ಬಿಜೆಪಿಗೆ ಹರ್ ಘರ್ ತಿರಂಗಕ್ಕೆ ಕರೆಕೊಡುವ ನೈತಿಕತೆ ಇಲ್ಲ: ವಿನಯ ಕುಮಾರ್ ಸೊರಕೆ

Update: 2022-08-08 15:23 GMT

ಕುಂದಾಪುರ, ಆ.8: 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಉಡುಪಿ ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ಕುಂದಾಪುರ ಮತ್ತು ಕೋಟ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕೋಟದಿಂದ ತೆಕ್ಕಟ್ಟೆಯವರೆಗೆ 10ಕಿ.ಮೀ. ಪಾದಯಾತ್ರೆಯನ್ನು ಸೋಮವಾರ ಹಮ್ಮಿಕೊಳ್ಳಲಾಗಿತ್ತು.

ಸಾಲಿಗ್ರಾಮದಲ್ಲಿನ ಕೋಟ ಬ್ಲಾಕ್ ಕಾಂಗ್ರೆಸ್ ಇಂದಿರಾ ಕಚೇರಿಯಿಂದ ಹೊರಟ ಪಾದಯಾತ್ರೆಯು ಸಾಲಿಗ್ರಾಮದ ಪೇಟೆ, ಕೋಟತಟ್ಟು, ಕೋಟ ಮಾರ್ಗವಾಗಿ ಸಾಗಿ ತೆಕ್ಕಟ್ಟೆಯಲ್ಲಿ ಸಮಾಪನಗೊಂಡಿತು.

ತೆಕ್ಕಟ್ಟೆ ದುರ್ಗಾಪರಮೆಶ್ವರಿ ಸಭಾಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ದೇಶದಲ್ಲಿನ ಸ್ವಾತಂತ್ರ್ಯಕ್ಕೆ ಬರುತ್ತಿರುವ ಸಂದಿಗ್ದತೆ, ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ಬರುವುದನ್ನು ತಪ್ಪಿಸುವ ದೀಕ್ಷೆ ತೊಡಬೇಕಾಗಿದೆ. ಧರ್ಮ, ಜಾತಿ, ಭಾಷೆ ನಡುವಿನ ಗೋಡೆ ಒಡೆದು ಸಾಮಾಜಿಕ ನ್ಯಾಯದ ಕಡೆಗೆ ಮುಖಮಾಡಬೇಕು. ನಮ್ಮ ಭೂಮಿ ಸರ್ವ ಜನಾಂಗದ ಶಾಂತಿ ತೋಟವಾಗುವ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗಾಬೇಕು ಎಂದರು.

ಮಹಾತ್ಮ ಗಾಂಧಿಯವರನ್ನು ಗುಂಡಿಟ್ಟು ಕೊಂದ ಗೋಡ್ಸೆಯವರ ವ್ಯಕ್ತಿತ್ವ ಮೇಲೆ  ನಿಂತಿರುವ ಪಕ್ಷಕ್ಕೆ ಹರ್ ಘರ್ ತಿರಂಗ ಎಂದು ಕರೆಕೊಡಲು ಯಾವುದೇ ನೈತಿಕತೆ ಇಲ್ಲ. ಜನಸಾಮಾನ್ಯರ ಸ್ವಾತಂತ್ರ್ಯವನ್ನೇ ಕಸಿದು ಆಡಳಿತ ನಡೆಸುವ ಪಕ್ಷ ಸ್ವಾತಂತ್ರದ ಬಗ್ಗೆ ಉಲ್ಲೇಖಿಸುವುದು ಅದರ ಕುರಿತು ಕಾರ್ಯಕ್ರಮ ಆಯೋಜಿಸುವುದು ಎಷ್ಟು ಸೂಕ್ತ. ಕಾಂಗ್ರೆಸ್ ಸ್ವಾತಂತ್ರ್ಯಕ್ಕೆ ಬಹುದೊಡ್ಡ ಕೊಡುಗೆ ನೀಡಿದೆ. ಅದರ ಜೊತೆಗೆ ಕಳೆದ 60ವರ್ಷಗಳಿಂದ ಸಂವಿಧಾನ ಬದ್ಧವಾದ ಆಡಳಿತ ನಡೆಸಿಕೊಂಡು ಬಂದಿದೆ ಎಂದು ಅವರು ಹೇಳಿದರು.

ಮಾಜಿ ಶಾಸಕ ಗೋಪಾಲ ಪೂಜಾರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕುಮಾರ್ ಕೊಡವೂರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ.ಗಫೂರ್, ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್, ಮಾಜಿ ಬ್ಲಾಕ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಮುಖಂಡರಾದ ದೇವಕಿ ಸಣ್ಣಯ್ಯ, ಮಮತಾ ದೇವಾಡಿಗ, ಹೆರಿಯಣ್ಣ ಚಾತ್ರಬೆಟ್ಟು, ರೋನಿ ಉಡುಪಿ, ರೋಶನಿ ಒಲೆವೇರ, ಇಚ್ಛಿತಾರ್ಥ ಶೆಟ್ಟಿ, ಉಸ್ತಾದ್ ಅಹಮದ್, ಸತೀಶ್ ಶೆಟ್ಟಿ, ದೇವಾನಂದ್ ಶೆಟ್ಟಿ, ಅಶೋಕ್ ಪೂಜಾರಿ ಬೀಜಾಡಿ, ವಿಕಾಸ್ ಹೆಗ್ಡೆ, ಅಜಿತ್ ಶೆಟ್ಟಿ, ರಾಜು ಪೂಜಾರಿ ಪಾರಂಪಳ್ಳಿ, ಶ್ರೀನಿವಾಸ್ ಅಮೀನ್, ಬಾಲಕೃಷ್ಣ ಪೂಜಾರಿ, ಮಲ್ಲಿಕಾ ಪೂಜಾರಿ, ದಿನೇಶ್ ಬಂಗೇರ, ಗಣೇಶ್ ನೆಲ್ಲಿಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.

ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಕಾನ್ಮಕ್ಕಿ ಸ್ವಾಗತಿಸಿದರು. ವಿನೋದ್ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು.

"ಬಿಜೆಪಿ ಕರಾವಳಿಯಲ್ಲಿ ಶಾಂತಿ ಕದಡುವ ಕೆಲಸ ಮಾಡಿ ಒಂದು ಸಮು ದಾಯವನ್ನು ಓಲೈಸುವ ಕೆಲಸ ಮಾಡುತ್ತಿದೆ. ರಾಜ್ಯದ ಮುಖ್ಯಮಂತ್ರಿ ಪ್ರವೀಣ್ ಮನೆಗೆ ಹೋಗಿ ಪರಿಹಾರ ಚೆಕ್ ನೀಡುತ್ತಾರೆ. ಆದರೆ ಮಸೂದ್, ಫಾಝಿಲ್ ಮನೆಗೆ ಹೋಗುವುದಿಲ್ಲ. ಸಂವಿಧಾನ ಬದ್ಧವಾದ ನ್ಯಾಯ ಎಲ್ಲರಿಗೂ ಸಿಗಬೇಕು".
-ವಿನಯ ಕುಮಾರ್ ಸೊರಕೆ, ಮಾಜಿ ಸಚಿವರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News