ಆ.12ಕ್ಕೆ ಸಂವಿಧಾನ ರಕ್ಷಣೆಗಾಗಿ ದಸಂಸದಿಂದ ಐಕ್ಯತಾ ಸಮಾವೇಶ

Update: 2022-08-08 17:28 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಆ.8: ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿರುವ ಎಲ್ಲಾ ಶಕ್ತಿಗಳ ವಿರುದ್ಧ ಜನಜಾಗೃತಿಯನ್ನು ಮೂಡಿಸಲು ಹಾಗೂ ಅಂಬೇಡ್ಕರ್ ಆಶಯಗಳನ್ನು ಪ್ರತಿಪಾದಿಸಲು ದಲಿತ ಸಂಘರ್ಷ ಸಮಿತಿಯ ಸಂಯೋಜಕ ಸಮಿತಿಯು ‘ಸಂವಿಧಾನ ರಕ್ಷಣೆಗಾಗಿ ರಾಜ್ಯಮಟ್ಟದ ಶೋಷಿತರ ಐಕ್ಯತಾ ಸಮಾವೇಶ’ವನ್ನು ಆ.12ರಂದು ವಸಂತನಗರದಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಸಂಸ್ಥಾಪನಾ ಸಂಯೋಜಕ ವಿ. ನಾಗರಾಜ ತಿಳಿಸಿದ್ದಾರೆ. 

ಸೋಮವಾರ ಪ್ರೆಸ್‍ಕ್ಲಬ್‍ನಲ್ಲಿ ಮಾತನಾಡಿದ ಅವರು, ಇಂದು ದೇಶದಲ್ಲಿ ದಲಿತರ ಮೇಲೆ ನಿರಂತರವಾಗಿ ಕೊಲೆ, ಹಲ್ಲೆ, ದೌರ್ಜನ್ಯ, ಬಹಿಷ್ಕಾರ, ಅತ್ಯಾಚಾರಗಳು ನಡೆಯುತ್ತಲೇ ಇವೆ. ದಲಿತರು ಈ ಸಮಾಜದ ಮನುಷ್ಯರಲ್ಲ ಎನ್ನುವ ರೀತಿಯಲ್ಲಿ ನಡೆಸಿಕೊಳ್ಳಲಾಗುತ್ತಿದೆ. ನೀರು ಮುಟ್ಟಿದ್ದಕ್ಕೆ, ಕಾಫಿ ಕುಡಿದಿದ್ದಕ್ಕೆ, ಸಾರಾಯಿ ಅಂಗಡಿ ಬೇಡ ಎಂದಿದ್ದಕ್ಕೆ ಲೆಕ್ಕವಿಲ್ಲದಷ್ಟು ಬಹಿಷ್ಕಾರ ಮತ್ತು ದೌರ್ಜನ್ಯಗಳನ್ನು ಮಾಡಲಾಗಿದೆ. ಇದೆಲ್ಲವೂ ಸಂವಿಧಾನ ಆಶಯಗಳನ್ನು ಬದಿಗೆ ತಳ್ಳಿವೆ. ಆದುದರಿಂದ ದಲಿತರಲ್ಲಿ ಐಕ್ಯತೆ ಮೂಡಿಸುವುದು ಅನಿವಾರ್ಯವಾಗಿದೆ. ಆದುದರಿಂದ ಸಮಾವೇಶವನ್ನು ಆಯೋಜಿಸಲಾಗಿದೆ ಎಂದರು. 

