ಬೆಂಗಳೂರು: ಅಂಚೆ ಇಲಾಖೆ ಖಾಸಗೀಕರಣ ವಿರೋಧಿಸಿ ನೌಕರರ ಸಾಂಕೇತಿಕ ಮುಷ್ಕರ

Update: 2022-08-10 15:27 GMT

ಬೆಂಗಳೂರು, ಆ. 10: ಅಂಚೆ ಇಲಾಖೆ ಖಾಸಗೀಕರಣ ನಿಲ್ಲಿಸಿ, ಸ್ಟ್ಯಾಪ್ ಎನ್‍ಪಿಎಸ್-ಓಪಿಎಸ್ ಅನ್ನು ಮರು ಸ್ಥಾಪಿಸುವುದು, 2020ರ ಜನವರಿಯಿಂದ 2021ರ ಜೂನ್‍ವರೆಗೆ ತಡೆಹಿಡಿಯಲಾದ ಡಿಎ/ಡಿಆರ್ ಬಾಕಿ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಕಾರ್ಮಿಕ ಅಂಚೆ ಇಲಾಖೆ ಸಂಘಟನೆಗಳ ಕರೆಯ ಮೇರೆಗೆ ಅಖಿಲ ಭಾರತ ಅಂಚೆ ಇಲಾಖೆಯ ನೌಕರರ ಯೂನಿಯನ್‍ನಿಂದ ಇಂದಿಲ್ಲಿ ಮುಷ್ಕರ ನಡೆಸಲಾಯಿತು.

ಬುಧವಾರ ರಾಜಭವನದ ಬಳಿಯ ಜಿಪಿಒ ಮುಂಭಾಗದಲ್ಲಿ ಅಂಚೆ ಇಲಾಖೆ ನೌಕರರು ಮುಷ್ಕರ ನಡೆಸಿ, ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ಧೋರಣೆ ಸಲ್ಲ. ಅಂಚೆ ಇಲಾಖೆಯನ್ನು ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡಬಾರದು ಎಂದು ಆಗ್ರಹಿಸಿ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ‘ಗ್ರಾಮೀಣ ಪ್ರದೇಶ ಹಾಗೂ ನಗರ ಪ್ರದೇಶವೂ ಸೇರಿದಂತೆ ಜನ ಸಾಮಾನ್ಯರಿಗೆ ಉತ್ತಮ ಸೇವೆ ಒದಗಿಸುತ್ತಿರುವ ಅಂಚೆ ಇಲಾಖೆ ಖಾಸಗೀಕರಣ ಸರಿಯಲ್ಲ' ಎಂದು ಆಕ್ಷೇಪಿಸಿದರು.

‘ಅಂಚೆ ಇಲಾಖೆಯಲ್ಲಿ ಎಲ್ಲ ಕೇಡರ್ ಪರಿಶೀಲನೆ ಜಿಡಿಎಸ್ ಗುತ್ತಿಗೆ ಮತ್ತು ಸಾಂದರ್ಭಿಕ ಕೆಲಸಗಾರರನ್ನು ಖಾಯಂ ಮಾಡಬೇಕು. ಗ್ರಾಮೀಣ ಡಾಕ್ ಸೇವಕರಿಗೆ ನಾಗರಿಕ ಸೇವಕ ಸ್ಥಾನಮಾನ ನೀಡಿ ಅವರ ಸೇವೆಯನ್ನು ಕ್ರಮಬದ್ಧಗೊಳಿಸಬೇಕು. ಎಂಟನೆ ಕೇಂದ್ರ ವೇತನ ಆಯೋಗ ಮತ್ತು ಇತರ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಬೇಕು' ಎಂದು ಒತ್ತಾಯಿಸಿದರು. ಈ ವೇಳೆ ಅಂಚೆ ನೌಕರರ ಸಂಘಟನೆಯ ಮುಖಂಡರಾದ ಕೆ.ಎಂ.ರಾಮಮೂರ್ತಿ, ಕುಮಾರ್, ಮಾದೇಶ್, ನಾರಾಯಣ್, ಎಂ.ಕೆ.ಮನು, ಯೋಗೇಶ್ ಮತ್ತು ಎ.ಎಸ್.ಚಂದ್ರಶೇಖರ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News