ಸಾರ್ವಜನಿಕ ಗಣೇಶೋತ್ಸವಕ್ಕೆ ಈ ಬಾರಿ ನಿರ್ಬಂಧವಿಲ್ಲ: ಸಚಿವ ಆರ್.ಅಶೋಕ್

Update: 2022-08-08 17:29 GMT

ಬೆಂಗಳೂರು, ಆ. 8: ‘ಈ ಬಾರಿಯ ಗಣೇಶೋತ್ಸವಕ್ಕೆ ಯಾವುದೇ ನಿರ್ಬಂಧವಿಲ್ಲ. ಕೋವಿಡ್-19 ಸೋಂಕಿನ ಪೂರ್ವದಲ್ಲಿ ಆಚರಿಸಿದ ರೀತಿಯಲ್ಲಿ ಸಾರ್ವಜನಿಕರು ಗಣೇಶೋತ್ಸವ ಆಚರಿಸಲು ಅವಕಾಶ ಕಲ್ಪಿಸಲಾಗುವುದು' ಎಂದು ಕಂದಾಯ ಸಚಿವ ಆರ್.ಅಶೋಕ್  ಸ್ಪಷ್ಟನೆ ನೀಡಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಸಾರ್ವಜನಿಕ ಗಣೇಶೋತ್ಸವಕ್ಕೆ ಯಾವುದೇ ನಿರ್ಬಂಧವಿಲ್ಲದೆ ಆಚರಿಸಲು ಸರಕಾರದಿಂದ ಅನುಮತಿ ನೀಡುವ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಸಮಾಲೋಚನೆ ನಡೆಸಿದ್ದು, ಅವರು ಈ ಬಗ್ಗೆ ಒಪ್ಪಿಗೆ ನೀಡಿದ್ದಾರೆ' ಎಂದು ತಿಳಿಸಿದರು.

‘ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ನಿರ್ಬಂಧ ಹೇರಲಾಗಿತ್ತು. ಜನರ ಆರೋಗ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಕ್ರಮ ಕೈಗೊಳ್ಳಲಾಗಿತ್ತು. ಇದೀಗ ಸರಕಾರದ ಜನ ಸಾಮಾನ್ಯರ ಮನವಿಗೆ ಸ್ಪಂದಿಸಿದ್ದು, ಈ ಬಾರಿ ಯಾವುದೇ ನಿರ್ಬಂಧವಿಲ್ಲದೆ ಗಣೇಶೋತ್ಸವ ಆಚರಣೆಗೆ ಮುಕ್ತ ಅವಕಾಶ ಕಲ್ಪಿಸಲಾಗುವುದು' ಎಂದು ಅಶೋಕ್ ಸ್ಪಷ್ಟಪಡಿಸಿದರು.

ಈದ್ಗಾ ಮೈದಾನಕ್ಕೆ ಅನುಮತಿ ಬೇಕು: ‘ಚಾಮರಾಜಪೇಟೆಯ ಈದ್ಗಾ ಮೈದಾನ ಕಂದಾಯ ಇಲಾಖೆಗೆ ಸೇರಿದ್ದು, ಅಲ್ಲಿ ಯಾವುದೇ ಕಾರ್ಯಕ್ರಮ ನಡೆಸಬೇಕಿದ್ದರೂ ಕಂದಾಯ ಇಲಾಖೆಯ ಅನುಮತಿ ಪಡೆದುಕೊಳ್ಳಬೇಕು. ಆ ಮೈದಾನದಲ್ಲಿ ಧ್ವಜಾರೋಹಣ, ಗಣೇಶೋತ್ಸವ, ಪ್ರಾರ್ಥನೆ ಸೇರಿದಂತೆ ಯಾವುದೇ ಕಾರ್ಯಕ್ರಮ ಮಾಡುವುದಿದ್ದರೂ ಅನುಮತಿ ಕಡ್ಡಾಯ' ಎಂದು ಸಚಿವ ಅಶೋಕ್ ತಿಳಿಸಿದರು.

‘ಈದ್ಗಾ ಮೈದಾನದಲ್ಲಿ ಯಾರು, ಏನೇ ಕಾರ್ಯಕ್ರಮ ಮಾಡುವುದಿದ್ದರೂ ಅನುಮತಿಗಾಗಿ ಇಲಾಖೆಗೆ ಮನವಿ ಸಲ್ಲಿಸಬೇಕು. ಯಾವುದೇ ಮನವಿ ಬಂದರೆ ಇಲಾಖೆ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ. ಈವರೆಗೆ ಯಾರೂ ಮನವಿ ಸಲ್ಲಿಸಿಲ್ಲ. ಈ ಹಿಂದೆ ಬಿಬಿಎಂಪಿಯಿಂದ ಅನುಮತಿ ಪಡೆದುಕೊಳ್ಳುತ್ತಿದ್ದರು. ಇದೀಗ ಕಂದಾಯ ಇಲಾಖೆಯಿಂದ ಅನುಮತಿ ಪಡೆದುಕೊಳ್ಳಬೇಕು' ಎಂದು ಅಶೋಕ್ ವಿವರಣೆ ನೀಡಿದರು.

‘ಚಾಮರಾಜಪೇಟೆ ಈದ್ಗಾ ಮೈದಾನ ನಮಗೆ ಸೇರಿದ್ದು ಎಂದು ಯಾರೂ ಹೇಳಿಕೊಳ್ಳಬಾರದು. ಆ ಮೈದಾನ ಸರಕಾರದ ಸೊತ್ತು. ಯಾವುದೇ ಮನವಿಯನ್ನು ಕಾನೂನು ಪ್ರಕಾರವೇ ಪರಿಶೀಲನೆ ನಡೆಸಲಾಗುತ್ತದೆ. ಯಾರೂ ಯಾವುದೇ ರೀತಿಯ ಗೊಂದಲ ಸೃಷ್ಟಿಸುವುದು ಬೇಡ. ನಮ್ಮ ಸರಕಾರ ಎಲ್ಲರ ಸರಕಾರ. ಆ ಜಾಗ ತಮಗೆ ಸೇರಿದ್ದ ಎಂದು ಹೇಳುವವರು ಆ ಸಂಬಂಧ ದಾಖಲೆಗಳನ್ನು ಸಲ್ಲಿಸಬೇಕೆಂದು ಪಾಲಿಕೆ ಸೂಚಿಸಿತ್ತು. ಆದರೆ, ಯಾರೂ ದಾಖಲೆ ನೀಡಿಲ್ಲ' ಎಂದು ಅಶೋಕ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News