ಸರಕಾರಕ್ಕೆ ಖಾಲಿ ಹುದ್ದೆ ತುಂಬುವ ಮನಸ್ಸಿಲ್ಲ: ಎಸ್.ಆರ್.ಹಿರೇಮಠ

Update: 2022-08-10 15:07 GMT

ಬೆಂಗಳೂರು, ಆ.10: ಆಪರೇಷನ್ ಕಮಲ ಎಂಬ ಅನೈತಿಕ ಮಾರ್ಗದಿಂದ ಅಧಿಕಾರಕ್ಕೆ ಬಂದ ರಾಜ್ಯ ಸರಕಾರಕ್ಕೆ ಖಾಲಿ ಇರುವ ಹುದ್ದೆ ತುಂಬುವ ಮನಸ್ಸಿಲ್ಲ ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ ತಿಳಿಸಿದ್ದಾರೆ. 

ಬುಧವಾರ ನಗರದ ಫ್ರೀಡಂ ಪಾರ್ಕಿನಲ್ಲಿ ಅಖಿಲ ಭಾರತ ನಿರುದ್ಯೋಗಿ ಯುವ ಜನರ ಹೋರಾಟ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪೊಲಿಸ್ ನೇಮಕಾತಿಯಲ್ಲಿ ವಯೋಮಿತಿ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಇಂದು ನಿರುದ್ಯೋಗ ಜಗತ್ತಿನ ದೊಡ್ಡ ಸಮಸ್ಯೆಯಾಗಿದೆ. ಸಮಸ್ಯೆ ನಿವಾರಿಸಬೇಕಿದ್ದ ಸರಕಾರಗಳು ಈ ದೇಶದ ಬಂಡವಾಳಿಗರ ಬೆಳವಣಿಗೆಗೆ ಸಹಾಯ ಮಾಡುತ್ತಿವೆ. ಅದು ಅಲ್ಲದೆ, ಕೋವಿಡ್ ಹಿನ್ನೆಲೆಯಲ್ಲಿ ಹಲವು ವರ್ಷಗಳಿಂದ ನೇಮಕಾತಿ ನಡೆಯದೇ, ವಯೋಮಿತಿ ಮೀರುತ್ತಿರುವುದರಿಂದ ಈ ಬೇಡಿಕೆ ನ್ಯಾಯಯುತವಾಗಿದೆ ಎಂದರು.

ಪಟ್ಟಭದ್ರ ಹಿತಾಸಕ್ತಿಯುಳ್ಳ ರಾಜಕೀಯ ಪಕ್ಷಗಳು ಯುವಕರನ್ನು ಅವರ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಳ್ಳುತ್ತಾರೆ. ಇದಕ್ಕೆ ಯುವಜನ ಬಲಿಯಾಗಬಾರದು. ಆಪರೇಷನ್ ಕಮಲ ಎಂಬ ಅನೈತಿಕ ಮಾರ್ಗದಿಂದ ಅಧಿಕಾರಕ್ಕೆ ಬಂದ ಇವರಿಗೆ ಖಾಲಿ ಇರುವ ಹುದ್ದೆ ತುಂಬುವ ಮನಸ್ಸಿಲ್ಲ ಎಂದು ಟೀಕಿಸಿದರು.

ಎಐಡಿವೈಒ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ ಮಾತನಾಡಿ, ಜೂನ್ ಒಂದಕ್ಕೆ ವಯೋಮಿತಿ ಹೆಚ್ಚಿದವರು 1 ಲಕ್ಷಕ್ಕೂ ಹೆಚ್ಚಿದ್ದಾರೆ. ಸರಕಾರ ಇದನ್ನ ಗಂಭೀರವಾಗಿ ಗಮನಿಸಬೇಕು. ನಾವು ಸರಕಾರಕ್ಕೆ ಭಿಕ್ಷೆ ಬೇಡುವುದು ಬೇಡ, ಸಂಘಟಿತರಾಗಿ ಹೋರಾಟದ ಮೂಲಕ ಗೆಲ್ಲೋಣ ಎಂದು ಹೇಳಿದರು.

ನಿರುದ್ಯೋಗಿ ಯುವಜನರ ಹೋರಾಟ ಸಮಿತಿಯ ಕಾರ್ಯದರ್ಶಿ ಚೆನ್ನಬಸವ ಜಾನೆಕಲ್ ಮಾತನಾಡಿ, ನೆರೆ ರಾಜ್ಯಗಳಲ್ಲಿ ವಯೋಮಿತಿ 30-35 ವರ್ಷವಿದೆ. ಇಂತಹ ಉದಾಹರಣೆಗಳಿದ್ದೂ, ನಮ್ಮ ರಾಜ್ಯ ಸರಕಾರ ದಿವ್ಯ ಮೌನಕ್ಕೆ ಶರಣಾಗಿರುವುದು ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಈ ಪ್ರತಿಭಟನೆಯಲ್ಲಿ ಹೋರಾಟಗಾರರಾದ ದೇವರಾಜ್ ನಾಯಕ್, ಶ್ರೀನಿವಾಸ್, ಸಾಹೇಬಣ್ಣ, ಸಿದ್ದೇಶ್, ಆಂಜನೇಯ, ಮಹೇಶ್, ದಿಲೀಪ್, ಸಿದ್ದಲಿಂಗ, ರವಿ ಲಮಾಣಿ, ರಾಘವೇಂದ್ರ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News