ಮನುಸ್ಮೃತಿ ಭಾರತೀಯ ಮಹಿಳೆಯರಿಗೆ ಗೌರವಾನ್ವಿತ ಸ್ಥಾನವನ್ನು ನೀಡಿದೆ: ದಿಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಪ್ರತಿಭಾ ಸಿಂಗ್

Update: 2022-08-11 15:55 GMT
Photo: Twitter/BarandBench

ಹೊಸದಿಲ್ಲಿ,ಆ.11: ಮನುಸ್ಮೃತಿಯಂತಹ ಧರ್ಮಗ್ರಂಥಗಳು ಸಮಾಜದಲ್ಲಿ ಗೌರವಾನ್ವಿತ ಸ್ಥಾನವನ್ನು ನೀಡಿರುವುದರಿಂದ ಭಾರತೀಯ ಮಹಿಳೆಯರು ಆಶೀರ್ವದಿಸಲ್ಪಟ್ಟಿದ್ದಾರೆ ಎಂದು ದಿಲ್ಲಿ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಪ್ರತಿಭಾ ಎಂ.ಸಿಂಗ್ ಹೇಳಿದ್ದಾರೆ. ಮನು ಮುನಿಯಿಂದ ವಿರಚಿತ ಹಿಂದು ಧರ್ಮಗ್ರಂಥ ಮನುಸ್ಮತಿಯು ಇತರ ವಿಷಯಗಳ ಜೊತೆಗೆ ತನ್ನ ಲಿಂಗ ಮತ್ತು ಜಾತಿ ಆಧಾರಿತ ಸಂಹಿತೆಗಳಿಂದಾಗಿ ವ್ಯಾಪಕ ಟೀಕೆಗಳಿಗೆ ಗುರಿಯಾಗಿದೆ.

ಬುಧವಾರ ಇಲ್ಲಿ ಫಿಕ್ಕಿ ಆಯೋಜಿಸಿದ್ದ ಸಮ್ಮೇಳನದ ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಮಾತನಾಡುತ್ತಿದ್ದ ನ್ಯಾ.ಸಿಂಗ್, ‘ಮಹಿಳೆಯರನ್ನು ಹೇಗೆ ಗೌರವಿಸಬೇಕು ಎನ್ನುವುದನ್ನು ಮನುಸ್ಮೃತಿಯು ತೋರಿಸುತ್ತದೆ. ಭಾರತದಲ್ಲಿ ನಾವು ಆಶೀರ್ವದಿತ ಮಹಿಳೆಯರಾಗಿದ್ದೇವೆ ಎಂದು ನಾನು ನಿಜವಾಗಿ ಭಾವಿಸಿದ್ದೇನೆ ಮತ್ತು ನಮ್ಮ ಧರ್ಮಗ್ರಂಥಗಳು ಯಾವಾಗಲೂ ಮಹಿಳೆಯರಿಗೆ ಅತ್ಯಂತ ಗೌರವಪೂರ್ಣ ಸ್ಥಾನವನ್ನು ನೀಡಿರುವುದು ಇದಕ್ಕೆ ಕಾರಣವಾಗಿದೆ. 

