ದೇವಸ್ಥಾನದಲ್ಲಿ ಕಾಲ್ತುಳಿತದಿಂದ ಮೂವರು ಮಹಿಳೆಯರ ಸಾವು: ಠಾಣಾಧಿಕಾರಿ ಅಮಾನತು

Update: 2022-08-08 14:31 GMT
ಸಾಂದರ್ಭಿಕ ಚಿತ್ರ

ಸಿಕಾರ್,ಆ.8: ಇಲ್ಲಿಯ ಪ್ರಸಿದ್ಧ ಖಾಟೂ ಶ್ಯಾಮಜಿ ದೇವಸ್ಥಾನದಲ್ಲಿ ಸೋಮವಾರ ನಸುಕಿನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೂವರು ಮಹಿಳೆಯರು ಮೃತಪಟ್ಟಿದ್ದು,ಸ್ಥಳೀಯ ಠಾಣಾಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.

ದೇವಸ್ಥಾನದ ಹೊರಗೆ ಭಾರೀ ಜನದಟ್ಟಣೆಯಿದ್ದಾಗ ಖಾಟೂ ಶ್ಯಾಮಜಿ ಪೊಲೀಸ್ ಠಾಣಾಧಿಕಾರಿ ರಿಯಾ ಚೌಧರಿ ಅವರು ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಿಲ್ಲ,ಹೀಗಾಗಿ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಸಿಕಾರ್ ಎಸ್ಪಿ ಕೆ.ರಾಷ್ಟ್ರದೀಪ ಸುದ್ದಿಗಾರರಿಗೆ ತಿಳಿಸಿದರು.

ಶ್ರಾವಣ ಏಕಾದಶಿಯ ನಿಮಿತ್ತ ದೇವಸ್ಥಾನದ ಹೊರಗೆ ಭಾರೀ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು. ನಸುಕಿನ 4:30ಕ್ಕೆ ದೇವಸ್ಥಾನದ ಪ್ರವೇಶದ್ವಾರಗಳನ್ನು ತೆರೆಯುತ್ತಲೇ ಏಕಾಏಕಿ ಜನರು ಒಳನುಗ್ಗಿದ್ದರಿಂದ ನೂಕುನುಗ್ಗಲು ಸಂಭವಿಸಿದ್ದು,ಕಾಲ್ತುಳಿತಕ್ಕೆ ಸಿಲುಕಿ ಮೂವರು ಮಹಿಳೆಯರು ಮೃತಪಟ್ಟಿದ್ದಾರೆ. ಇತರ ನಾಲ್ವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತ ಮಹಿಳೆಯರನ್ನು ಹರ್ಯಾಣದ ಶಾಂತಿ,ಉತ್ತರ ಪ್ರದೇಶದ ಮಾಯಾದೇವಿ ಮತ್ತು ಜೈಪುರದ ಕೃಪಾದೇವಿ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News