ದೇಶವನ್ನು ತಲ್ಲಣಗೊಳಿಸಿದ ನಿರ್ಭಯ ಪ್ರಕರಣ, ಹತ್ರಾಸ್‍ನಲ್ಲಿ-ಠಾಕೂರ್ ಜನಾಂಗದವರಿಂದ ನಡೆದ ಅತ್ಯಾಚಾರ ಮತ್ತು ಕೊಲೆ, ಇದನ್ನು ಪ್ರಶ್ನಿಸಿದ ಇಡೀ ಕುಟುಂಬವನ್ನೇ ಸರ್ವನಾಶ ಮಾಡಿದ ಒಬ್ಬ ಜನಪ್ರತಿನಿಧಿ ಶಾಸಕನ ಪ್ರಕರಣ ಇತ್ಯಾದಿ ನಮ್ಮ ಕಣ್ಣ ಮುಂದೆ ಅಚ್ಚಳಿಯದೆ ನಿಂತಿವೆ. ಈ ರೀತಿಯ ಅನೇಕ ದೌರ್ಜನ್ಯಗಳು ನ್ಯಾಯಾಂಗ ಮತ್ತು ಕಾರ್ಯಾಂಗ ನಾಚುವಂತೆ ನಡೆಯುತ್ತಿವೆ. ಇಂತಹ ಪ್ರಕರಣಗಳನ್ನು ಗಮನಿಸಿ ವಿಚಾರ ಮಾಡಿದರೆ ಈ ದೇಶದ ವ್ಯವಸ್ಥೆ ಎಷ್ಟು ಕ್ರೂರವಾಗಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ದಸಂಸ ಹಿರಿಯ ಮುಖಂಡ ಎನ್. ವೆಂಕಟೇಶ್ ಮಾತನಾಡಿ, ಸಂವಿಧಾನವು ಪ್ರಜೆಗಳಿಗೆ ರಕ್ಷಣೆಯನ್ನು ನೀಡಿದರೂ, ದೇಶದಲ್ಲಿ ದಿನನಿತ್ಯ ಒಂದಲ್ಲಾ ಒಂದು ಕಾರಣಕ್ಕೆ ದಲಿತರು ಸೇರಿದಂತೆ ಮಹಿಳೆಯರ ಮೇಲೆ ಹಿಂಸೆಗಳು ನಡೆಯುತ್ತಲೇ ಇವೆ. ಹೀಗಿದ್ದರೂ ಕೇಂದ್ರ ಸರಕಾರವಾಗಲೀ, ರಾಜ್ಯ ಸರಕಾರವಾಗಲೀ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯವನ್ನು ಕೊಡಿಸುತ್ತಿಲ್ಲ. ಬದಲಿಗೆ ದಲಿತರ ಸಂವಿಧಾನಬದ್ಧ ಹಕ್ಕುಗಳಿಗಾಗಿ, ನ್ಯಾಯಕ್ಕಾಗಿ ಹೋರಾಡಿದ ಅನೇಕ ಚಿಂತಕರನ್ನು, ಪ್ರಗತಿಪರ ವಿಚಾರವಂತರನ್ನು ದೇಶದೋಹಿಗಳು ಎಂದು ಬಿಂಬಿಸಿ ಜೈಲಿಗೆ ಹಾಕುವ ಪ್ರವೃತ್ತಿ ಬೆಳೆಯುತ್ತಿದೆ. ಇದರ ವಿರುದ್ಧ ದಲಿತರು ಸೇರಿ ಅನ್ಯಾಯಕ್ಕೆ ಒಳಗಾದವರು ಒಗ್ಗೂಡುವುದು ಅನಿವಾರ್ಯವಾಗಿದೆ ಎಂದು ಕರೆ ನೀಡಿದರು.
 
ರಾಜ್ಯ ಮತ್ತು ಕೇಂದ್ರದಲ್ಲಿರುವ ಬಿಜೆಪಿ ಸರಕಾರಗಳು ದಲಿತರ, ರೈತರ ಶ್ರಮವನ್ನು ಲೆಕ್ಕಿಸದೆ, ಅನ್ನ ನೀಡುವ ರೈತರ ಬೆನ್ನುಮೂಳೆ ಮುರಿದು, ರೈತ ವಿರೋಧಿ ಕಾಯ್ದೆ, ಭೂಸುದಾರಣೆ, ಕೃಷಿ, ಎಪಿಎಂಸಿ, ವಿದ್ಯುತ್ ಕಾಯ್ದೆಗಳಿಗೆ ತಿದ್ದುಪಡಿ ತಂದು ರೈತರನ್ನು ಬಲಿಕೊಡುತ್ತಿವೆ. ಇನ್ನು ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿ ಜನಸಾಮಾನ್ಯರ ಬದುಕು ನಾಶ ಮಾಡುತ್ತಿದ್ದಾರೆ. ಗೋಹತ್ಯೆ ನಿಷೇಧ ಕಾಯ್ದೆ, ಹಿಜಾಬ್, ಹಲಾಲ್ ನಿಷೇಧಿಸಿ, ತಿನ್ನುವ ಆಹಾರಕ್ಕೂ ಕುತ್ತು ತಂದಿವೆ. ಜನರನ್ನು ಕಾಪಾಡಬೇಕಾದ ಸರಕಾರ ಮಕ್ಕಳ ಮನಸ್ಸಿಗೆ ವಿಷ ಬೀಜ ಬಿತ್ತುವಂತಹ ಪಠ್ಯಪುಸ್ತಕ ಪರಿಷ್ಕರಿಸಿ, ಸನಾತನ ಪರಂಪರೆಯ ಹೆಸರಿನಲ್ಲಿ ನೂತನ ಶಿಕ್ಷಣ ನೀತಿ ಜಾರಿಗೊಳಿಸಿ ಜನರ ಬೆಳವಣಿಗೆಗೆ ಕುಂದು ತರುತ್ತಿದ್ದಾರೆ. ಈ ಎಲ್ಲ ವಿಚಾರಗಳ ಬಗ್ಗೆ ಶೋಷಿತರಿಗೆ ಅರಿವು ಮೂಡಿಸಲು ಐಕ್ಯತಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.

-ಮಾವಳ್ಳಿ ಶಂಕರ್, ದಸಂಸದ ರಾಜ್ಯ ಸಂಚಾಲಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News