ನೀವು ಮಹಿಳೆಯರನ್ನು ಗೌರವಿಸದಿದ್ದರೆ ನೀವು ಮಾಡುವ ಎಲ್ಲ ಪೂಜಾಪಾಠಗಳಿಗೆ ಯಾವುದೇ ಅರ್ಥವಿಲ್ಲ ಎಂದು ಮನುಸ್ಮೃತಿಯೇ ಹೇಳಿದೆ’ ಎಂದು ನುಡಿದರು. ಅವಿಭಕ್ತ ಕುಟುಂಬಗಳಲ್ಲಿ ವಾಸವಿರುವಂತೆ ಉದ್ಯೋಗಸ್ಥ ಮಹಿಳೆಯರಿಗೆ ಸಲಹೆಯನ್ನೂ ನೀಡಿದ ಅವರು,‘‘ಇಂತಹ ಕುಟುಂಬಗಳಲ್ಲಿಯ ಪುರುಷರು ಹಿರಿಯರು ಮತ್ತು ಹೆಚ್ಚು ಬುದ್ಧಿವಂತರಾಗಿರುವುದರಿಂದ ಮಹಿಳೆಯರನ್ನು ಉತ್ತೇಜಿಸುತ್ತಾರೆ. ಅವಿಭಕ್ತ ಕುಟುಂಬಗಳಲ್ಲಿ ವಾಸಿಸುವ ಮೂಲಕ ನಾವು ನಮ್ಮ ಸಂಪನ್ಮೂಲಗಳನ್ನು ಹಂಚಿಕೊಳ್ಳುತ್ತೇವೆ. ‘ನನಗೆ ನನ್ನ ಸಮಯ ಬೇಕು,ನನಗೆ ಇದು ಬೇಕು ’ ಎಂದು ಹೇಳಲು ನಾವು ಸ್ವಾರ್ಥಿಗಳಾಗಬೇಕಿಲ್ಲ. ನೀವು ಕೊಂಚ ಹೆಚ್ಚು ಹೊಂದಾಣಿಕೆ ಮತ್ತು ರಾಜಿ ಮಾಡಿಕೊಳ್ಳಬಹುದು,ಆದರೆ ಅವಿಭಕ್ತ ಕುಟುಂಬ ವ್ಯವಸ್ಥೆಯ ಪ್ರಯೋಜನಗಳು ವಿಭಕ್ತ ಕುಟುಂಬಗಳಿಗಿಂತ ತುಂಬ ಹೆಚ್ಚಾಗಿರುತ್ತವೆ’ ಎಂದು ಹೇಳಿದರು.
         
ಮಹಿಳೆಯರ ಕುರಿತು ಮನುಸ್ಮೃತಿ ಏನು ಹೇಳಿದೆ?

ಮನುಸ್ಮತಿಯ ಕುರಿತು ನ್ಯಾ.ಸಿಂಗ್ ನಿಲುವಿಗೆ ತದ್ವಿರುದ್ಧವಾಗಿ ಈ ಹಿಂದು ಧರ್ಮಗ್ರಂಥವು ಮಹಿಳೆಯರಿಗೆ ಪ್ರತಿಗಾಮಿ ನಡವಳಿಕೆಯನ್ನು ನಿರ್ದೇಶಿಸುತ್ತದೆ. ಆಕ್ಸ್ಫರ್ಡ್ ಯುನಿವರ್ಸಿಟಿ ಪ್ರೆಸ್ ಪ್ರಕಟಿಸಿರುವ ಪ್ಯಾಟ್ರಿಕ್ ಒಲಿವೆಲ್ ಅವರ ಮನುಸ್ಮೃತಿಯ ಅನುವಾದ ‘ದಿ ಲಾ ಕೋಡ್ ಆಫ್ ಮನು’ವಿನಿಂದ ಆಯ್ದ ಕೆಲ ಭಾಗಗಳು ಇಲ್ಲಿವೆ:

ತನ್ನ ಸ್ವಂತ ಮನೆಯಲ್ಲಿ ಕೂಡ ಮಹಿಳೆಯು, ಆಕೆ ಮಗು ಅಥವಾ ಯುವತಿ ಅಥವಾ ವೃದ್ಧೆಯಾಗಿರಲಿ, ಎಂದಿಗೂ ಯಾವುದೇ ಕಾರ್ಯವನ್ನು ಸ್ವತಂತ್ರವಾಗಿ ನಿರ್ವಹಿಸಬಾರದು. ಆಕೆ ಮಗುವಾಗಿ ತನ್ನ ತಂದೆಯ ನಿಯಂತ್ರಣದಲ್ಲಿ, ಪತ್ನಿಯಾಗಿ ತನ್ನ ಪತಿಯ ಅಧೀನದಲ್ಲಿ ಮತ್ತು ಪತಿಯ ನಿಧನಾನಂತರ ತನ್ನ ಮಕ್ಕಳ ಅಧೀನದಲ್ಲಿರಬೇಕು-ಅಧ್ಯಾಯ 5,ಶ್ಲೋಕಗಳು 148,149

