್ರಕಟಿಸಿದ್ದರು. ನಮ್ಮ ಮೊದಲಿನ ನಿಲುವಿಗೆ ನಾವು ಬದ್ಧರಾಗಿರುತ್ತೇವೆ ’ ಎಂದರು.

2021ರಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಆರ್.ಸಿ.ಪಿ.ಸಿಂಗ್ ಅವರು ಏಕಪಕ್ಷೀಯವಾಗಿ ಈ ನಿಲುವಿನಿಂದ ಹಿಂದೆ ಸರಿದಿದ್ದರು ಎಂದು ದೂರಿದ ಅವರು,ಸ್ಪಷ್ಟ ಕಾರಣಗಳಿಂದಾಗಿ ನಿತೀಶಗೆ ಆಗ ಆರ್ಸಿಪಿ ನಿರ್ಧಾರಕ್ಕೆ ಪ್ರತಿಕ್ರಿಯಿಸಲಾಗಿರಲಿಲ್ಲ ಎಂದು ತಿಳಿಸಿದರು.

ರಾಜ್ಯ ಬಿಜೆಪಿ ವಿರುದ್ಧ ದಾಳಿ ನಡೆಸಿದ ಸಿಂಗ್,ನಿತೀಶರನ್ನು ದುರ್ಬಲಗೊಳಿಸಲು ಸಂಚು ನಡೆಯುತ್ತಿದೆ. ಅದಕ್ಕಾಗಿ ಎರಡನೇ ಚಿರಾಗ್ ಪಾಸ್ವಾನ್ ಮಾದರಿಯನ್ನು ಯೋಜಿಸಲಾಗುತ್ತಿದೆ ಎಂದು ಆರೋಪಿಸಿದರು.

ವಿಧಾನಸಭಾ ಚುನಾವಣೆಯಲ್ಲಿ ಪಾಸ್ವಾನ್ ಜೆಡಿಯು ವಿರುದ್ಧ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಪರಿಣಾಮವಾಗಿ ಸುಮಾರು 20 ವಿಧಾನಸಭಾ ಕ್ಷೇತ್ರಗಳನ್ನು ಕಳೆದುಕೊಂಡ ಜೆಡಿಯುದ ಗಳಿಕೆ 43 ಸ್ಥಾನಗಳಿಗೆ ಕುಸಿದಿತ್ತು. ಚುನಾವಣಾ ಫಲಿತಾಂಶದಲ್ಲಿ ಅದು ಆರ್ಜೆಡಿ ಮತ್ತು ಬಿಜೆಪಿ ನಂತರ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿತ್ತು.

ಸೂಕ್ತ ಸಮಯದಲ್ಲಿ ಸಂಚುಕೋರರನ್ನು ಬಯಲಿಗೆಳೆಯುವುದಾಗಿ ಹೇಳಿದ ಸಿಂಗ್,ಜೆಡಿಯು ‘ಮುಳುಗುತ್ತಿರುವ ಹಡಗು’ ಎಂಬ ಆರ್ಸಿಪಿ ಟೀಕೆ ಕುರಿತಂತೆ ಅದು ’ತೇಲುತ್ತಿರುವ ಹಡಗು’ಎಂದು ತಿರುಗೇಟು ನೀಡಿದರು.

ನಿತೀಶ ನೀತಿ ಆಯೋಗದ ಸಭೆಯನ್ನು ತಪ್ಪಿಸಿಕೊಂಡಿದ್ದರೂ ಪಾಟ್ನಾದಲ್ಲಿ ಬಿಹಾರ ಕೈಗಾರಿಕಾ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮತ್ತು ಇನ್ನೊಂದು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ತನ್ನ ಇತರ ಅಧಿಕೃತ ಕಾರ್ಯಕ್ರಮಗಳಿಂದಾಗಿ ನಿತೀಶ ನೀತಿ ಆಯೋಗದ ಸಭೆಗೆ ಗೈರಾಗಿರಬಹುದು ಎಂದು ಬಿಹಾರ ಬಿಜೆಪಿ ವಕ್ತಾರ ಪ್ರೇಮರಂಜನ್ ಪಟೇಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News