ಆತ ಸದ್ಗುಣಗಳನ್ನು ಕಳೆದುಕೊಂಡಿದ್ದರೂ, ಕಾಮಪಿಪಾಸುವಾಗಿದ್ದರೂ ಮತ್ತು ಉತ್ತಮ ಗುಣಗಳಿಂದ ಸಂಪೂರ್ಣವಾಗಿ ವಂಚಿತನಾಗಿದ್ದರೂ ಒಳ್ಳೆಯ ಮಹಿಳೆಯು ಯಾವಾಗಲೂ ತನ್ನ ಪತಿಯನ್ನು ದೇವರಂತೆ ಪೂಜಿಸಬೇಕು-ಅಧ್ಯಾಯ 5,ಶ್ಲೋಕ 154

ಪತ್ನಿ,ಪುತ್ರ ಮತ್ತು ಗುಲಾಮ-ಈ ಎಲ್ಲ ಮೂವರೂ ಆಸ್ತಿಯಿಲ್ಲದವರು ಎಂದು ಸಂಪ್ರದಾಯವು ನಮಗೆ ಹೇಳುತ್ತದೆ. ಅವರು ಏನು ಸಂಪಾದಿಸಿದರೂ ಅದು ಅವರು ಅಧೀನದಲ್ಲಿರುವ ಪುರುಷನ ಆಸ್ತಿಯಾಗುತ್ತದೆ-ಅಧ್ಯಾಯ 8,ಶ್ಲೋಕ 416
           
ಸಾಮಾಜಿಕ ಮಾಧ್ಯಮ ಪ್ರತಿಕ್ರಿಯೆಗಳು

ನ್ಯಾ.ಸಿಂಗ್ ಹೇಳಿಕೆಗಳು ಅಸಂಬದ್ಧ ಎಂದು ಗುರುವಾರ ಸರಣಿ ಟ್ವೀಟ್ಗಳಲ್ಲಿ ಬಣ್ಣಿಸಿರುವ ಇತಿಹಾಸತಜ್ಞೆ ಆಡ್ರೆ ಟ್ರಷ್ಕೆ ಅವರು ಮನುಸ್ಮೃತಿಯ ಆಯ್ದ ಭಾಗಗಳನ್ನು ಉಲ್ಲೇಖಿಸಿ,ಮನು ಮುನಿಯ ಆಲೋಚನೆಗಳನ್ನು ‘ಅಸಮಾನತೆ’ಎಂದು ಒಂದು ಪದದಲ್ಲಿ ಬಣ್ಣಿಸಬಹುದು ಎಂದು ಹೇಳಿದ್ದಾರೆ.

ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್-ಲೆನಿನಿಸ್ಟ್) ಲಿಬರೇಷನ್ ನಾಯಕಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಕವಿತಾ ಕೃಷ್ಣನ್ ಅವರು,ಭಾರತದಲ್ಲಿ ಮಹಿಳೆಯರ ಹಕ್ಕುಗಳು ಪ್ರತಿಭಾ ಸಿಂಗ್ ಅವರಂತಹ ನ್ಯಾಯಾಧೀಶರ ದಯೆಯಲ್ಲಿರುವುದು ಅತ್ಯಂತ ಭಯಾನಕವಾಗಿದೆ ಎಂದು ಟ್ವೀಟಿಸಿದ್ದಾರೆ.

ನ್ಯಾ.ಸಿಂಗ್ ಮನುಸ್ಮೃತಿಯನ್ನು ಸಂಪೂರ್ಣವಾಗಿ ಓದಿರುವ ಬಗ್ಗೆ ತನಗೆ ಶಂಕೆಯಿದೆ ಎಂದು ನ್ಯಾಯವಾದಿ ಕರುಣಾ ನಂದಿ ಟ್ವೀಟಿಸಿದ್ದಾರೆ. ಸಿಂಗ್ ಅವರ ಅಭಿಪ್ರಾಯಗಳಿಗೆ ಇತರ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರೂ ಟ್ವಿಟರ್ನಲ್ಲಿ ಆಕ್ಷೇಪಗಳನ್ನು ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News